Sunday, January 27, 2013

ಗಡ್ಕರಿಯಿಂದ ಸೇಡಿನ ಮಾತು- ಜನವರಿ -26-2013

“ಬಿಜೆಪಿ ಸರಕಾರ ಬಂದಾಗ ಅವರನ್ನು ಯಾರೂ ರಕ್ಷಿಸಲಾರರು” ಈ ಹೇಳಿಕೆಯನ್ನು ನೀಡಿರುವುದು ಬಿಜೆಪಿಯ ನಿರ್ಗಮನ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ.   ನೂತನ ರಾಷ್ಟ್ರೀಯ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದ ಒಂದು ದಿನದ ಬಳಿಕ ಅವರು ಈ ರೀತಿ ಎಚ್ಚರಿಕೆಯನ್ನು ನೀಡಿದ್ದಾರೆ. ಬಿಜೆಪಿ ಸ್ವಯಂ ಘೋಷಿತ ದೇಶಭಕ್ತರ ಪಕ್ಷ. ಬಹುಶಃ ಅವರು  ಈ ಎಚ್ಚರಿಕೆಯನ್ನು ನೀಡಿರುವುದು ಯಾವುದೋ ಭಯೋತ್ಪಾದಕರ ಸಂಘಟನೆಗೆ, ಭ್ರಷ್ಟಾಚಾರಿಗಳಿಗೆ ಅಥವಾ ದಿಲ್ಲಿ ಅತ್ಯಾಚಾರ ಆರೋಪಿಗಳಿಗೆ, ಅಥವಾ ಭ್ರಷ್ಟ ರಾಜಕಾರಣಿ ಗಳಿಗೋ ಅಲ್ಲ. ಈ ಬೆದರಿಕೆಯನ್ನು ಅವರು ಒಡ್ಡಿರುವುದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ. ಈ ಅಧಿಕಾರಿಗಳು ಮಾಡಿದ ತಪ್ಪಾದರೂ ಏನಪ್ಪ? ಲೋಕಾಯುಕ್ತರಿಂದ ದಾಳಿಗೆ ಈಡಾಗಿದ್ದಾರೆಯೋ? ಯಾರೋ ಭ್ರಷ್ಟರನ್ನು ರಕ್ಷಿಸಿದ್ದಾರೆಯೋ? ಅಥವಾ ಲಂಚಗಿಂಚ ಏನಾದರೂ ಕೇಳಿದ್ದಾರೆಯೋ? ಎಂದು ನೋಡಿದರೆ ಅಂತಹ ಆರೋಪಗಳೇನೂ ಈ ಅಧಿಕಾರಿಗಳ ಮೇಲಿಲ್ಲ.
ಒಬ್ಬ ಹಿರಿಯ ಬಿಜೆಪಿ ಮುಖಂಡನ ಅವ್ಯವಹಾರಕ್ಕೆ ಸಂಬಂಧಿಸಿ, ಆತನ ಕೆಲವು ಸಂಸ್ಥೆಗಳ ಮೇಲೆ ಈ ಅಧಿಕಾರಿಗಳು ದಾಳಿ ಮಾಡಿದ್ದರು ಮತ್ತು ಆ ಬಿಜೆಪಿ ಮುಖಂಡ ಸ್ವತಃ ನಿತಿನ್ ಗಡ್ಕರಿಯವರೇ ಆಗಿದ್ದರು.ನಿತಿನ್ ಗಡ್ಕರಿಯ ಪಾತಕತನದ ಪರಮಾವಧಿಯಾಗಿದೆ ಈ ಬಹಿರಂಗ ಬೆದರಿಕೆ. ಈ ಮೂಲಕ ರಾಜಕಾರಣಿಗಳು ಅಧಿಕಾರಕ್ಕೆ ಬಂದ ತಕ್ಷಣ ವಿವಿಧ ಅಧಿಕಾರಿಗಳನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವುದು ಸಾಬೀತಾಗಿದೆ. “ಅಧಿಕಾರಕ್ಕೆ ಬಂದರೆ ನನ್ನ ವಿರುದ್ಧ ದಾಳಿ ನಡೆಸಿದ ಅಧಿಕಾರಿಗಳನ್ನು ಯಾರೂ ರಕ್ಷಿಸಲಾರರು” ಎಂಬ ಹೇಳಿಕೆ,   ತನ್ನ ವಿರುದ್ಧ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ನೇರ ವಾಗಿ ಒಡ್ಡಿದ ಬೆದರಿಕೆಯಾಗಿದೆ.
