Friday, January 25, 2013

ಅತಿ ಗಣ್ಯರ ಹೆಸರಿನಲ್ಲಿ ಅಯೋಗ್ಯರಿಗೆ ರಕ್ಷಣೆ ಜನವರಿ -25-2013

ಶಾಸಕರು, ಸಂಸದರಿಗೂ ಗೂಟದ ಕಾರು ನೀಡುವ ಸರಕಾರದ ಕ್ರಮದ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರವಾದ ಆಕ್ಷೇಪ ವ್ಯಕ್ತಪಡಿಸಿದೆ. ರಾಜಕಾರಣಿಗಳಿಗೆ ಒದಗಿಸಲಾಗಿರುವ ವಿವಿಐಪಿ ಭದ್ರತೆಗೆ ಸಂಬಂಧಿಸಿದ ವಿವರಗಳನ್ನು ಮೂರು ವಾರಗಳ ಒಳಗೆ ಸಲ್ಲಿಸುವಂತೆ ಎಲ್ಲ ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅದು ಸೂಚನೆ ನೀಡಿದೆ. ಕೆಂಪು ದೀಪದ ಕಾರಿನ ದುರುಪಯೋಗದ ಬಗ್ಗೆ ಉತ್ತರ ಪ್ರದೇಶದ ನಾಗರಿಕರೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿಂಘ್ವಿಯವರಿದ್ದ ಪೀಠ, ಎಷ್ಟು ಮಂದಿಗೆ, ಯಾವ ಭದ್ರತೆಯನ್ನು ಒದಗಿಸಲಾಗಿದೆ, ಎಷ್ಟು ಪೊಲೀಸರನ್ನು ಇದಕ್ಕಾಗಿ ನಿಯೋಜಿಸಲಾಗಿದೆ? ಎಷ್ಟು ಖರ್ಚು ಮಾಡಲಾಗಿದೆ ಎನ್ನುವ ವಿವರಗಳನ್ನು ಒಳಗೊಂಡ ಪ್ರಮಾಣ ಪತ್ರ ಸಲ್ಲಿಸುವಂತೆ ತಿಳಿಸಿದೆ. ಈ ದೇಶದಲ್ಲಿ ಗಣ್ಯರ ಹೆಸರಿನಲ್ಲಿ ಅತಿ ಗಣ್ಯರೆಂದು ಭದ್ರತೆ ಪಡೆಯುತ್ತಿರುವವರ ಪಟ್ಟಿಯನ್ನು ಗಮನಿಸಿದರೆ ಆತಂಕವುಂಟಾಗುತ್ತದೆ. ಇತ್ತೀಚೆಗಂತೂ ಮಂತ್ರಿಗಳು ಮಾತ್ರವಲ್ಲ, ನಿಗಮ-ಮಂಡಳಿಗಳ ಅಧ್ಯಕ್ಷರು, ಹಿರಿಯ ಅಧಿಕಾರಿಗಳೂ ಕೆಂಪು ದೀಪದ ಕಾರಿನಲ್ಲಿ ವಿಜೃಂಭಿಸುತ್ತಿದ್ದಾರೆ.
ಬಹುತೇಕ ಸಮಾಜ ವಿರೋಧಿ, ಅಪರಾಧ ಹಿನ್ನೆಲೆ ಹೊಂದಿರು ವವರು ಯಾವುದೋ ಚುನಾವಣೆಯಲ್ಲಿ ಗೆದ್ದು-ಇಲ್ಲವೇ ನೇಮಕಗೊಂಡು ಅಧಿಕಾರಕ್ಕೆ ಬಂದನಂತರ ಸರಕಾರದಿಂದ ಇಂತಹ ರಕ್ಷಣೆಯನ್ನು ಪಡೆಯುತ್ತಾರೆ. ಚುನಾವಣೆಯ ಗೆಲುವು ಇವರ ಅಪರಾಧಗಳಿಗೆ ಮೋಕ್ಷ ನೀಡಿ ಅತಿ ಗಣ್ಯರ ಸಾಲಿನಲ್ಲಿ ತಂದು ನಿಲ್ಲಿಸುತ್ತದೆ. ಈ ಸೌಕರ್ಯವನ್ನು ಬೇಕಾಬಿಟ್ಟಿಯಾಗಿ ಬಳಸಿ ಕೊಂಡು ಇವರು ತಮ್ಮ ಹಳೆಯ ದಂಧೆಯನ್ನು ಮುಂದುವರಿಸುತ್ತಾರೆ ಎನ್ನುವುದಕ್ಕೆ ಒಂದೆರಡಲ್ಲ, ನೂರಾರು ಉದಾಹರಣೆಗಳನ್ನು ಕೊಡಬಹುದು.
