Monday, January 28, 2013

ನಂದಿಯ ಜಾರಿದ ನಾಲಗೆಜನವರಿ -28-2013

ನಾಲಗೆ ಒದ್ದೆ ಜಾಗದಲ್ಲಿರುವುದರಿಂದ ಅದು ಆಗಾಗ ಜಾರುತ್ತಿರುತ್ತಿರುವುದಂತೆ. ಜೈಪುರದ ಅಂತಾರಾಷ್ಟ್ರೀಯ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯ ಚಿಂತಕ ಆಶಿಷ್ ನಂದಿಯವರ ನಾಲಗೆ ಸಣ್ಣದಾಗಿ ಜಾರಿದೆ. ಈಗಾಗಲೇ ಈ ಕುರಿತಂತೆ ಅವರ ಮೇಲೆ ಕೆಲವರು ಕೇಸೂ ದಾಖಲಿಸಿದ್ದಾರೆ. “ಹಿಂದುಳಿದ ವರ್ಗ ಮತ್ತು ಎಸ್ಸಿ, ಎಸ್ಟಿಗಳಿಂದ ಬರುವವರು ಹೆಚ್ಚು ಭ್ರಷ್ಟರು’ ಎಂದು ಅವರ ಬಾಯಿಯಿಂದ ಮಾತುಗಳು ಉದುರುತ್ತಿದ್ದಂತೆಯೇ ವೇದಿಕೆಯಲ್ಲೇ ಅದಕ್ಕೆ ತೀವ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಹಿಂದುಳಿದ ವರ್ಗ ಹಾಗೂ ದಲಿತರ ಕುರಿತಂತೆ ಪ್ರೀತಿಯಿಲ್ಲದವರೂ, ಆಶಿಷ್ ನಂದಿಯವರ ಮೇಲಿನ ಸಿಟ್ಟಿಗಾಗಿ ಅದನ್ನು ಚೆನ್ನಾಗಿಯೇ ಬಳಸಿಕೊಂಡರು. ಆಶಿಷ್ ನಂದಿ ತನ್ನ ಮಾತನ್ನು ತಕ್ಷಣ ತಿದ್ದಿಕೊಂಡಿದ್ದಾರಾದರೂ, ಅದು ಹೆಚ್ಚು ಗಮನ ಸೆಳೆಯಲಿಲ್ಲ. ಮಾಧ್ಯಮಗಳಲ್ಲೆಲ್ಲ ನಂದಿ ಹೇಳಿದ ಮೊದಲ ಮಾತು ಪ್ರಾಮುಖ್ಯವನ್ನು ಪಡೆಯಿತು. ಉಳಿದುದೆಲ್ಲ ಬದಿಗೆ ಸರಿಯಿತು. ಯಾಕೆಂದರೆ “ಒಬಿಸಿ, ಎಸ್ಸಿ-ಎಸ್ಟಿಗಳಿಂದಲೇ ಭ್ರಷ್ಟಾಚಾರ ಮೇರೆ ಮೀರಿದೆ” ಎನ್ನುವ ನಂಬಿಕೆಯ ತಳಹದಿಯಲ್ಲಿಯೇ ನಮ್ಮ ಮಾಧ್ಯಮಗಳು ಸುದ್ದಿ ಮಾಡುತ್ತಾ ಬಂದಿವೆ. ಅಂತಹ ಪೂರ್ವಗ್ರಹ ಪೀಡಿತ ನಿಲುವಿಗೆ ಕಾರಣವೇನು ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ ಆಗಿದೆ.
ಇಂದು ಮಾಧ್ಯಮಗಳ ತುತ್ತ ತುದಿಯಲ್ಲಿ ಕುಳಿತು ಸುದ್ದಿಯನ್ನು ನಿರ್ಧರಿಸುತ್ತಿರುವುದು ಮೇಲ್ವರ್ಣೀಯ ಜನರು. ಹಿಂದುಳಿದವರ್ಗ ಮತ್ತು ದಲಿತರ ಬಗ್ಗೆ ಅವರಿಗೆ ಪೂರ್ವಗ್ರಹ ಇರುವುದಕ್ಕೆ ಅವರದೇ ಆದ ಕಾರಣಗಳಿವೆ. ಆದರೆ ಚಿಂತಕರಾದ ಆಶಿಷ್ ನಂದಿಯವರ ನಾಲಗೆ ಹೇಗೆ, ಯಾಕೆ ಜಾರಿತು ಎನ್ನುವುದು ಎಲ್ಲರನ್ನೂ ಒಂದು ಕ್ಷಣ ಚಿಂತೆಗೀಡುಮಾಡಿದುದು ಮಾತ್ರ ಸುಳ್ಳಲ್ಲ.
“ಮೀಸಲಾತಿ ಪಡೆದು ದಲಿತರು ಕೊಬ್ಬಿದ್ದಾರೆ” “ಮೀಸಲಾತಿಯಿಂದ ಹಿಂದುಳಿದ ವರ್ಗದವರು ನೌಕರಿ ಪಡೆದು ಎಲ್ಲವನ್ನು ಭ್ರಷ್ಟಗೊಳಿಸಿದ್ದಾರೆ” “ಭ್ರಷ್ಟರೆಲ್ಲ ಹಿಂದುಳಿದ ವರ್ಗದಿಂದ ಬಂದವರು” ಇಂತಹ ಮಾತುಗಳು ಸಮಾಜದಲ್ಲಿ ಕೇಳಿ ಬರುತ್ತಿರುವುದು ಇದೇ ಮೊದಲಲ್ಲ. ಹೀಗೆ ಆರೋಪಿಸುವವರ ಒಟ್ಟಾರೆ ಗುರಿಯೇನೆಂದರೆ, ಭ್ರಷ್ಟಾಚಾರಕ್ಕೆ ಮೀಸಲಾತಿಯೇ ಕಾರಣ ಎನ್ನುವುದನ್ನು ಸಮಾಜದಲ್ಲಿ ಬಿತ್ತಿ ಬಿಡುವುದು. ಕಳೆದ 60ವರ್ಷಗಳಿಂದ ಹಿಂದುಳಿದ ವರ್ಗ, ದಲಿತ ಜನರು ಮೀಸಲಾತಿಯಿಂದ ಉದ್ಯೋಗ ಪಡೆದು, ಭ್ರಷ್ಟಾಚಾರವನ್ನು ಮಾಡಿದ್ದಾರೆ ಎಂದೇ ಇಟ್ಟುಕೊಳ್ಳೋಣ.
ಆದರೆ ಹಲವು ಸಾವಿರ ವರ್ಷಗಳ ಕಾಲ ಸಣ್ಣದೊಂದು ಮೇಲ್ವರ್ಣೀಯ ಗುಂಪು, ದೇವರು, ಧರ್ಮ, ಜಾತಿಯ ಹೆಸರಿನಲ್ಲಿ ಮಾಡಿದ ಭ್ರಷ್ಟಾಚಾರಕ್ಕೆ, ಅನಾಚಾರಕ್ಕೆ, ಅನ್ಯಾಯಕ್ಕೆ ಹೋಲಿಸಿದರೆ ಇದೇನೂ ಅಲ್ಲ ಬಿಡಿ. ಆದರೂ ಮೇಲಿನ ಆರೋಪದಲ್ಲಿ ಒಂದು ಹಿಡಿಯಷ್ಟಾದರೂ ನಿಜವಿರಬಹುದೇ ಎಂದು ನೋಡಿದರೆ, ಆ ಆರೋಪದಲ್ಲಿರುವ ಟೊಳ್ಳುತನಗಳೂ ಬಯಲಾಗುತ್ತವೆ. ಮೇಲ್ವರ್ಣದ ಜನಸಂಖ್ಯೆಯನ್ನು ಮುಂದಿಟ್ಟುಕೊಂಡು ನಾವು ಸರಾಸರಿ ತೆಗೆದುಕೊಂಡರೆ ಈ ದೇಶ ಇನ್ನೂ ನರಳುತ್ತಿರುವುದು ಮೇಲ್ವರ್ಣೀಯ ಅಧಿಕಾರಿಗಳಿಂದಲೇ.
