Wednesday, January 30, 2013

ಮೋದಿಯೆಂಬ ಕನಸಿನ ಪ್ರಧಾನಿ ಜನವರಿ -30-2013

ರ್ನಾಟಕದಲ್ಲಿ ‘ಆಪರೇಶನ್ ಕಮಲ’ದ ಮೂಲಕ ಅಧಿಕಾರಕ್ಕೆ ಬಂದು ರಾಜ್ಯದ ಮಾನ ಮರ್ಯಾದೆಯನ್ನು ಹರಾಜಿಗಿಟ್ಟ ಬಿಜೆಪಿ ಈಗ ಕೇಂದ್ರದ ಅಧಿಕಾರ ಸೂತ್ರ ಹಿಡಿದು ದೇಶದ ಮಾನ ಮರ್ಯಾದೆಯನ್ನು ಹರಾಜಿಗಿಡಲು ಹೊರಟಿದೆ. ‘ಕೂಸು ಹುಟ್ಟುವ ಮೊದಲೇ ಕುಲಾಯಿ ಹೊಲಿಸಿದರು’ ಎಂಬಂತೆ ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಉಳಿದಿರುವಾಗಲೇ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಪ್ರಧಾನಿಯೆಂದು ಬಿಂಬಿಸುವ ಹುನ್ನಾರ ನಡೆದಿದೆ. ಈಗ ಮೋದಿಯವರನ್ನು ಪ್ರಧಾನಿಯೆಂದು ಬಿಂಬಿಸಲು ಬಿಜೆಪಿಯಲ್ಲಿ ಸಹಮತವಿಲ್ಲ. ಇನ್ನೂ ಬಿಜೆಪಿ ನೇತೃತ್ವ ವಹಿಸಿರುವ ಎನ್‌ಡಿಎದಲ್ಲಂತೂ ಪಾಲುಗಾರ ಪಕ್ಷಗಳ ತೀವ್ರ ವಿರೋಧವಿದೆ. ಆದರೂ ಬಿಜೆಪಿಯ ಒಂದು ಗುಂಪಿನ ಅಧಿಕಾರ ದಾಹ ತಣಿಸಲು ಮೋದಿ ಪ್ರಧಾನಿಯಾಗಬೇಕಾಗಿದೆ.
ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯೆಂದು ಬಿಂಬಿಸಲೇಬೇಕೆಂದು ಬಿಜೆಪಿಯ ಹಿರಿಯ ನಾಯಕ ಯಶ್ವಂತ್ ಸಿನ್ಹಾ ಸೋಮವಾರ ಬಹಿರಂಗವಾಗಿಯೇ ಹೇಳಿದ್ದಾರೆ. ಅವರ ಈ ಹೇಳಿಕೆಯ ಬಗ್ಗೆ  ಬಿಜೆಪಿಯಲ್ಲಿ ಆಂತರಿಕವಾಗಿ ಮತ್ತು ಎನ್‌ಡಿಎ ಒಕ್ಕೂಟದಲ್ಲಿ ಬಹಿರಂಗವಾಗಿ ವಿರೋಧ ವ್ಯಕ್ತವಾಗತೊಡಗಿದೆ. ಸಂಯುಕ್ತ ಜನತಾದಳದ ಅಧ್ಯಕ್ಷ ಶರದ್ ಯಾದವ್ ತಕ್ಷಣ ಒಂದು ಹೇಳಿಕೆಯನ್ನು ನೀಡಿ, ಇದು ಯಶ್ವಂತ್ ಸಿನ್ಹಾರವರ ವೈಯಕ್ತಿಕ ಅಭಿಪ್ರಾಯ. ಇದಕ್ಕೆ ತಮ್ಮ ಒಪ್ಪಿಗೆಯಿಲ್ಲವೆಂದು ಹೇಳಿದ್ದಾರೆ.