‘ಯಾರೂ ರಕ್ಷಿಸಲಾರರು’ ಎನ್ನುವ ಪದದ ಅರ್ಥವಾದರೂ ಏನು? ಇದು ಜೀವ ಬೆದರಿಕೆಯೇ? ಹೀಗೆ ಎಲ್ಲ ರಾಜಕಾರಣಿಗಳೂ ತಮ್ಮ ವಿರುದ್ಧ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಾ ಹೋದರೆ, ಈ ದೇಶದ ಭ್ರಷ್ಟ ರಾಜಕಾರಣಿಗಳನ್ನು ವಿಚಾರಣೆ ನಡೆಸುವುದಾದರೂ ಹೇಗೆ? ಈ ಹಿಂದೆಲ್ಲ, ರಾಜಕಾರಣಿಗಳು ಗುಟ್ಟಾಗಿ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದರು. ರಾಜಕೀಯ ಸೇಡನ್ನು ತೀರಿಸುತ್ತಿದ್ದರು. ಆದರೆ, ಇಂದು ನಿತಿನ್ ಗಡ್ಕರಿಯವರು ದೇಶದ ಮುಂದೆಯೇ ಅಧಿಕಾರಿಗಳನ್ನು ಬೆದರಿಸಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಯಾಕೆ ಅಧಿಕಾರಕ್ಕೆ ತರಬಾರದು ಎನ್ನುವುದನ್ನು ಜನರಿಗೆ ಪರೋಕ್ಷವಾಗಿ ತಿಳಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಪದವಿಯನ್ನು ಬರೇ ಹಣದಿಂದಲೇ ಕೊಂಡುಕೊಂಡವರು ನಿತಿನ್ ಗಡ್ಕರಿ. ಆರೆಸ್ಸೆಸ್‌ಗೆ ಹಣದ ಚೀಲಗಳನ್ನು ದಾಟಿಸುತ್ತಾ, ಆ ಸಂಘಟನೆಯ ಪ್ರೀತಿಯ ಕೂಸು ಎಂದು ಹೆಸರಾದವರು. ಇಡೀ ಬಿಜೆಪಿಯನ್ನು ಭ್ರಷ್ಟಾತಿ ಭ್ರಷ್ಟವಾಗಿಸಿದ, ಅದರ ವರ್ಚಸ್ಸನ್ನು ಸರ್ವನಾಶಗೊಳಿಸಿದ ಹೆಗ್ಗಳಿಕೆ ಗಡ್ಕರಿಯವರಿಗೆ ಸೇರಬೇಕು. ಅವರ ಅವ್ಯವಹಾರ ಒಂದೊಂದೇ ಹೊರಗೆ ಬೀಳುತ್ತಿದ್ದ ಹಾಗೆಯೇ, ಆರೆಸ್ಸೆಸ್ ಅವರನ್ನು ರಕ್ಷಿಸಲು ತನ್ನ ಲಾಠಿಯ ಜೊತೆಗೆ ಸಜ್ಜಾಗಿ ನಿಂತಿತ್ತು. ಕೊನೆಯ ಗಳಿಗೆಯವರೆಗೂ ನಿತಿನ್ ಗಡ್ಕರಿಯವರೇ ಮುಂದಿನ ಅಧ್ಯಕ್ಷರು ಎಂದು ನಿರ್ಧರಿಸಲಾಗಿತ್ತು.
