Wednesday, January 9, 2013

ಪಾಕಿಸ್ತಾನ ಸೇನೆಯಿಂದ ಗಡಿ ಉಲ್ಲಂಘನೆ :ಇಬ್ಬರು ಭಾರತೀಯ ಯೋಧರ ಬರ್ಬರ ಹತ್ಯೆ



 ಜನವರಿ -09-2013

ಜಮ್ಮು: ಪಾಕಿಸ್ತಾನದ ಸೇನಾ ಪಡೆಗಳು ಮಂಗಳವಾರ ಭಾರತದ ಗಡಿಯನ್ನು ಅತಿಕ್ರಮಿಸಿ ಸೇನಾ ಗಸ್ತು ತಂಡವೊಂದರ ಮೇಲೆ ಹಲ್ಲೆ ನಡೆಸಿ ಇಬ್ಬರು ಭಾರತೀಯ ಯೋಧರನ್ನು ಕೊಂದು ಹಾಕಿದ್ದಾರೆ ಎಂದು ಸೇನಾ ಮೂಲ ತಿಳಿಸಿದೆ.ಪೂಂಛ್ ಜಿಲ್ಲೆಯ ನಿಯಂತ್ರಣ ರೇಖೆಯಲ್ಲಿ ಈ ಬರ್ಬರ ದಾಳಿ ನಡೆದಿದ್ದು, ಪಾಕಿಸ್ತಾನಿ ಸೈನಿಕರು ಭಾರತೀಯ ಗಡಿಯೊಳಗೆ 100 ಮೀಟರ್‌ಗಳಷ್ಟು ಒಳಗೆ ನುಗ್ಗಿ ಗಸ್ತು ತಂಡದ ಮೇಲೆ ದಾಳಿ ನಡೆಸಿದ್ದಾರೆ. ಅವರು ಲ್ಯಾನ್ಸ್ ನಾಯಕ್‌ಗಳಾದ ಹೇಮರಾಜ್ ಹಾಗೂ ಸುಧಾಕರ ಸಿಂಗ್ ಎಂಬವರ ಹತ್ಯೆ ನಡೆಸಿದ್ದು, ಇತರ ಇಬ್ಬರು ಸೈನಿಕರನ್ನು ಗಾಯಗೊಳಿಸಿದ್ದಾರೆನ್ನಲಾಗಿದೆ. ಸೈನಿಕರ ಹತ್ಯೆಯನ್ನು ಭಾರತೀಯ ಭೂ ಸೇನೆ ಖಚಿತಪಡಿಸಿದೆ. ಪಾಕಿಸ್ತಾನದ ಗಡಿ ಕಾರ್ಯಾಚರಣೆ ತಂಡವು ಪೂಂಛ್ ಜಿಲ್ಲೆಯ ಕೃಷ್ಣ ಘಾಟಿ ಪ್ರದೇಶದಲ್ಲಿ ಭಾರತೀಯ ಭೂ ಪ್ರದೇಶಕ್ಕೆ ನುಗ್ಗಿ ಈ ದಾಳಿ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.
ಇದೊಂದು ಪಾಕಿಸ್ತಾನ ಸೈನಿಕರ ಬೆಂಬಲದಲ್ಲಿ ನಡೆದಿರುವ ಗಡಿ ನುಸುಳುವಿಕೆಯ ಯತ್ನ ಹಾಗೂ ಇತ್ತೀಚೆಗೆ ನಡೆಯುತ್ತಿರುವ ಕದನ ವಿರಾಮ ಉಲ್ಲಂಘನೆಯ ಗಮನಾರ್ಹ ಹೆಚ್ಚಳದ ಘಟನೆಯಾಗಿದೆಯೆಂದು ಸೇನೆಯ ಉಧಂಪುರ ಮೂಲದ ಉತ್ತರಕಮಾಂಡ್ ಹೇಳಿಕೆಯೊಂದನ್ನು ನೀಡಿದೆ. ಅವರ ಮಾಮೂಲು ಸೈನಿಕರ ತಂಡವೊಂದು ಜ.8ರಂದು ಮೆಂಧರ್ ವಲಯದ ನಿಯಂತ್ರಣ ರೇಖೆಯನ್ನು ನುಸುಳಿ ಒಳಬಂದು, ಅರಣ್ಯ ಪ್ರದೇಶದ ದಟ್ಟ ಮಂಜು ಹಾಗೂ ಇಬ್ಬನಿಯ ದುರ್ಲಾಭ ಪಡೆದು ಭಾರತೀಯ ಸೇನಾ ನೆಲೆಯತ್ತ ಮುಂದುವರಿಯುತ್ತಿದ್ದರು.
ಆ ವೇಳೆ ಕಟ್ಟೆಚ್ಚರಿಕೆ ಪ್ರದೇಶದ ಗಸ್ತು ತಂಡವೊಂದು ಅವರನ್ನು ಗಮನಿಸಿ ತಡೆಯಿತು. ಪಾಕಿಸ್ತಾನಿ ಮತ್ತು ಭಾರತೀಯ ಸೈನಿಕರ ನಡುವೆ ಗುಂಡು ವಿನಿಮಯ ಅರ್ಧ ತಾಸಿನ ಕಾಲ ಮುಂದುವರಿಯಿತು. ಆ ಬಳಿಕ ನುಸುಳುಕೋರರು ನಿಯಂತ್ರಣ ರೇಖೆಯತ್ತ ಹಿಂಜರಿಯ ತೊಡಗಿದರು.
ಪಾಕಿಸ್ತಾನದ ಪಡೆಗಳೊಂದಿಗೆ ಹೋರಾಟದಲ್ಲಿ ಲ್ಯಾನ್ಸ್ ನಾಯಕ್‌ಗಳಾದ ಹೇಮರಾಜ್ ಹಾಗೂ ಸುಧಾಕರ ಸಿಂಗ್ ಎಂಬವರು ಬಲಿದಾನವಾದರೆಂದು ತಿಳಿಸಿರುವ ಹೇಳಿಕೆ ಹೆಚ್ಚಿನ ವಿವರ ನೀಡಿಲ್ಲ. ಇದೊಂದು ಪಾಕ್ ಸೇನೆಯ ‘ತೀವ್ರ ಪ್ರಚೋದನೆ’ಯಾಗಿದ್ದು, ಅಧಿಕೃತ ಮಾರ್ಗದ ಮೂಲಕ ಈ ಬಗ್ಗೆ ತೀವ್ರ ಪ್ರತಿಭಟನೆ ಸಲ್ಲಿಸಲಾಗುವುದೆಂದು ಅದು ಹೇಳಿದೆ. ಘಟನೆಯ ಬಗ್ಗೆ ವಿದೇಶಾಂಗ ಸಚಿವಾಲಯವು ರಕ್ಷಣಾ ಸಚಿವಾಲಯದೊಡನೆ ಸಂಪರ್ಕದಲ್ಲಿದೆ

No comments:

Post a Comment