Thursday, January 24, 2013

ಗಡ್ಕರಿ ಹೋದದ್ದೇ ಲಾಭ ಜನವರಿ -24-2013

ಕಾಂಗ್ರೆಸ್ ತನ್ನ ನಾಯಕನನ್ನು ಘೋಷಿಸಿದ ಬೆನ್ನಿಗೇ, ಬಿಜೆಪಿ ತನ್ನ ನಾಯಕನನ್ನೂ ಘೋಷಿಸಿದೆ. ಆದರೆ ಕಾಂಗ್ರೆಸ್ ಪಕ್ಷದಷ್ಟು ಸಲೀಸಾಗಿ ಈ ಘೋಷಣೆಯನ್ನು ಮಾಡಲು ಬಿಜೆಪಿಗೆ ಸಾಧ್ಯವಾಗಲಿಲ್ಲ. ನಿತಿನ್ ಗಡ್ಕರಿ ಎಸೆಯಲು ಆಗದ, ಹೊರಲು ಆಗದ ಹೆಣಭಾರವಾಗಿ ಬಿಜೆಪಿಯನ್ನು ಕಳೆದ ಒಂದು ವರ್ಷದಿಂದ ಕಾಡುತ್ತಿದ್ದರು. ಗಡ್ಕರಿ ಪಕ್ಷದ ಅಧ್ಯಕ್ಷರಾದಾಗ, ಮಾಧ್ಯಮಗಳು ಅವರನ್ನು ಬಣ್ಣಿಸಿದ ಪರಿಗೆ ಮಿತಿಯೇ ಇರಲಿಲ್ಲ. ತಮ್ಮ ಪಕ್ಷವನ್ನು ಮೇಲೆತ್ತಿ ನಿಲ್ಲಿಸುತ್ತಾರೆ ಎಂಬಂತೆ ಬಿಜೆಪಿಗರು ಕುಣಿದಾಡಿದ್ದರು. ಪ್ರಧಾನಿ ಅಭ್ಯರ್ಥಿಯಾಗುವ ಮಟ್ಟಕ್ಕೂ ಅವರನ್ನು ಬಿಂಬಿಸಿದ್ದರು. ಗಡ್ಕರಿಯವರ ಅರ್ಹತೆಗೆ ಅವರಲ್ಲಿದ್ದ ಹಣ ಮಾತ್ರ ಕಾರಣ ಎನ್ನುವುದು ಎಲ್ಲರಿಗೂ ತಿಳಿದ ಸತ್ಯವಾಗಿತ್ತು. ಹಣವನ್ನೇ ರಾಜಕೀಯ ಮೌಲ್ಯ ಎಂದು ತಿಳಿದುಕೊಂಡ ನಾಯಕ ಏನು ಮಾಡಬಹುದೋ ಅದನ್ನೇ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಡಿದರು. ಅವರ ಅವಧಿಯಲ್ಲಿ ಅಧಿಕಾರದಲ್ಲಿ ಇಲ್ಲದೆಯೇ ