Friday, January 4, 2013

ಗ್ರಾಮೀಣ ಮಹಿಳೆಯರಿಗೆ ಬಿಪಿಓ ಉದ್ಯೋಗ; ಅಜಯ್ ಸಾಧನೆ


ಗ್ರಾಮೀಣ ಮಹಿಳೆಯರಿಗೆ ಬಿಪಿಓ ಉದ್ಯೋಗ; ಅಜಯ್ ಸಾಧನೆ ಜನವರಿ -04-2013

ಹರ್ಯಾಣ, ಆಂಧ್ರಪ್ರದೇಶ ಹಾಗೂ ರಾಜಸ್ಥಾನದ ಕುಗ್ರಾಮಗಳಲ್ಲಿ ವಾಸಿಸುತ್ತಿರುವ ನೂರಾರು ಮಹಿಳೆಯರು ಇಂದು ಬಿಪಿಓ ಉದ್ಯೋಗಿಗಳಾಗಿ ದುಡಿಯುತ್ತಿದ್ದು, ಆರ್ಥಿಕ ಸ್ವಾವಲಂಬನೆಯನ್ನು ಪಡೆದಿದ್ದಾರೆ. ಅಮೆರಿಕದ ಪ್ರತಿಷ್ಠಿತ ಬ್ಯಾಂಕ್‌ಗಳಲ್ಲೊಂದಾದ ಸಿಟಿಬ್ಯಾಂಕ್‌ನ ಮಾಜಿ ಉದ್ಯೋಗಿಯಾದ ಅಜಯ್ ತ್ರಿವೇದಿಯವರ ಪ್ರಯತ್ನದಿಂದಾಗಿ ಇಂದು ಅವರ ಬದುಕಿನಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿದೆ.
  
ಸಿಟಿಬ್ಯಾಂಕ್‌ನಲ್ಲಿ ಕೈತುಂಬಾ ಸಂಬಳ ನೀಡುವ ಹುದ್ದೆಯಲ್ಲಿದ್ದ ಅಜಯ್, ಅಮೆರಿಕದಲ್ಲಿನ ಯಾಂತ್ರಿಕ ಜೀವನಶೈಲಿಯಿಂದ ಬೇಸತ್ತುಗೊಂಡಿದ್ದರು. ನಿಧಾನವಾಗಿ ಅವರು ಅಧ್ಯಾತ್ಮದೆಡೆಗೆ ಆಕರ್ಷಿತರಾದರು. ಕೊನೆಗೆ ಉದ್ಯೋಗಕ್ಕೆ ರಾಜೀನಾಮೆ ನೀಡಿದ ಅವರು ಭಾರತಕ್ಕೆ ವಾಪಸಾದರು. ಹಿಮಾಲಯದಲ್ಲಿ ಅಲೆದಾಡುತ್ತಾ ತನಗೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡಬಲ್ಲ ಗುರುವಿಗಾಗಿ ಅರಸತೊಡಗಿದರು.ಈ ಸಂದರ್ಭದಲ್ಲಿ ಅವರಿಗೆ ಭಾರತದ ಗ್ರಾಮೀಣ ಪ್ರದೇಶಗಳಲ್ಲಿನ ಮಹಿಳೆಯರ ಧಾರುಣ ಹಾಗೂ ಬಡತನದ ಬದುಕಿನ ಪರಿಚಯ ಅವರಿಗಾಗತೊಡಗಿತು. ಕೊನೆಗೆ ಅವರು ಅಧ್ಯಾತ್ಮ ಜ್ಞಾನದ ಅನ್ವೇಷಣೆಯನ್ನು ಕೈಬಿಟ್ಟು ಗ್ರಾಮೀಣ ಜನತೆಯ ಬದುಕಿಗೆ ಬೆಳಕಾಗಲು ನಿರ್ಧರಿಸಿದರು. ಗ್ರಾಮೀಣ ಭಾರತದ ವೌಲ್ಯ ಸಂಚಯನ (ಹರ್ವ) ಎಂಬ ಬಿಪಿಓ ಸಂಸ್ಥೆಯನ್ನು ಸ್ಥಾಪಿಸಿದ ಅವರು, ಅದರಲ್ಲಿ ನೂರಾರು ಗ್ರಾಮೀಣ ಮಹಿಳೆಯರಿಗೆ ಉದ್ಯೋಗಗಳನ್ನು ನೀಡಿದ್ದಾರೆ.

