Tuesday, January 22, 2013

ವಿದೇಶಿ ಉಗ್ರರ ಡಾರ್ಲಿಂಗ್ ಯಾರು?


- ಜನವರಿ -22-2013

ಭಾರತ ತನ್ನ ಸೆರಗಲ್ಲೇ ಕೆಂಡವನ್ನು ಕಟ್ಟಿ ಕೊಂಡು, ಸುಟ್ಟ ವಾಸನೆ ಎಲ್ಲಿಂದ ಬರುತ್ತಿದೆ ಎಂದು ಹುಡುಕಾಡುವುದಕ್ಕೆ ತೊಡಗಿ ದೆಯೇ? ಒಂದೆಡೆ ಬೆಂಕಿಯನ್ನು ಆರಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎನ್ನುತ್ತಿದೆ ಈ ದೇಶದ ಭಯೋತ್ಪಾದನಾ ನಿಗ್ರಹ ದಳ, ಹಾಗೂ ಪೊಲೀಸರು. ಇದರ ಫಲವಾಗಿ ಮುಸ್ಲಿಮ್ ನಾಮಧೇಯರೆನಿಸಿಕೊಂಡವರೆಲ್ಲ  ಭಯೋತ್ಪಾದನೆಯ ಹಣೆ ಪಟ್ಟಿ ಧರಿಸಿ ಕೊಂಡು ಜೈಲಿನಲ್ಲಿದ್ದಾರೆ. ಮಗದೊಂದೆಡೆ ದೇಶದ ಸೆರಗು ಯಾವುದೇ ಸದ್ದಿಲ್ಲದಂತೆ ಸುಡುತ್ತಾ ಬರುತ್ತಿದೆ. ದೇಶಭಕ್ತರ ವೇಷ ದಲ್ಲಿರುವ ಕೆಲವು ಸಂಘಟನೆಗಳನ್ನು ನಮ್ಮ ಸರಕಾರ ಅನಿವಾರ್ಯವಾಗಿ ಕೆಂಡದಂತೆ ಕಟ್ಟಿಕೊಂಡ ಪರಿಣಾಮವನ್ನು ನಾವು ಅನುಭವಿಸುತ್ತಾ ಬರುತ್ತಿದ್ದೇವೆ. ಸ್ವತಃ ಗೃಹ ಸಚಿವರೇ, ಇಂತಹ ಸಂಘಟನೆಗಳು ಭಯೋತ್ಪಾದನಾ ಶಿಬಿರಗಳನ್ನು ನಡೆಸುತ್ತಿವೆ ಎಂದು ಬಹಿರಂಗವಾಗಿ ಹೇಳುತ್ತಾರೆ. ಆದರೆ ಆ ಸಂಘಟನೆಗಳ ಮೇಲೆ ನಿಷೇಧವನ್ನು ಹೇರುವ ಧೈರ್ಯ ತೋರದೆ, ಆ ಸಂಘಟನೆಗಳಿಗೆ ಮಣಿದಂತಾಡುತ್ತಾರೆ.ಈ ದ್ವಂದ್ವವೇ ಇಂದು ದೇಶದ ಪಾಲಿಗೆ ಭಯೋತ್ಪಾದನೆಯನ್ನು ಒಂದು ಬೃಹತ್ ಸವಾಲಿನ ರೂಪದಲ್ಲಿ  ತಂದು ನಿಲ್ಲಿಸಿದೆ.
