Tuesday, January 8, 2013

ದಿಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಸಂತ್ರಸ್ತ ಯುವತಿಯೇ ಕಾರಣ: ಆಧ್ಯಾತ್ಮಿಕ ಗುರು ಆಸಾರಾಂ ವಿವಾದಾತ್ಮಕ ಹೇಳಿಕೆ



 ಜನವರಿ -08-2013

ಹೊಸದಿಲ್ಲಿ: ಕಳೆದ ಡಿ.16ರಂದು ದಿಲ್ಲಿಯಲ್ಲಿ ನಡೆದ ಘೋರವಾದ ಸಾಮೂಹಿಕ ಅತ್ಯಾಚಾರಕ್ಕೆ ಸಂತ್ರಸ್ತ ಯುವತಿಯೇ ಜವಾಬ್ದಾರಿಯಾಗಿದ್ದಾಳೆ ಎನ್ನುವ ಮೂಲಕ ಆಧ್ಯಾತ್ಮಿಕ ಗುರು ಎಂದು ಕರೆಸಿಕೊಂಡಿರುವ ಆಸಾರಾಂ ಬಾಪು ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಕೇವಲ 5-6 ಜನರು ಮಾತ್ರ ಅಪರಾಧಿಗಳಲ್ಲ. ಅತ್ಯಾಚಾರಿಗಳಷ್ಟೇ ಸಂತ್ರಸ್ತ ಯುವತಿಯೂ ತಪ್ಪಿತಸ್ಥಳು. ಅಪರಾಧಿಗಳನ್ನು ಆಕೆ ಸಹೋದರರೇ ಎಂದು ಕರೆದು ತನ್ನ ಮೇಲೆ ಇಂತಹ ಕೃತ್ಯವೆಸಗದಂತೆ ಬೇಡಿಕೊಂಡು ಆ ಕೃತ್ಯವನ್ನು ತಡೆಯಬಹುದಿತ್ತು. ಇದು ಆಕೆಯ ಗೌರವ ಮತ್ತು ಜೀವನವನ್ನು ರಕ್ಷಿಸುತ್ತಿತ್ತು. ಕೇವಲ ಒಂದು ಕೈಯಿಂದ ಚಪ್ಪಾಳೆ ತಟ್ಟಬಹುದು ಎಂದು ನಾನು ಭಾವಿಸಿಲ್ಲ ಎಂದಿದ್ದಾರೆ.
ಸ್ವಯಂಘೋಷಿತ ದೇವ ಮಾನವ ಆಸಾರಾಂ, ಅತ್ಯಾಚಾರಿಗಳಿಗೆ ಉಗ್ರ ಶಿಕ್ಷೆ ನೀಡುವುದಕ್ಕೆ ತನ್ನ ವಿರೋಧವಿದ್ದು, ಕಾನೂನು ದುರ್ಬಳಕೆಯಾಗುವ ಸಾಧ್ಯತೆಗಳಿವೆ ಎಂದಿದ್ದಾರೆಂದು ಮಾಧ್ಯಮ ವರದಿಗಳು ಹೇಳಿವೆ.
ಇಂತಹ ಕಾನೂನುಗಳು ದುರ್ಬಳಕೆಯಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ವರದಕ್ಷಿಣೆ ಕಾಯ್ದೆಯ ದುರ್ಬಳಕೆ ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಅವರು ಹೇಳಿದ್ದಾರೆ.
23 ವರ್ಷದ ಸಂತ್ರಸ್ತ ಯುವತಿಯು ಘೋರ ಘಟನೆಯ 13 ದಿನಗಳ ನಂತರ ಸಿಂಗಾಪುರದ ಆಸ್ಪತ್ರೆಯಲ್ಲಿ ಮೃತಪಟ್ಟ ಬಳಿಕ ಇಡೀ ದೇಶ ಶೋಕ ವ್ಯಕ್ತಪಡಿಸುತ್ತಾ, ಅತ್ಯಾಚಾರಿಗಳಿಗೆ ಅತ್ಯಂತ ಉಗ್ರವಾದ ಶಿಕ್ಷೆ ನೀಡಬೇಕೆಂದು ಕಾನೂನು ತಿದ್ದುಪಡಿಗೆ ಒತ್ತಾಯಿಸುತ್ತಿರುವ ಸಂದರ್ಭದಲ್ಲಿ ಆಸಾರಾಂ ಬಾಪುನ ಈ ಹೇಳಿಕೆ ಹೊಸ ವಿವಾದಕ್ಕೆ ಕಾರಣವಾಗಿದೆ.

No comments:

Post a Comment