Friday, January 4, 2013

ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಆತ್ಮಹತ್ಯೆ, ಕೊಲೆಗಳಿಗೆ ಕಾರಣ;ಮುಂಬೈ ಪೊಲೀಸ್ ಆಯುಕ್ತರ ಆಘಾತಕಾರಿ ಹೇಳಿಕೆ



 ಜನವರಿ -04-2013

ಮುಂಬೈ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ವಿಶೇಷವಾಗಿ ದುರ್ಬಲರಾಗಿರುವು ದರಿಂದ ಇಂಗ್ಲಿಷ್ ಮಾಧ್ಯಮದ ಶಿಕ್ಷಣಕ್ಕೂ ಮತ್ತು ಆತ್ಮಹತ್ಯೆ ಹಾಗೂ ಕೊಲೆಗಳಿಗೂ ನೇರವಾಗಿ ಸಂಪರ್ಕವಿದೆ ಎಂದು ಮುಂಬೈ ಪೊಲೀಸ್ ಆಯುಕ್ತ ಸತ್ಯಪಾಲ್ ಸಿಂಗ್ ಆಘಾತಕಾರಿ ಹೇಳಿಕೆ ನೀಡಿದ್ದಾರೆ.
‘ಮುಂಬೈನಲ್ಲಿ 150 ಕೊಲೆಗಳು ನಡೆದರೆ, ಅದರ ಎಂಟು ಪಟ್ಟು ಆತ್ಮಹತ್ಯೆ ಪ್ರಕರಣಗಳು ದಾಖಲಾಗುತ್ತವೆ. ಇದರಲ್ಲಿ ಭಾಗಿಯಾದವರೆಲ್ಲರೂ ಸುಶಿಕ್ಷಿತರು. ಒಬ್ಬ ಅವಿದ್ಯಾವಂತ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನಾನು ನೋಡಿಲ್ಲ. ನಾನು ಪುಣೆಯ ಪೊಲೀಸ್ ಆಯುಕ್ತನಾಗಿದ್ದಾಗಲೂ ಈ ಕುರಿತು ಅಧ್ಯಯನ ನಡೆಸಿದ್ದೇನೆ. ಐಟಿ ವೃತ್ತಿಪರರು ಮತ್ತು ಎಂಜಿನಿಯರ್‌ಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ’ ಎಂದು ಭಾರತ್ ಮರ್ಚಂಟ್ಸ್ ಚೇಂಬರ್‌ನ 54ನೆ ಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು.
ಇಂಗ್ಲಿಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರೇ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಂಸ್ಕೃತ ಮತ್ತು ಇತರೆ ಭಾಷೆಗಳಲ್ಲಿ ವ್ಯಾಸಂಗ ಮಾಡಿದವರು ಆತ್ಮಹತ್ಯೆ ಮಾಡಿಕೊಂಡ ಕುರಿತು ನಾನು ಕೇಳಿಲ್ಲ. ಇಂದು ಎಲ್ಲಾ ವರ್ಗದ ಜನರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಹೆಚ್ಚಾಗಿ ಕಳುಹಿಸುತ್ತಿರುವುದು ಎಲ್ಲರಿಗೂ ತಿಳಿದಿದೆ ಎಂದರು.
ಶಿಕ್ಷಣ ವ್ಯವಸ್ಥೆಯಲ್ಲಿನ ದೋಷವೇ ಮುಂಬೈ ಮತ್ತು ದಿಲ್ಲಿಯಂತಹ ನಗರಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವುದಕ್ಕೆ ಕಾರಣವಾಗಿದೆ ಎಂದು ಅವರು ದೂಷಿಸಿದರು.
ದಿಲ್ಲಿ ಅಥವಾ ಮುಂಬೈನಲ್ಲಿ ನಡೆದ ಘಟನೆ ಸಂಸ್ಕೃತಿ ಇಲ್ಲದವರ ಕೆಲಸ. ಇಂದು ನಮ್ಮ ಶಾಲಾ ಕಾಲೇಜುಗಳಲ್ಲಿ ಜೀವನ ವೌಲ್ಯದ ಶಿಕ್ಷಣವನ್ನು ಕಲಿಸಿಕೊಡುವುದಿಲ್ಲ. ಇದೇ ಇದಕ್ಕೆಲ್ಲ ಕಾರಣವಾಗಿದೆ ಎಂದು ಅವರು ಆರೋಪಿಸಿದರು.
ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಅಧ್ಯಯನ ಮಾಡುವ ಅಗತ್ಯವಿದೆ. ಇಲ್ಲದಿದ್ದರೆ ಈಗಿನ ವ್ಯವಸ್ಥೆಯೇ ಮುಂದುವರಿದು ಮತ್ತಷ್ಟು ಅನಾಹುತಗಳಾಗಲಿವೆ ಎಂದು ಎಚ್ಚರಿಸಿದರು.

No comments:

Post a Comment