ಈ ದೇಶ ಎಂತಹ ಅಸಹಾಯಕ ಸ್ಥಿತಿಯಲ್ಲಿದೆಯೆಂದರೆ, ಗೃಹ ಸಚಿವರ ಬಾಯಿ ಯಿಂದಲೇ ಒಂದು ಸಂಘಟನೆ ಭಯೋತ್ಪಾದನಾ ಶಿಬಿರಗಳನ್ನು ನಡೆಸುತ್ತಿದೆ ಎಂದು ಹೊರ ಬಿದ್ದರೂ ಆ ಸಂಘಟನೆಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಇಲ್ಲಿ ಸಾಧ್ಯವಾಗುತ್ತಿಲ್ಲ. ಇಂತಹ ದೇಶ, ಎಲ್ಲೋ ವಿದೇಶದಲ್ಲಿ ಅಡಗಿರುವ ಉಗ್ರರನ್ನು ಬಂಧಿಸುವ ಮಾತನಾಡುತ್ತದೆ. ತನ್ನ ಪಾದ ಬುಡದಲ್ಲಿರುವ ಉಗ್ರರ ವಿರುದ್ಧವೇ ಕ್ರಮ ಕೈಗೊಳ್ಳಲು ಸಾಧ್ಯವಾಗದ ಸರಕಾರ, ಎಲ್ಲೋ ವಿದೇಶಗಳಲ್ಲಿ ಅಡಗಿರುವ ಉಗ್ರರು, ಉಗ್ರಗಾಮಿ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವುದು ನಂಬುವ ಮಾತೇ? ಬರೇ ಇಷ್ಟೇ ಅಲ್ಲ.
ಭಾರತದಲ್ಲಿ ದೇಶಭಕ್ತರ ವೇಷದಲ್ಲಿರುವ ಈ ಭಯೋತ್ಪಾದನಾ ಸಂಘಟನೆಗಳು ಮಾಡಿದ ಕೃತ್ಯಗಳಿಗೆ ಅದೆಷ್ಟೋ ಅಮಾಯಕ ಮುಸ್ಲಿಮರು ಜೈಲಿನಲ್ಲಿ ಬೆಲೆ ತೆರುತ್ತಾ ಇದ್ದಾರೆ. ಮುಗ್ಧ ಮುಸ್ಲಿಂ ಯುವಕರನ್ನು ಭಯೋತ್ಪಾದಕರನ್ನಾಗಿ ಪರಿವರ್ತಿಸುವ ಕೆಲಸದಲ್ಲಿ ನಮ್ಮ ಪೊಲೀಸ್ ಇಲಾಖೆಗಳು ತೊಡಗಿವೆ. ಹೀಗಿರುವಾಗ ಈ ದೇಶವನ್ನು ರಕ್ಷಿಸುವ ದಾರಿಯಾದರೂ ಯಾವುದು?
ಆರೆಸ್ಸೆಸ್ ಪರಿವಾರಗಳು ದೇಶದಲ್ಲಿ ಉಗ್ರಗಾಮಿ ಚಟುವಟಕೆ ನಡೆಸುತ್ತಿವೆ ಎನ್ನುವುದನ್ನು ವೊದಲು ಬಹಿರಂಗಗೊಳಿಸಿ ದವರೇ ಹೇಮಂತ್‌ಕರ್ಕರೆ ಮತ್ತು ಬಳಗ.  ಆದರೆ ಅತ್ಯಂತ ನಿಗೂಢವಾಗಿ ಇಡೀ ತಂಡವೇ ದೇಶದ್ರೋಹಿಗಳಿಂದ ಬರ್ಬರವಾಗಿ ಕೊಂದು ಹಾಕಲ್ಪಟ್ಟಿತು. ಈ ದೇಶದಲ್ಲಿ ಯಾವುದೇ ದುರಂತಗಳಿಗೂ ಒಂದು ಕಾಟಾ ಚಾರದ ತನಿಖೆಯನ್ನಾದರೂ ನಡೆಸಲಾ ಗುತ್ತದೆ. ಆದರೆ ಎಟಿಎಸ್‌ನ ವರಿಷ್ಠ ಅಧಿಕಾರಿ ಗಳ ತಂಡವೇ ಬರ್ಬರವಾಗಿ, ನಿಗೂಢವಾಗಿ ಮೃತಪಟ್ಟಾಗ ಈ ದೇಶ ಅದನ್ನು ಪ್ರತ್ಯೇಕವಾಗಿ ತನಿಖೆಯನ್ನೇ ನಡೆಸದೆ ಮುಗಿಸಿ ಬಿಟ್ಟಿತು.
