Tuesday, January 29, 2013

ಕೊಂದ ಪಾಪ, ತಿಂದು ಪರಿಹಾರ- ಜನವರಿ -29-2013

ಲ್ಲದ ಸರಕಾರವೊಂದನ್ನು ಕೆಜೆಪಿ ಉರುಳಿಸಲು ಹೊರಟಿದ್ದರೆ, ಅಸ್ತಿತ್ವದಲ್ಲಿಯೇ ಇರದ ಸರಕಾರವೊಂದು ತನ್ನನ್ನು ತಾನು ಉಳಿಸಿಕೊಳ್ಳುವುದಕ್ಕೆ ಹೆಣಗಾಡುತ್ತಿದೆ. ತಂತ್ರಕ್ಕೆ ಪ್ರತಿ ತಂತ್ರ ಹೆಣೆಯುತ್ತಿದೆ. ಈ ರಾಜಕೀಯ ಚದುರಂಗದಾಟದಲ್ಲಿ ಇಂದು 13ಶಾಸಕರು ಅನರ್ಹತೆಯ ಎಡೆಗೆ ಹೆಜ್ಜೆ ಹಾಕುವ ಸಾಧ್ಯತೆಯೇ ಹೆಚ್ಚು. ಈ ಮೂಲಕ, ಬರೇ ಒಂದೂವರೆ ವರ್ಷದೊಳಗೆ ಇತಿಹಾಸ ಪುನರಾವರ್ತನೆಯಾಗಿದೆ. ಯಡಿಯೂರಪ್ಪ ನೇತೃತ್ವದ ಸರಕಾರವನ್ನು ಉಳಿಸಲು ರಾಜ್ಯ ಬಿಜೆಪಿ ಅಂದು ಇದೇ ತಂತ್ರವನ್ನು ಅನುಸರಿ ಸಿತ್ತು. ಇದೇ ಸ್ಪೀಕರ್‌ರನ್ನು ಬಳಸಿಕೊಂಡು, ಭಿನ್ನಮತೀಯ ಶಾಸಕರ ರಾಜೀನಾಮೆಗೆ ಅಂದಿನ ಸರಕಾರ ಉತ್ತರಿಸಿತ್ತು. ಕಾಲದ ವ್ಯಂಗ್ಯ ನೋಡಿ. ಇದೀಗ ಪರಿಸ್ಥಿತಿ ತಿರುವು ಮುರುವಾಗಿದೆ. ಅಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಇಂದು ಯಡಿ ಯೂರಪ್ಪ ಭಿನ್ನಮತೀಯರ ಸ್ಥಾನದಲ್ಲಿ ನಿಂತಿದ್ದಾರೆ. ಯಡಿಯೂರಪ್ಪ ಬಳಸಿದ ತಂತ್ರವನ್ನೇ ಇದೀಗ, ಯಡಿಯೂರಪ್ಪನವರ ವಿರುದ್ಧ ಬಳಸಲಾಗುತ್ತದೆ.
ಅಂತೂ ಇಂತು ಈ ಬಾರಿಯ ಬಜೆಟನ್ನು ಮಂಡಿಸಿಯೇ ಸಿದ್ಧ ಎಂದು ಶೆಟ್ಟರ್ ಸರಕಾರ ಯಡಿಯೂರಪ್ಪ ಬಣಕ್ಕೆ ಸವಾಲು ಹಾಕಿ ದಂತಿದೆ. ಈ ಬಜೆಟ್‌ನಿಂದ ರಾಜ್ಯಕ್ಕೆ ಉಪಕಾರವಾಗಲಿ ಬಿಡಲಿ. ಆದರೆ ಯಡಿಯೂರಪ್ಪನವರಿಗೆ ಮುಖಭಂಗ ಮಾಡಬೇಕು ಎನ್ನುವ ಒಂದೇ ಉದ್ದೇಶದಿಂದ ಶತಾಯಗತಾಯ ಪ್ರಯತ್ನದಲ್ಲಿದೆ ಈಶ್ವರಪ್ಪ ಬಣ. ಬಜೆಟ್ ಮಂಡಿಸಿದ ಬಳಿಕ ಸರಕಾರ ಕುಸಿದರೂ ಪರವಾಗಿಲ್ಲ ಎಂಬ ನಿರ್ಧಾರಕ್ಕೆ ಬಿಜೆಪಿ ಬಂದಂತಿದೆ.  ಬಜೆಟ್‌ವರೆಗೆ ಸರಕಾರ ಉಳಿದರೆ ಬಿಜೆಪಿಯ ಮಾನ ಉಳಿದು ಬಿಡುತ್ತದೆ.