ಯಾಕೆಂದರೆ  ಹಿಂದುಳಿದ ವರ್ಗ ಮತ್ತು ದಲಿತರು ದೊಡ್ಡ ಸ್ಥಾನಗಳಲ್ಲಿರುವುದು ಅಪರೂಪ. ಅವರಿಗೇನಿದ್ದರೂ ಅಟೆಂಡರ್‌ನಿಂದ ಹಿಡಿದು ಕ್ಲರ್ಕ್ ಪೋಸ್ಟ್‌ಗಳೇ ‘ಮೀಸಲು’. ಇಂದಿಗೂ ಐಎಎಸ್ ಅಧಿಕಾರಿಗಳಲ್ಲಿ ಬಹು ಸಂಖ್ಯೆಯಲ್ಲಿರುವುದು ಮೇಲ್ವರ್ಣೀಯರೇ ಆಗಿದ್ದಾರೆ. ಒಬಿಸಿಗಳದು ಚಿಲ್ಲರೆ ಅವ್ಯವಹಾರಗಳಾದರೆ, ಉಳಿದವರದು ಈ ದೇಶದ ಬುಡಕ್ಕೇ ಕತ್ತರಿ ಇಡುವಂತಹ ಅವ್ಯವಹಾರ. ಇವು ಬೆಳಕಿಗೆ ಬರುವುದಿಲ್ಲ ಎನ್ನುವುದಕ್ಕಿಂತ, ಅವು ಬೆಳಕಿಗೆ ಬರುವುದು ನಮ್ಮ ಮಾಧ್ಯಮಗಳಿಗೆ ಇಷ್ಟವಿಲ್ಲ ಎನ್ನುವುದೇ ಹೆಚ್ಚು ಸೂಕ್ತ.
ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. ಸಣ್ಣ ವೊತ್ತದ ಅವ್ಯವಹಾರ ನಡೆಸಿ ಬಂಗಾರು ಲಕ್ಷ್ಮಣ್ ಎನ್ನುವ ಬಿಜೆಪಿಯ ದಲಿತ ನಾಯಕ ಜೈಲು ಸೇರಿದರು. ಅಪಾರ ನೋವು, ಅವಮಾನಗಳನ್ನು ಅನುಭವಿಸಿದರು. ರಾಜಕೀಯವಾಗಿಯೇ ಸರ್ವನಾಶವಾದರು. ಆದರೆ ಇದೀಗ ಬಿಜೆಪಿಯಲ್ಲಿ ಕೋಟಿ ಕೋಟಿ ಅವ್ಯವಹಾರ ನಡೆಸುತ್ತಿದ್ದಾರಾದರೂ ಅವರ‍್ಯಾರಿಗೂ ಇಂತಹ ಶಿಕ್ಷೆ ಸಿಗಲಿಲ್ಲ. ಅನಂತಕುಮಾರ್ ಹುಡ್ಕೋ ಹಗರಣ ಎನ್ನುವ ಕೋಟ್ಯಂತರ ರೂ ಅವ್ಯವಹಾರದಲ್ಲಿ ಸುದ್ದಿಯಾದರು. ರಾಡಿಯಾ ಹಗರಣದಲ್ಲೂ ಅವರ ಕಚ್ಚೆ ರಾಡಿಯಾಯಿತು. ಆದರೆ ಅದನ್ನು ಮಾಧ್ಯಮಗಳು ವಿಶೇಷ ಸುದ್ದಿ ಮಾಡಲೇ ಇಲ್ಲ. ಇಂದಿಗೂ ಮೇಲ್ವರ್ಣೀಯ ಜನರು ಮಾಡುವ ಭ್ರಷ್ಟಾಚಾರ, ಹಿಂದುಳಿದವರ್ಗದ ಜನರು ಮಾಡಿದ ಭ್ರಷ್ಟಾಚಾರದಷ್ಟು ಸುದ್ದಿಯಾಗುವುದಿಲ್ಲ. ಇದು ವಾಸ್ತವ.
