Sunday, January 6, 2013

ದಿಲ್ಲಿ ಅತ್ಯಾಚಾರ-ಕೊಲೆ ಪ್ರಕರಣ: ಪೊಲೀಸರ ಬೇಜವಾಬ್ದಾರಿ: ವ್ಯಾಪಕ ಆಕ್ರೋಶ



ಜನವರಿ -06-2013

ಹೊಸದಿಲ್ಲಿ: ದಿಲ್ಲಿ ಸಾಮೂಹಿಕ ಅತ್ಯಾಚಾರ ನಡೆದ ದುರದೃಷ್ಟಕರ ರಾತ್ರಿಯಂದು ಸಂತ್ರಸ್ತೆ ಹಾಗೂ ಆಕೆ ಮಿತ್ರ ಬದುಕಿಗಾಗಿ ಹೋರಾಡುತ್ತಿದ್ದರೆ, ಪ್ರಕರಣ ನಡೆದ ಠಾಣಾ ವ್ಯಾಪ್ತಿಯ ಬಗ್ಗೆ ಚರ್ಚಿಸುತ್ತ ಕಾಲಕಳೆದ ಪೊಲೀಸರ ವಿರುದ್ಧ ಪ್ರತಿಭಟನಕಾರರಿಂದು ವಾಗ್ದಾಳಿ ನಡೆಸಿದ್ದಾರೆ.
ದಕ್ಷಿಣ ದಿಲ್ಲಿಯಲ್ಲಿ ಬರ್ಬರ ಘಟನೆ ನಡೆದ ವೇಳೆ ಅಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿರುವ ಅವರು, ಇದು ಸುದೀರ್ಘ ಕಾಲದಿಂದ ಗಮನಕ್ಕೆ ಬರದ ದಿಲ್ಲಿ ಪೊಲೀಸರ ಅಭ್ಯಾಸವನ್ನು ಬಹಿರಂಗಪಡಿಸಿದೆ ಎಂದಿದ್ದಾರೆ.
 
ದಾಖಲೆಯನ್ನು ನಿರ್ದಿಷ್ಟ ಪೊಲೀಸ್ ಠಾಣೆಯ ಅಡಿಯಲ್ಲೇ ನೋಂದಾಯಿಸಬೇಕೆಂದು ಕಾನೂನು ಹೇಳುವುದಿಲ್ಲ. ಆದುದರಿಂದ ಸ್ಥಳಕ್ಕೆ ಆಗಮಿಸಿದ ಪೊಲೀಸರು ತಾವಾಗಿಯೇ ಎಫ್‌ಐಆರ್ ದಾಖಲಿಸುವುದು ಸಾಧ್ಯವಿತ್ತು ಎಂದು ದಿಲ್ಲಿ ಪೊಲೀಸ್‌ನಲ್ಲಿ ದಶಕಗಳ ಕಾಲ ಕೆಲಸ ಮಾಡಿದ ಮಾಜಿ ಐಪಿಎಸ್ ಅಧಿಕಾರಿಣಿ ಕಿರಣ್ ಬೇಡಿ ಅಭಿಪ್ರಾಯಿಸಿದ್ದಾರೆ.
ಇಂತಹದು ಪ್ರತಿದಿನ ನಡೆಯುತ್ತಿದೆ. ಆದುದರಿಂದಲೇ ಜನರು ಪೊಲೀಸರ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಈ ಅಭ್ಯಾಸ ದೀರ್ಘ ಸಮಯದಿಂದಿತ್ತು. ಈಗ ಅವರು ಸಿಕ್ಕಿ ಬಿದ್ದಿದ್ದಾರೆ. ಪೊಲೀಸರು ಎಫ್‌ಐಆರ್ ದಾಖಲಿಸದಂತೆ ಯಾವ ಕಾಯ್ದೆಯೂ ತಡೆಯುವುದಿಲ್ಲ. ಒಂದು ಠಾಣೆಯಲ್ಲಿ ಅದನ್ನು ದಾಖಲಿಸಿ, ಇನ್ನೊಂದಕ್ಕೆ ವರ್ಗಾಯಿಸುವುದಕ್ಕೆ ಸಾಧ್ಯವಿದೆ ಎಂದವರು ತಿಳಿಸಿದ್ದಾರೆ.
ಘಟನೆ ನಡೆದ 45 ನಿಮಿಷಗಳ ಬಳಿಕ ಮೂರು ಪೊಲೀಸ್ ನಿಯಂತ್ರಣ ಕೊಠಡಿಗಳ ವಾಹನಗಳು ಬಂದಿದ್ದವು. ಘಟನೆ ಯಾವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆಯೆಂಬ ಚರ್ಚೆಯಲ್ಲಿ ಸಮಯ ಕಳೆದರೆಂದು ಸಂತ್ರಸ್ತೆಯ ಸ್ನೇಹಿತ ನೀಡಿದ ಹೇಳಿಕೆಯ ಕುರಿತು ಬೇಡಿ ಪ್ರತಿಕ್ರಿಯಿಸಿದ್ದಾರೆ.
ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಕರ್ತವ್ಯದಲ್ಲಿದ್ದ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಮಮತಾ ಶರ್ಮಾ ಒತ್ತಾಯಿಸಿದ್ದಾರೆ.
ಇಬ್ಬರು ವ್ಯಕ್ತಿಗಳು ನೆಲದಲ್ಲಿ ಬಿದ್ದಿದ್ದರು. ಮಾನವೀಯ ನೆಲೆಯಲ್ಲಾದರೂ ಅವರನ್ನು ಆಸ್ಪತ್ರೆಗೆ ಒಯ್ಯಬೇಕಿತ್ತು. ಆದರೆ ಪೊಲೀಸರು ಹಾಗೆ ಮಾಡಲಿಲ್ಲ. ಅಂದು ಕರ್ತವ್ಯದಲ್ಲಿದ್ದ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಿ ಮೊಕದ್ದಮೆ ಹೂಡಬೇಕು ಎಂದವರು ವಾಗ್ದಾಳಿ ನಡೆಸಿದ್ದಾರೆ.
ಪ್ರಕರಣದಲ್ಲಿ ಹೊಣೆ ನಿಗದಿಪಡಿಸದೆ ಪೊಲೀಸ್ ಆಯುಕ್ತ ನೀರಜ್ ಕುಮಾರ್ ತಪ್ಪೆಸಗಿದ್ದಾರೆಂದು ಖ್ಯಾತ ವಕೀಲ ಹಾಗೂ ಅಮಾನತುಗೊಂಡಿರುವ ಬಿಜೆಪಿ ಸಂಸದ ರಾಮ್ ಜೇಠ್ಮಲಾನಿ ಆರೋಪಿಸಿದ್ದಾರೆ.

No comments:

Post a Comment