ಆದರೆ ಆಯ್ಕೆಯ ದಿನವೇ ಅವರ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆದಿರುವುದು  ನಿತಿನ್ ಗಡ್ಕರಿಯವರಿಗೆ ಬಹುದೊಡ್ಡ ಮುಜುಗರಕ್ಕೆ ಕಾರಣವಾಯಿತು. ಅವರು ಅಧ್ಯಕ್ಷ ಪದವಿಯನ್ನು ಬಿಟ್ಟುಕೊಡಲೇ ಬೇಕಾಯಿತು. ನರೇಂದ್ರ ಮೋದಿ, ಯಶವಂತ್ ಸಿನ್ಹಾ ಆ ದಾಳಿಯನ್ನು ಮುಂದಿಟ್ಟುಕೊಂಡು, ಗಡ್ಕರಿ ಅಧ್ಯಕ್ಷ ಪದವಿ ತೊರೆಯಲೇ ಬೇಕಾದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದರು. ಇದೀಗ ಗಡ್ಕರಿಯವರ ಸಿಟ್ಟು, ಪಕ್ಷದೊಳಗಿನ ನಾಯಕರ ಬದಲಿಗೆ, ಐಟಿ ಅಧಿಕಾರಿಗಳ ಮೇಲೆ ತಿರುಗಿದೆ. ಆದುದರಿಂದಲೇ ಬಿಜೆಪಿಗೆ ಅಧಿಕಾರ ಮರಳಿ ದೊರಕಿದರೆ, ಅಧಿಕಾರಿಗಳಿಗೆ ಒಂದು ಗತಿ ಕಾಣಿಸುವುದೇ ಸರಿ ಎಂದು ಬೆದರಿಸಿ ಬಿಜೆಪಿಯ ಮುಖಂಡರಿಗೆ ಮತ್ತೆ ಮುಜುಗರ ಸೃಷ್ಟಿಸಿದ್ದಾರೆ.
ಗಡ್ಕರಿಯವರ ಈ ಹೇಳಿಕೆಗೆ ಬಿಜೆಪಿ ಮೌನವಾಗಿದೆ. ಕನಿಷ್ಠ ಆ ಹೇಳಿಕೆಗೂ ಬಿಜೆಪಿಗೂ ಸಂಬಂಧವಿಲ್ಲ ಎಂದಾದರೂ ಹೇಳಬೇಕಾಗಿತ್ತು. ಬದಲಿಗೆ, ಮೌನ ತಾಳಿ ಗಡ್ಕರಿಯವರ ಮಾತುಗಳನ್ನು ಪರೋಕ್ಷವಾಗಿ ಸಮರ್ಥಿಸಿದಂತಾಗಿದೆ. ಬಹುಶಃ ಮುಂದಿನ ದಿನಗಳಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಇದನ್ನು ಸೇರಿಸಿದರೆ ಅಚ್ಚರಿಯಿಲ್ಲ. ದೇಶವನ್ನು ಅಭಿವೃದ್ಧಿಗೊಳಿಸುತ್ತೇವೆ, ಬಡವರನ್ನು ಮೇಲೆತ್ತುತ್ತೇವೆ, ಭ್ರಷ್ಟರನ್ನು ಅಡಗಿಸುತ್ತೇವೆ ಎಂದು ಹೇಳುವ ಬದಲು, ಅಧಿಕಾರವನ್ನು ತನ್ನ ವೈಯಕ್ತಿಕ ದ್ವೇಷಕ್ಕೆ ಬಳಸುತ್ತೇನೆ ಎಂದು ಗಡ್ಕರಿ ಬಹಿರಂಗವಾಗಿ ಘೋಷಿಸಿದುದು, ಇಂದಿನ ರಾಜಕೀಯ ಅಧಃಪತನದ ಆಳವನ್ನು ಸೂಚಿಸುತ್ತದೆ.
ತಮ್ಮ ಕರ್ತವ್ಯವನ್ನು ನಿರ್ವಹಿಸಿದ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಗಡ್ಕರಿಯ ವಿರುದ್ಧ ತಕ್ಷಣ ವೊಕದ್ದಮೆ ಹೂಡಬೇಕಾಗಿದೆ. ಈ ಕುರಿತಂತೆ ಗಡ್ಕರಿ ಯವರು ನ್ಯಾಯಾಲಯಕ್ಕೆ ಮತ್ತು ಈ ದೇಶದ ಜನರಿಗೆ ಸ್ಪಷ್ಟನೆಯನ್ನೂ ನೀಡಬೇಕಾಗಿದೆ. ಜೊತೆಗೆ ಅವರ ವಿರುದ್ಧ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಭದ್ರತೆಯ ಅಗತ್ಯವನ್ನೂ ಇದು ಒತ್ತಿ ಹೇಳಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಬಿಜೆಪಿಗೆ ಯಾಕೆ ಓಟು ನೀಡಿ ಗೆಲ್ಲಿಸಬಾರದು ಎನ್ನುವುದಕ್ಕೂ ಗಡ್ಕರಿಯವರ ಮಾತುಗಳೇ ನಮಗೆ ಮಾರ್ಗದರ್ಶಿಯಾಗಬೇಕು.

No comments:

Post a Comment