ಆಶಿಷ್ ನಂದಿಯ ಮಾತುಗಳಿಗೆ ಪ್ರಚಾರ ಕೊಟ್ಟ ಮಾಧ್ಯಮಗಳು, ನಂದಿ ಬಳಿಕ ತಿದ್ದಿ ನೀಡಿದ ಹೇಳಿಕೆಗೆ ಪ್ರಚಾರ ನೀಡಲಿಲ್ಲ. ತನ್ನ ಮಾತನ್ನು ಮುಂದುವರಿಸುತ್ತಾ “ಭ್ರಷ್ಟಾಚಾರದಲ್ಲಿ ಸಿಕ್ಕಿ ಬೀಳುವವರು ಹೆಚ್ಚಾಗಿ ಒಬಿಸಿ, ಎಸ್ಸಿ ಹಾಗೂ ಎಸ್ಟಿ ಸಮುದಾಯದವರು. ಯಾಕೆಂದರೆ ಅವರಿಗೆ ಮೇಲ್ಜಾತಿಯವರಂತೆ ತಮ್ಮನ್ನು ರಕ್ಷಿಸಿಕೊಳ್ಳುವ ದಾರಿ ಗೊತ್ತಿರುವುದಿಲ್ಲ” ಎಂದು ನಂದಿ ಸ್ಪಷ್ಟೀಕರಣ ನೀಡಿದ್ದರು. “20 ರೂ. ಬ್ಲಾಕ್ ಟಿಕೆಟ್ ಮಾರುತ್ತಿರುವವನ ಬಂಧನ ಇಲ್ಲಿ ಸುದ್ದಿಯಾಗುತ್ತದೆ. ಆದರೆ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಲೇ ಹೋಗುತ್ತಿದ್ದಾರೆ. ಅದಕ್ಕೆ ಮಹತ್ವವೇ ಸಿಗುವುದಿಲ್ಲ...” ಎಂದೂ ನಂದಿ ಹೇಳಿದ್ದರು. ಅದೇನೇ ಇರಲಿ. ನಂದಿ ಈ ದೇಶದ ಶ್ರೇಷ್ಠ ಚಿಂತಕ.
ನಾಲಗೆಯಿಂದ ಜಾರಿದ ಒಂದು ವಾಕ್ಯವನ್ನು ಹಿಡಿದು ನಂದಿಯವರನ್ನು ತೂಕ ಮಾಡುವುದು ಸರಿಯಲ್ಲ. ಈ ದೇಶದ ಸಂಕಟದ ಸಮಯದಲ್ಲಿ ಅವರು ಧ್ವನಿಯೆತ್ತುವ ಎದೆಗಾರಿಕೆಯನ್ನು ತೋರಿದವರು. ಆದುದರಿಂದ, ನಾವು ಆಶಿಶ್ ನಂದಿಯವರ ಮಾತಿನೊಳಗಿರುವ ನಿಜವಾದ ಧ್ವನಿಯನ್ನಷ್ಟೇ ಪರಿಗಣಿಸಬೇಕಾಗಿದೆ.  ಹಾಗೆಯೇ ನಂದಿಯವರ ಮಾತುಗಳನ್ನು ರಾಜಕೀಯ ಮಾಡುತ್ತಿರುವವರ ರಾಜಕೀಯವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.

No comments:

Post a Comment