‘ಹರ್ವ’ ಬಿಪಿಓ ಸಂಸ್ಥೆಯಲ್ಲಿ ಈಗ ಸುಮಾರು ಒಂದು ಸಾವಿರ ಮಹಿಳೆಯರು ದುಡಿಯುತ್ತಿದ್ದು, ಅವರಲ್ಲಿ ಹೆಚ್ಚಿನವರು ಹೈಸ್ಕೂಲ್ ಹಂತದಲ್ಲೇ ಶಿಕ್ಷಣವನ್ನು ನಿಲ್ಲಿಸಿದವರಾಗಿದ್ದಾರೆ.ಇಂದು ಈ ಮಹಿಳೆಯರು ಬಿಪಿಓ ಉದ್ಯೋಗಕ್ಕೆ ಬೇಕಾದ ಎಲ್ಲ ಪರಿಣತಿಯನ್ನು ಪಡೆದಿದ್ದಾರೆ ಹಾಗೂ ಕಂಪ್ಯೂಟರ್‌ಗಳನ್ನು ಲೀಲಾಜಾಲವಾಗಿ ನಿರ್ವ ಹಿಸುತ್ತಾರೆ.


ರಾಜ್‌ಘರ್‌ನಲ್ಲಿ ಮುಖ್ಯ ಕಾರ್ಯಾಲಯವನ್ನು ಹೊಂದಿರುವ ಹರ್ವ ಬಿಪಿಓ ಸಂಸ್ಥೆಯು ವೈದ್ಯಕೀಯ ಪ್ರತಿಲಿಪಿ (ಮೆಡಿಕಲ್ ಟ್ರಾನ್ಸ್‌ಸ್ಕ್ರಿಪ್ಷನ್), ಸಾಮಾಜಿಕ ಸಂವಹನದ ಮಾಧ್ಯಮಗಳ ಮೇಲೆ ನಿಗಾವಿರಿಸುವ ಹಾಗೂ ಪ್ರಾದೇಶಿಕ ಭಾಷೆಗಳಲ್ಲಿ ಧ್ವನಿ ಸೇವೆಗಳನ್ನು ನೀಡುವ ಕೆಲಸಗಳಲ್ಲಿ ಅತ್ಯುತ್ತಮವಾದ ಪರಿಣತಿಯನ್ನು ಪಡೆದಿದೆ.
 
ಅಜಯ್ ಈ ಮಹಿಳೆಯರನ್ನು ಕೆಲಸದಲ್ಲಿ ತೊಡಗಿಸುವ ಮೊದಲು ಅವರಿಗೆ 3-4 ತಿಂಗಳವರೆಗೆ ಉತ್ಕೃಷ್ಟ ಮಟ್ಟದ ತರಬೇತಿ ನೀಡುತ್ತಾರೆ. ಉದ್ಯೋಗಕ್ಕೆ ಸೇರಿಸಿಕೊಂಡ ಬಳಿಕ ಈ ಮಹಿಳೆಯರ ಪ್ರಾವೀಣ್ಯತೆ ಹಾಗೂ ಕಚೇರಿಯಲ್ಲಿ ಅವರು ದುಡಿಯುವ ತಾಸುಗಳ ಪ್ರಮಾಣಕ್ಕೆ ಅನುಗುಣವಾಗಿ ಅವರ ವೇತನವನ್ನು ನಿರ್ಧರಿಸಲಾಗುತ್ತದೆ. ಏನಿಲ್ಲವೆಂದರೂ ಇಲ್ಲಿ ದುಡಿಯುವ ಮಹಿಳೆಯರು 3500 ರೂ.ಗಳಿಂದ 8500ರೂ.ವರೆಗೆ ವೇತನ ಪಡೆಯುತ್ತಾರೆ.
 