ಬಳಿಕ ಏನಾದರಾಗಲಿ ಎಂದು ಶೆಟ್ಟರ್ ಕೂಡ ನಿರ್ಧರಿಸಿದಂತಿದೆ. ಆ ಕಾರಣಕ್ಕೆ ಸ್ಪೀಕರ್ ನಾಪತ್ತೆ ಪ್ರಹಸನವನ್ನು ಹಮ್ಮಿ ಕೊಳ್ಳಲಾಯಿತು. ಭಿನ್ನರ ರಾಜೀನಾಮೆಯನ್ನು ಎಷ್ಟರ ಮಟ್ಟಿಗೆ ಸಾಧ್ಯವೋ ಅಷ್ಟರ ಮಟ್ಟಿಗೆ ಮುಂದೂಡುತ್ತಾ ಹೋಗುವುದು ಅವರ ಉದ್ದೇಶವಾಗಿದೆ. ಆದರೆ ಈ ಎಲ್ಲ ಪ್ರಯತ್ನ ಅಧಿಕಾರ ಉಳಿಸಿಕೊಳ್ಳುವುದಕ್ಕೇ ಹೊರತು ನಾಡಿನ ಹಿತಾಸಕ್ತಿಗಾಗಿ ಅಲ್ಲ ಎನ್ನುವುದನ್ನು ನಾವು ಗಮನಿಸಬೇಕಾಗಿದೆ.  ಸರಕಾರ ತನ್ನನ್ನು ತಾನು ಉಳಿಸಿಕೊಳ್ಳುವುದಕ್ಕೇ ಹೆಣಗಾಡುತ್ತಿರು ವಾಗ, ನಾಡನ್ನು ಉಳಿಸುವ ಪ್ರಶ್ನೆಯಾದರೂ ಎಲ್ಲಿ ಬಂತು?
ಬಿಜೆಪಿ ಅಧಿಕಾರಕ್ಕೆ ಬಂದಂದಿನಿಂದ ಅದಕ್ಕೆ ಆಡಳಿತ ನಡೆಸುವ ಅವಕಾಶವೇ ಸಿಕ್ಕಿಲ್ಲ. ತನ್ನ ಆಡಳಿತಾವಧಿಯನ್ನು “ಅದೊಂದು ಸರ್ಕಸ್’ ಎಂದು ಸ್ವತಃ ಯಡಿಯೂರಪ್ಪ ನೋವಿನಿಂದ ಬಣ್ಣಿಸಿದ್ದರು. ರೆಡ್ಡಿಗಳ ಕಾಟದಿಂದ ಯಡಿ ಯೂರಪ್ಪನವರಿಗೆ ಒಂದು ದಿನವೂ ನೆಮ್ಮದಿಯಿಂದ ಆಡಳಿತ ಮಾಡಲು ಸಾಧ್ಯ ವಾಗಲಿಲ್ಲ. ದಿಲ್ಲಿಯಲ್ಲಿ ಯಡಿಯೂರಪ್ಪ ಸರಕಾರದ ವಿರುದ್ಧ ಅನಂತಕುಮಾರ್, ಅಡ್ವಾಣಿಯವರ ಕಿವಿಯೂದುತ್ತಿದ್ದರು.
ಒಳ ಹೊರಗಿನ ಒತ್ತಡ, ಭ್ರಷ್ಟಾಚಾರ, ಭಿನ್ನಮತ ಇವುಗಳನ್ನು ಸರಿಪಡಿಸುವುದರಲ್ಲೇ ಯಡಿ ಯೂರಪ್ಪರ ಕಾಲ ಕಳೆದು ಹೋಯಿತು. ಯಡಿಯೂರಪ್ಪನವರು ಕೆಳಗಿಳಿದ ದಿನದಿಂದ ಹೆಸರಿಗಷ್ಟೇ ಮುಖ್ಯಮಂತ್ರಿಗಳು. ತಮ್ಮ ಮುಖ್ಯಮಂತ್ರಿ ಸ್ಥಾನದ ಕುರಿತಂತೆ ಭರವಸೆ ಇರದ ಸದಾನಂದ ಗೌಡ, ಶೆಟ್ಟರ್ ಒಳ್ಳೆಯ ಆಡಳಿತವನ್ನು ನೀಡುವುದಕ್ಕಾದರೂ ಹೇಗೆ ಸಾಧ್ಯ? ಕಳೆದ ನಾಲ್ಕು ವರ್ಷಗಳು ಬಿಜೆಪಿ ನಾಡನ್ನು ಮುನ್ನಡೆಸುವುದಕ್ಕೆ ಒದ್ದಾಟ ನಡೆಸುವುದಕ್ಕಿಂತ, ಸರಕಾರವನ್ನು ಉಳಿಸು ವುದಕ್ಕೆ ಒದ್ದಾಟ ನಡೆಸಿದೆ. ಬಹುಶಃ ಈವರೆಗೆ ಯಾವ ಸರಕಾರವೂ ಈ ಮಟ್ಟದ ದೈನೇಸಿ ಸ್ಥಿತಿಯನ್ನು ಕಂಡಿರಲಿಲ್ಲ. ಭ್ರಷ್ಟಾಚಾರ, ಭಿನ್ನಮತ ಈ ಮಟ್ಟದಲ್ಲಿ ತಾಂಡವ ವಾಡಿರಲಿಲ್ಲ.