‘ಎನ್‌ಡಿಎ ಒಕ್ಕೂಟ ಬಹುಮತ ಗಳಿಸಿದರೆ ಪ್ರಧಾನಿಯಾಗುವ ವ್ಯಕ್ತಿಯ ಅರ್ಹತೆಗಳೇನು ಇರಬೇಕೆಂಬ ಬಗ್ಗೆ ತಮ್ಮ ನಾಯಕ ನಿತೀಶ್ ಕುಮಾರ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ’ ಎಂದು ಜೆಡಿಯು ವಕ್ತಾರ ಶಿವಾನಂದ ತಿವಾರಿ ಹೇಳಿದ್ದಾರೆ. ಈ ಎಲ್ಲ ವಿದ್ಯಮಾನಗಳನ್ನು ಗಮನಿಸಿದ ಬಿಜೆಪಿಯ  ಅಧ್ಯಕ್ಷ ರಾಜನಾಥ್ ಸಿಂಗ್, ಯಶ್ವಂತ್ ಸಿನ್ಹಾರದು ವೈಯಕ್ತಿಕ ಹೇಳಿಕೆ. ಎನ್‌ಡಿಎ ಒಕ್ಕೂಟ ಬಹುಮತ ಗಳಿಸಿದರೆ ಬಿಜೆಪಿಯ ಸಂಸದೀಯ ಮಂಡಳಿಯು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ನರೇಂದ್ರ ಮೋದಿಯವರನ್ನು ಪ್ರಧಾನಿಯೆಂದು ಬಿಜೆಪಿಯ ಒಂದು ಗುಂಪಿನ ಹೊರತು ಇನ್ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಬಿಹಾರದಲ್ಲಿ ನಿತೀಶ್ ಕುಮಾರ್‌ರ ಸಂಯುಕ್ತ ಜನತಾದಳ ಅಧಿಕಾರಕ್ಕೆ ಬಂದಿರುವುದೇ ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ದಲಿತರೆಂಬ ಅಹಿಂದ ಮತದಾರರ ಬೆಂಬಲದಿಂದ. ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯೆಂದು ಒಪ್ಪಿಕೊಂಡರೆ ನಿತೀಶ್ ಕುಮಾರ್‌ರ ನಿಂತ ನೆಲವೇ ಕುಸಿಯುತ್ತದೆ. ಇನ್ನು ತೆಲುಗು ದೇಶಂ, ಅಕಾಲಿದಳ, ಮತ್ತಿತರರ ಮಿತ್ರ ಪಕ್ಷಗಳಲ್ಲೂ ಈ ಬಗ್ಗೆ ಒಮ್ಮತವಿಲ್ಲ. ಹೀಗಾಗಿ ಮೋದಿ ಪ್ರಧಾನಿಯಾಗುವುದು ಸುಲಭದ ಸಂಗತಿಯಲ್ಲ.
ಯಾರು ಏನೇ ಹೇಳಲಿ. ಮೋದಿಯವರನ್ನು ಪ್ರಧಾನಿಯಾಗಿ ಮಾಡಬೇಕೆಂಬುದು ದೇಶ-ವಿದೇಶಗಳ ಬಹುರಾಷ್ಟ್ರೀಯ ಕಾರ್ಪೊರೇಟ್ ಕಂಪೆನಿಗಳ ಹೆಬ್ಬಯಕೆಯಾಗಿದೆ. ಅದಕ್ಕಾಗಿ ಲಕ್ಷಾಂತರ ಕೋಟಿ ರೂ.ವನ್ನು ಖರ್ಚು ಮಾಡಲು ಈ ಕಾರ್ಪೊರೇಟ್ ತಿಮಿಂಗಿಲಗಳು ಸಜ್ಜಾಗಿ ನಿಂತಿವೆ. ಮೋದಿ ಪ್ರಧಾನಿ ಯಾದರೆ ದೇಶ ದಿವಾಳಿಯಾದರೂ ಈ ಕಂಪೆನಿಗಳ ತಿಜೋರಿ ತುಂಬುತ್ತದೆ. ರೈತರ ಕೃಷಿಯೋಗ್ಯ ಭೂಮಿಯನ್ನು ನುಂಗಿ ನೀರು ಕುಡಿಯಲು ಅನುಕೂಲವಾಗುತ್ತದೆ. ಅರಣ್ಯ ಮತ್ತು ಜಲಸಂಪತ್ತನ್ನು ದೋಚಲು ಮೋದಿ ಅವಕಾಶ ಮಾಡಿಕೊಡುತ್ತಾರೆ. ಎಲ್ಲಕ್ಕಿಂತ ಮಿಗಿಲಾಗಿ ಮೋದಿಯವರ ಸಾಮ್ರಾಜ್ಯದಲ್ಲಿ ಕಾರ್ಮಿಕರ ಪ್ರತಿಭಟನೆಯೆಂಬುದೇ ಇರುವುದಿಲ್ಲ. ಅಂತಲೇ ಮೋದಿ ಪ್ರಧಾನಿ ಯಾಗಬೇಕೆಂದು ಇವರು ಬಯಸುತ್ತಾರೆ.