ಈ ಮೂಲಕ, ಸಂಘಪರಿವಾರದ ಉಗ್ರರಿಗೆ ಸಂಬಂಧಪಟ್ಟ ಹಲವು ಮಾಹಿತಿಗಳು ಅವರೊಂದಿಗೇ ಕಣ್ಮುಚ್ಚಿದವು. ಆದರೂ ಅವರ ತನಿಖೆ ವ್ಯರ್ಥವಾಗಲಿಲ್ಲ. ಮುಂದೆ ಅದನ್ನು ಆಧರಿಸಿಯೇ ಹಲವು ಸಂಘಪರಿವಾರದ ಮುಖಂಡರನ್ನು, ಕಪಟ ವೇಷಧಾರಿ ಸ್ವಾಮೀಜಿ ಗಳನ್ನು ಬಂಧಿಸಲಾಯಿತು. ಆರೆಸ್ಸೆಸ್‌ನ ಮುಖಂಡರು ಮಾತ್ರವಲ್ಲ, ಬಿಜೆಪಿಯ ನೇತಾರರೂ ಪರೋಕ್ಷವಾಗಿ ಇದರಲ್ಲಿ ಶಾಮೀಲಾಗಿರುವುದು ಮಾಧ್ಯಮಗಳಲ್ಲಿ ಬಹಿರಂಗವಾಯಿತು. ಸಂಜೋತಾ ಎಕ್ಸ್‌ಪ್ರೆಸ್, ಮಾಲೆಗಾಂವ್ ಸ್ಫೋಟ, ಮಕ್ಕಾ ಮಸೀದಿ ಸ್ಫೋಟ ಸೇರಿದಂತೆ ಹಲವು ದುರಂತಗಳ ಸರಮಾಲೆಗಳನ್ನೇ ಇವರು ಹೆಣೆದಿದ್ದರು.
ಆ ಮೂಲಕ ಈ ದೇಶದ್ರೋಹಿಗಳು ದೇಶವನ್ನು ಅಗ್ನಿಕುಂಡಕ್ಕೆ ತಳ್ಳಿದ್ದರು.  ಯಾವಾಗ ಆರೆಸ್ಸೆಸ್ ಮತ್ತು ಅದರ ಪರಿವಾರ ಉಗ್ರಗಾಮಿ ಸಂಘಟನೆಗಳನ್ನು ನಡೆಸುತ್ತಿರುವುದು ಸಾಬೀತಾ ಯಿತೋ ಆಗಲೇ ಅವುಗಳನ್ನು ನಿಷೇಧ ಮಾಡಬೇಕಾಗಿತ್ತು. ಸಂಬಂಧಪಟ್ಟವರ ಮೇಲೆ ಉಗ್ರ ಕ್ರಮವನ್ನು ತೆಗೆದುಕೊಳ್ಳಬೇಕಾಗಿತ್ತು. ಆದರೆ ಈವರೆಗೆ ಅಂತಹದೇನೂ ನಡೆದಿಲ್ಲ.  ಈ ದೇಶದ ಗೃಹ ಸಚಿವರು ಅಸಹಾಯಕ ವೆನ್ನುವ ಸ್ಥಿತಿಯಲ್ಲಿ, ಸಂಘ ಪರಿವಾರದ ಮೇಲೆ ಆರೋಪಗಳನ್ನು ಹೊರಿಸಿದ್ದಾರೆ.