ಇಂದು ಭಿನ್ನಮತೀಯ ಶಾಸಕರ ಕುರಿತಂತೆ ಟೀಕಾ ಪ್ರಹಾರವನ್ನು ನಡೆಸುತ್ತಿರುವ ಬಿಜೆಪಿ ತಾನು ಮಾಡಿದ ಪಾಪವನ್ನೊಮ್ಮೆ ನೆನೆಯ ಬೇಕು. ಉಳಿದ ಪಕ್ಷಗಳಲ್ಲಿ ಸಂವಿಧಾನಾತ್ಮಕ ವಾಗಿ ಗೆದ್ದು ಬಂದ ಶಾಸಕರನ್ನು ಹಣ ಕೊಟ್ಟು ಕೊಂಡುಕೊಂಡು ತನ್ನ ಸರಕಾರವನ್ನು ಉಳಿಸಿದ ಪಾಪವೇ ಇಂದು ಬಿಜೆಪಿಯನ್ನು ತಿನ್ನುತ್ತಿದೆ.  ತಮ್ಮ ಪಾಪದ ಕೆಲಸವನ್ನು ‘ಆಪರೇಷನ್ ಕಮಲ’ ಎಂದು ಕರೆದುಕೊಂಡು, ಅದನ್ನು ಬಹಿರಂಗವಾಗಿಯೇ ಸಮರ್ಥಿಸತೊಡಗಿದರು. ಒಂದು ರೀತಿಯಲ್ಲಿ ಪ್ರಜಾಪ್ರಭುತ್ವವನ್ನು ಬಹಿರಂಗವಾಗಿಯೇ ಕೊಂಡುಕೊಳ್ಳುವ ಪರಂಪರೆಯನ್ನು ಬಿಜೆಪಿ ಸರಕಾರ ಆರಂಭಿಸಿತು. ಇದೀಗ ಅದೇ ಆಪರೇಷನ್ ಕಮಲ ಬಿಜೆಪಿಯ ಪಾಲಿಗೆ ಮುಳುವಾಗಿ ಬಿಟ್ಟಿದೆ. ಅದರ ಫಲವನ್ನೇ ಬಿಜೆಪಿ ಉಣ್ಣುತ್ತಿದೆ.
ಇಂದಿನ ಆಟ ಬಿಜೆಪಿ ಸರಕಾರದ ಕೊನೆಯ ಆಟವಾದರೆ ಈ ನಾಡಿಗೆ ನಿಜಕ್ಕೂ ನೆಮ್ಮದಿ ಸಿಕ್ಕೀತು. ಸರಕಾರವೊಂದು ಇದೆ ಎನ್ನುವುದ ಕ್ಕಾಗಿ ಒಂದು ಸರಕಾರ ಅಸ್ತಿತ್ವದಲ್ಲಿದ್ದರೆ ಅದರಿಂದ ಜನಕ್ಕೇನು ಪ್ರಯೋಜನ? ಸ್ವಯಂ ಪ್ರತಿಷ್ಠೆಗಾಗಿ ಬಜೆಟ್ ಮಂಡಿಸಿ, ಹೇಗೋ ಸರಕಾರವನ್ನು ಮುನ್ನಡೆಸಿದರೆ ಅದನ್ನು ನಾವು ಆಡಳಿತವೆಂದು ಪರಿಗಣಿಸುವುದಾದರೂ ಹೇಗೆ? ಇನ್ನಾದರೂ ಸರಕಾರವನ್ನು ವಿಸರ್ಜಿಸಿ, ಬಿಜೆಪಿ ಮುಖಭಂಗವನ್ನು ತಪ್ಪಿಸಬೇಕು. ಹೇಗೂ ಕಳೆದ ನಾಲ್ಕು ವರ್ಷ ಅಧಿಕಾರಿಗಳೇ ಆಡಳಿತನವನ್ನು ನಡೆಸಿದ್ದಾರೆ. ಇನ್ನುಳಿದ ಕೆಲವು ತಿಂಗಳುಗಳನ್ನು ಅವರಿಗೇ ಒಪ್ಪಿಸಿ ಬಿಜೆಪಿ ಚುನಾವಣೆಗೆ ಅಣಿಯಾಗುವುದು ಒಳಿತು.

No comments:

Post a Comment