ಇತ್ತೀಚೆಗೆ ಅಹ್ಮದಾಬಾದ್‌ನಲ್ಲಿ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ದೇಶದ ಬಹುದೊಡ್ಡ ಬಂಡವಾಳಗಾರ ಅನಿಲ್ ಅಂಬಾನಿ ನರೇಂದ್ರ ಮೋದಿಯ ವರನ್ನು ಮಹತ್ಮಾ ಗಾಂಧಿ ಮತ್ತು ವಲ್ಲಭಬಾಯಿ ಪಟೇಲ್‌ರಿಗೆ ಹೋಲಿಸಿ ಮಾತನಾಡಿದರು. ಗುಜರಾತ್‌ನಲ್ಲಿ ರೈತರ ಬದುಕಿನ ಮೇಲೆ ಚಪ್ಪಡಿ ಎಳೆದು ಬಹುರಾಷ್ಟ್ರೀಯ ಕಂಪೆನಿಗಳಿಗೆ ರತ್ನಗಂಬಳಿ ಹಾಸಿದ ಮೋದಿ ದೇಶದ ಪ್ರಧಾನಿಯಾಗಲು ಹೊರಟಿದ್ದಾರೆ. ಪ್ರಧಾನಿಯಾಗುವ ಅವರ ಬಯಕೆ ಹಾಗೂ ಪ್ರಧಾನಿಯಾಗಿ ಮಾಡುವ ಹಿಂಬಾಲಕರ ಆರೈಕೆ ಇಷ್ಟರಿಂದಲೇ ಪ್ರಧಾನಿಯಾಗುವುದಿದ್ದರೆ ಮೋದಿ ಎಂದೋ ಪ್ರಧಾನಿಯಾಗುತ್ತಿದ್ದರು. ಆದರೆ  ಪ್ರಜ್ಞಾವಂತ ಮತದಾರರಿರುವ ಭಾರತದಲ್ಲಿ ಇಂತಹವರು ಪ್ರಧಾನಿಯಾಗುವುದು ಅಷ್ಟು ಸುಲಭವಲ್ಲ.
ಮೋದಿ ಪ್ರಧಾನಿಯಾಗಲು ಅವರು ಬೆಳೆದು ಬಂದ ಸಂಘಪರಿವಾರದಲ್ಲೇ ವಿರೋಧ ವಿದೆ. ತಮ್ಮ ಅಂಕೆ ಮೀರಿ ಬೆಳೆದ ಇವರನ್ನು ಒಪ್ಪಿಕೊಳ್ಳಲು ನಾಗಪುರದ ಆರೆಸ್ಸೆಸ್‌ನ ಚಿತ್ಪಾವನ ಬ್ರಾಹ್ಮಣರು ತಯಾರಿಲ್ಲ. ಅವರಿಗೇನಿದ್ದರೂ ಗಡ್ಕರಿಯವರಂತಹ ಕೈಗೊಂಬೆ ಬೇಕು. ಇನ್ನು ಬಿಜೆಪಿಯಲ್ಲಿ ಅಡ್ವಾಣಿಯವರಂತಹ ಹಿರಿಯ ನಾಯಕರಿಗೆ ಮತ್ತು ಸುಶ್ಮಾ ಸ್ವರಾಜ್, ಅರುಣ್ ಜೇಟ್ಲಿ, ವೆಂಕಯ್ಯನಾಯ್ಡುರಂತಹ ಎರಡನೆ ಹಂತದ ನಾಯಕರಿಗೆ ಮೋದಿ ಪ್ರಧಾನಿಯಾಗುವುದು ಬೇಕಾಗಿಲ್ಲ.