ಗೃಹ ಸಚಿವರ ಕೆಲಸ ಆರೋಪವನ್ನು ಮಾಡುವುದಲ್ಲ. ಬದಲಿಗೆ ಯಾರು ಆರೋಪಿಗಳೋ ಅವರ ಮೇಲೆ ಬಲವಾದ ಕ್ರಮ ಕೈಗೊಳ್ಳುವಂತೆ ಮಾಡುವುದು. ದುರದೃಷ್ಟ ವಶಾತ್ ಗೃಹಸಚಿವರೂ ಮೀಡಿಯಾವನ್ನೇ ಈ ದೇಶದ ನ್ಯಾಯಾಂಗ ವ್ಯವಸ್ಥೆ ಎಂದು ತಿಳಿದು ಕೊಂಡಂತಿದೆ.
ಇದೇ ಸಂದರ್ಭದಲ್ಲಿ ಶಿಂಧೆಯವರ ಆರೋಪಕ್ಕೆ, ಬಾಲಕ್ಕೆ ಬೆಂಕಿ ಬಿದ್ದ ಮಂಗನಂತಾಡುತ್ತಿವೆ ಆರೆಸ್ಸೆಸ್ ಪರಿವಾರಗಳು. ಶಿಂಧೆ ಪಾಕಿಸ್ತಾನಿ  ಉಗ್ರಗಾಮಿಗಳ ಡಾರ್ಲಿಂಗ್ ಎಂದು ಆರೆಸ್ಸೆಸ್ ಕರೆದಿದೆ. ಒಂದನ್ನು ಆರೆಸ್ಸೆಸ್ ನೆನಪಿಟ್ಟುಕೊಳ್ಳಬೇಕು. ವಿದೇಶಿ ಉಗ್ರಗಾಮಿಗಳ ಡಾರ್ಲಿಂಗ್ ಶಿಂಧೆ ಅಲ್ಲ. ಬದಲಿಗೆ ಆರೆಸ್ಸೆಸ್ ಮತ್ತು ಅದರ ಪರಿವಾರ. ಇಂದು ವಿದೇಶಿ ಉಗ್ರರು ಮಾಡಬೇಕಾದ ದೇಶ ಒಡೆಯುವ ಕೆಲಸವನ್ನು ಆರೆಸ್ಸೆಸ್ ಸುಲಭವಾಗಿ ಮಾಡುತ್ತಿದೆ.
ದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಿಸಿ, ಸರಕಾರವನ್ನು ಅಸ್ಥಿರಗೊಳಿಸುವುದು, ದೇಶ ವನ್ನು ಛಿದ್ರಗೊಳಿಸುವುದು ವಿದೇಶಿ ಉಗ್ರಗಾಮಿಗಳ ಉದ್ದೇಶವಾದರೆ, ಇಲ್ಲಿ ಸಂಘಪರಿವಾರ ಎನ್ನುವ ಉಗ್ರ ಸಂಘಟನೆ ಗಳೂ ಅವನ್ನೇ ಮಾಡುತ್ತಿವೆ. ಆದುದರಿಂದ ದೇಶದ ಜನರೇ ಜಾಗೃತಿಯನ್ನು ಹೊಂದ ಬೇಕಾಗಿದೆ. ವಿದೇಶಿ ಉಗ್ರರೂ, ಸ್ವದೇಶಿ ಉಗ್ರರೂ ಒಂದೇ ನಾಣ್ಯದ ಎರಡು ಮುಖಗಳು. ಅವರು ಮಾಡುವ ಅನಾಹುತದಿಂದ ಅಂತಿಮವಾಗಿ ನಾಶವಾಗುವುದು ಭಾರತ. ಅದುದರಿಂದ ಭಾರತವನ್ನು ರಕ್ಷಿಸಿಕೊಳ್ಳ ಬೇಕಾದರೆ, ದೇಶದ ಜನರು ಒಂದಾಗಿ ಈ ಎರಡೂ ಉಗ್ರಗಾಮಿ ಮುಖಗಳನ್ನು ಯಾವುದೇ ದ್ವಂದ್ವವಿಲ್ಲದೆ, ಖಡಾಖಂಡಿತವಾಗಿ ಎದುರಿಸಿ ನಿಲ್ಲಬೇಕಾಗಿದೆ.

No comments:

Post a Comment