ಗ್ರಾಮೀಣ ಮಹಿಳೆಯರಲ್ಲಿ ಸ್ವಾವಲಂಬನೆಯನ್ನು ಬೋಧಿಸುವ ಹರ್ವ ಸಂಸ್ಥೆಯ ಆಶಯಕ್ಕೆ ಅಮೆರಿಕದಲ್ಲೂ ಮನ್ನಣೆ ದೊರೆಯತೊಡಗಿದೆ. ಅಲ್ಲಿನ ಬಹುರಾಷ್ಟ್ರೀಯ ಕಂಪೆನಿಯೊಂದು ಹರ್ವಕ್ಕೆ ಕೊಡಮಾಡಿರುವ ಪ್ರಾಜೆಕ್ಟ್‌ನಿಂದಾಗಿ ಸುಮಾರು 100 ಮಹಿಳೆ ಯರಿಗೆ ಉದ್ಯೋಗ ದೊರೆಯಲಿದೆ. ‘‘ ಒಂದು ಹಂತದಲ್ಲಿ ನಮ್ಮ ಕೇವಲ 11 ಬಿಪಿಓ ಶಾಖೆಗಳಿದ್ದವು. ಆದರೆ ಆಡಳಿತ ನಿರ್ವಹಣೆಯ ಸಮಸ್ಯೆಯಿಂದಾಗಿ ಈಗ ನಾಲ್ಕು ಶಾಖೆಗಳನ್ನು ಮುಚ್ಚಲಾಗಿದೆ’’ ಎಂದು ಅಜಯ್ ಹೇಳುತ್ತಾರೆ. ಸದ್ಯದಲ್ಲೇ ಅವರು ರಾಜಸ್ಥಾನದ ರಾಜ್‌ಘರ್‌ನಲ್ಲೂ ಬಿಪಿಓ ಶಾಖೆಯನ್ನು ತೆರೆಯಲಿದ್ದಾರೆ.
ಲಭ್ಯವಿರುವ ಕೆಲಸಗಳಿಗೆ ಅನುಗುಣವಾಗಿ ಬಿಪಿಓ ಉದ್ಯೋಗಿಗಳ ಸಂಖ್ಯೆಯಲ್ಲಿ ಏರಿಳಿತಗಳಾಗುತ್ತವೆ. ಕೆಲಸದ ಹೊರೆ ಅತ್ಯಧಿಕ ಪ್ರಮಾಣದಲ್ಲಿದ್ದರೆ, ಹರ್ವ ಸಂಸ್ಥೆಯು ಸುಮಾರು 400 ಮಹಿಳೆಯರಿಗೆ ಏಕಕಾಲದಲ್ಲಿ ಉದ್ಯೋಗ ನೀಡುತ್ತದೆ.ಅಜಯ್ ತನ್ನ ಚೊಚ್ಚಲ ಬಿಪಿಓ ಘಟಕವನ್ನು ಭಿವಂಡಿಯ ರಾಜಸ್ಥಾನದಲ್ಲಿ ಆರಂಭಿಸಿದ್ದರು.
  
ಕೃಷಿ ಕ್ಷೇತ್ರದಲ್ಲೂ ಸುಧಾರಣೆಯನ್ನು ತರಲು ಅಜಯ್ ಪ್ರಯತ್ನಿಸಿದ್ದಾರೆ. ಆದಾಯ ಹೆಚ್ಚಿಸಲು ಮಿಶ್ರಬೆಳೆಗಳನ್ನು ಬೆಳೆಯುವಂತೆ ಅವರು ರೈತರನ್ನು ಹುರಿದುಂಬಿಸುತ್ತಿದ್ದಾರೆ. ಯಾವ ಪ್ರದೇಶದಲ್ಲಿ ಯಾವ ಬೆಳೆಯನ್ನು ಬೆಳೆದರೆ ಉತ್ತಮವೆಂಬ ಬಗ್ಗೆಯೂ ಅವರು ರೈತರಲ್ಲಿ ಅರಿವು ಮೂಡಿಸುತ್ತಿದ್ದಾರೆ.
 
ಸಮರ್ಪಕವಾದ ನೀರಾವರಿ ವಿಧಾನಗಳ ಬಳಕೆಯ ಬಗ್ಗೆಯೂ ಅವರು ರೈತರಿಗೆ ಸಲಹೆ ನೀಡುತ್ತಿದ್ದಾರೆ. ಉತ್ತರಖಂಡದ ಪ್ರದೇಶ ವೊಂದರಲ್ಲಿ ನೀಲಗಿರಿ ಮರಗಳನ್ನು ಬೆಳೆಯುತ್ತಿದ್ದ ಕೃಷಿಕರಿಗೆ ಮಾವಿನ ಕೃಷಿಯಲ್ಲಿ ತೊಡಗುವಂತೆ ಅವರು ಸಲಹೆ ನೀಡಿದ್ದರು. ನೀಲಗಿರಿ ಮರಗಳು ಅಗಾಧಪ್ರಮಾಣದ ಅಂತರ್ಜಲವನ್ನು ಹೀರುತ್ತವೆ. ಹೀಗಾಗಿ ಅಲ್ಲಿ ಮಾವಿನ ಬೆಳೆ ಹೆಚ್ಚು ಯೋಗ್ಯವೆಂದು ಅವರು ರೈತರಿಗೆ ತಿಳಿಹೇಳಿದ್ದರು.
 
ಅಜಯ್ ರಾಜಸ್ತಾನದ ಕೆಲವೆಡೆ ರೈತರನ್ನು ಒಗ್ಗೂಡಿಸಿ ಅವರನ್ನು ಸಾಮುದಾಯಿಕ ಕೃಷಿಯಲ್ಲಿ ತೊಡಗಿಸಿದ್ದಾರೆ. ಗ್ರಾಮಾಂತರ ವಿದ್ಯಾರ್ಥಿ ಗಳಿಗಾಗಿ ಸಹಾಯ ಕೇಂದ್ರಗಳನ್ನು ಕೂಡಾ ತೆರೆದಿದ್ದಾರೆ

No comments:

Post a Comment