ಮೋದಿ ಪ್ರಧಾನಿಯಾಗಬೇಕಾದರೆ ಮೊದಲು ಬಿಜೆಪಿ ನೇತೃತ್ವ ಎನ್‌ಡಿಎ ಒಕ್ಕೂಟ ಲೋಕಸಭೆಯಲ್ಲಿ ೨೫೦ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಬೇಕು. ಆಕಸ್ಮಿಕವಾಗಿ ಗೆಲುವು ಸಾಧಿಸಿದರೆ ಪಾಲುದಾರ ಪಕ್ಷಗಳು ಮೋದಿಯವರನ್ನು ಒಪ್ಪಿಕೊಳ್ಳುವುದಿಲ್ಲ. ಹಾಗೆಯೇ ಬಿಜೆಪಿಯಲ್ಲಿ ಮೋದಿ ನಾಯಕತ್ವ ಬಗ್ಗೆ ಒಮ್ಮತ ಮೂಡ ಬೇಕು. ಇದೆಲ್ಲ  ಕೇವಲ ತಿರುಕನ ಕನಸಾಗಿದೆ. ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಫಲಿತಾಂಶ, ಜಾರ್ಖಂಡ್‌ನಲ್ಲಿ ಅನುಭವಿಸಿದ ಮುಖಭಂಗ, ಕರ್ನಾಟಕದ ಬಿಜೆಪಿಯ ದುರವಸ್ಥೆ ಇವೆಲ್ಲವನ್ನು ಗಮನಿಸಿದರೆ ದೇಶದ ಜನ ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂದು ಊಹೆ ಮಾಡಲಿಕ್ಕೂ ಸಾಧ್ಯವಿಲ್ಲ.
ಬರಲಿರುವ ಲೋಕಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಳ ನಡುವೆ ಮಾತ್ರ ನೇರಾ ಹಣಾಹಣಿ ನಡೆಯುವುದಿಲ್ಲ. ಪಶ್ಚಿಮ ಬಂಗಾಳ, ಬಿಹಾರ್, ಒಡಿಶಾ, ತಮಿಳುನಾಡು, ಪಂಜಾಬ್, ಉತ್ತರಪ್ರದೇಶ, ಕೇರಳ, ಆಂಧ್ರ ಪ್ರದೇಶಗಳಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಮುಖ ಪಾತ್ರ ವಹಿಸುತ್ತವೆ. ಕೆಲ ರಾಜ್ಯಗಳಲ್ಲಿ ತ್ರಿಕೋನ ಸ್ಪರ್ಧೆ. ಮತ್ತೆ ಕೆಲ ರಾಜ್ಯಗಳಲ್ಲಿ ಚತುಷ್ಕೋಣ ಸ್ಪರ್ಧೆಯ ಸಾಧ್ಯತೆಯಿದೆ. ಇಂತಹ ಸನ್ನಿವೇಶದಲ್ಲಿ ಮೋದಿಯವರನ್ನು ಪ್ರಧಾನಿಯೆಂದು ಬಿಂಬಿಸಲು ಹೊರಟವರ ತಲೆಯಲ್ಲಿ ಮೆದುಳಿಲ್ಲವೆಂದು ಹೇಳಬೇಕಾಗುತ್ತದೆ.

No comments:

Post a Comment