ಕರ್ನಾಟಕವನ್ನು ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ ರಾಜ್ಯಪಾಲ ಹಂಸರಾಜ ಭಾರದ್ವಾಜರೇ ಬಹಿರಂಗವಾಗಿ ಹೇಳಿರುವಂತೆ ರಾಜ್ಯ ಸಚಿವ ಸಂಪುಟದಲ್ಲಿ ಶೇ.60 ಮಂತ್ರಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿದವರಾಗಿದ್ದಾರೆ. ರಾಜಕೀಯವೆಂದರೆ ಇವರಿಗೆ ವ್ಯಾಪಾರವಾಗಿದೆ. ಈ ವ್ಯಾಪಾರದಲ್ಲಿ ಮೋಸ, ವಂಚನೆ ಸಾಮಾನ್ಯ. ಇದನ್ನು ಮೀರಿ ಅಪರಾಧ ಕೃತ್ಯಗಳನ್ನು ಎಸಗಿದವರೂ ರಕ್ಷಣೆ ಪಡೆಯಲು ರಾಜಕೀಯಕ್ಕೆ ಬರುತ್ತಾರೆ. ಅಧಿಕೃತ ಅಂಕಿ-ಅಂಶಗಳ ಪ್ರಕಾರ ಸಂಸತ್ತಿನಲ್ಲಿ ಮತ್ತು ಶಾಸನಸಭೆಗಳಲ್ಲಿ ಇಂತಹ ಆರೋಪ ಹೊಂದಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.
ಮೊದಲು ಎಲ್ಲರಿಗೂ ಅನವಶ್ಯ ಭದ್ರತಾ ವ್ಯವಸ್ಥೆ ಇರಲಿಲ್ಲ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ಲೋಕಸಭಾಧ್ಯಕ್ಷರು ಹಾಗೂ ಮುಖ್ಯನ್ಯಾಯಮೂರ್ತಿ ಹಾಗೂ ರಾಜ್ಯಗಳ ಮುಖ್ಯಮಂತ್ರಿಗಳು ಇಂತಹ ಸೌಕರ್ಯವನ್ನು ಪಡೆಯುತ್ತಿದ್ದರು. ಆದರೆ ಈಗ ಚಿಲ್ಲರೆ ಪುಢಾರಿಗಳೂ ಪೊಲೀಸ್ ಪೈಲಟ್ ವಾಹನ ವನ್ನು ಜೊತೆಗಿಟ್ಟುಕೊಂಡು ಕೆಂಪುದೀಪದ ಕಾರಿನಲ್ಲಿ ಒಡಾಡುತ್ತಿದ್ದಾರೆ.
ರಾಜಧಾನಿ ದಿಲ್ಲಿಯನ್ನು ಉದಾಹರಣೆ ಯಾಗಿ ತೆಗೆದುಕೊಂಡರೆ ಅಲ್ಲಿರುವ 86ಸಾವಿರ ಪೊಲೀಸರಲ್ಲಿ 17ಸಾವಿರ ಪೊಲೀಸರನ್ನು ಅತಿ ಗಣ್ಯರ ಭದ್ರತೆಗೆ ನಿಯೋಜಿಸಲಾಗಿದೆ. ಒಂದೆಡೆ ಯುವತಿ ಯರು ಬಸ್‌ನಲ್ಲೇ ಅತ್ಯಾಚಾರಕ್ಕೆ ಒಳಗಾಗಿ ಚಿತ್ರಹಿಂಸೆ ಅನುಭವಿಸಿ ಬೀದಿ ಹೆಣಗಳಾಗಿ ಬೀಳುತ್ತಿದ್ದರೆ, ಇನ್ನೊಂದೆಡೆ ಮಂತ್ರಿಗಳು ಮತ್ತು ಸಂಸದರು ಪೊಲೀಸ್‌ರ ಬಿಗಿ ಕಾವಲಿನಲ್ಲಿ ಓಡಾಡುತ್ತಾರೆ. ಕೆಲವು ರಾಜಕಾರಣಿಗಳು ಇಂಥ ರಕ್ಷಣೆ ಪಡೆದೇ ಅಪರಾಧ ಕೃತ್ಯಗಳನ್ನು ಎಸಗುತ್ತಾರೆ.
 
ದೇಶದಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ಅಪರಾಧ ಪ್ರಮಾಣವೂ ಜಾಸ್ತಿಯಾಗುತ್ತಿದೆ. ಆದರೆ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಬಲವಿಲ್ಲ. ಈಗಿರುವ ಪೊಲೀಸ್ ಬಲದಲ್ಲೇ 50ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಸುಮಾರು 17 ಸಾವಿರದಷ್ಟಿರುವ ಗಣ್ಯರ ಮತ್ತು ಅತಿ ಗಣ್ಯರ ಕಾವಲಿಗೆ ಬಳಸಲಾಗುತ್ತಿದೆ. ಇನ್ನು ಬಾಬರಿ ಮಸೀದಿ ಧ್ವಂಸದ ಆರೋಪ ಹೊತ್ತಿರುವ ಅಶೋಕ್ ಸಿಂಘಾಲ್, ಪ್ರವೀಣ್ ತೋಗಾಡಿಯಾರಂಥವರು ಇಂತಹ ಭದ್ರತೆ ಪಡೆಯುತ್ತಾರೆ. ಹೀಗಾಗಿ ಜನಸಾಮಾನ್ಯರಿಗೆ ಇಲ್ಲದ ರಕ್ಷಣೆ ಅತಿ ಗಣ್ಯರಿಗೆ ದೊರತಂತಾಗಿದೆ. ನಿಜ.
ದೇಶದ ಉನ್ನತ ಸ್ಥಾನದಲ್ಲಿರುವವರ ಜೀವ ಅಪಾಯದಲ್ಲಿರುತ್ತದೆ. ಅವರಿಗೆ ರಕ್ಷಣೆ ಒದಗಿಸಲೇ ಬೇಕಾಗುತ್ತದೆ. ದಿಟ್ಟ ಹಾಗೂ ತಾರತಮ್ಯ ರಹಿತ ನಿರ್ಧಾರ ಕೈಗೊಳ್ಳುವವರಿಗೆ ಭದ್ರತೆ ನೀಡಿದರೆ ತಪ್ಪಲ್ಲ. ಹಾಗೆಂದು ಕೋಮುಗಲಭೆಗೆ ಪ್ರಚೋದನೆ ಮಾಡುವವರಿಗೆ, ಅತ್ಯಾಚಾರ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುವವರಿಗೆ, ಕುಡಿದು ಗಟಾರದಲ್ಲಿ ಬೀಳುವವರಿಗೆ, ಸಾರ್ವಜನಿಕ ಸಂಪತ್ತನ್ನು ಕೊಳ್ಳೆ ಹೊಡೆದವರಿಗೆ ಈ ರೀತಿ ಭದ್ರತೆ ನೀಡುತ್ತಾ ಹೋದರೆ ಜನ ಏನೆಂದು ಕೊಳ್ಳುತ್ತಾರೆಂಬ ಬಗ್ಗೆ ಸರಕಾರ ವಿಚಾರ ಮಾಡಬೇಕಾಗಿದೆ.
ಇತ್ತೀಚೆಗಂತೂ ರಾಜಕಾರಣದ ಬಗ್ಗೆ ಜನ ರೋಸಿ ಹೋಗಿದ್ದಾರೆ. ತಮ್ಮ ಕಣ್ಣೆದುರಿಗೇ ನಾನಾ ಪಾತಕ ಕೃತ್ಯವೆಸಗಿದವರು ಹಣದ ಹೊಳೆ ಹರಿಸಿ ಚುನಾವಣೆಗಳಲ್ಲಿ ಗೆದ್ದು ಬರುತ್ತಿದ್ದಾರೆ. ಗೆದ್ದು ಬಂದವರು ಭದ್ರತಾ ಕಾವಲಿನಲ್ಲಿ ಓಡಾಡುತ್ತಾರೆ. ತಮ್ಮ ಬೇಡಿಕೆಗಳಿಗೆ ಹೋರಾಡುತ್ತಿರುವ ಜನರ ಮೇಲೆ ಪೊಲೀಸ್ ಬಲವನ್ನು ಬಳಸುವ ಸರಕಾರ ಇಂತಹ ಭ್ರಷ್ಟರಿಗೆ ರಕ್ಷಣೆ ನೀಡುತ್ತವೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಸಕಾಲಿಕವಾಗುತ್ತದೆ.

No comments:

Post a Comment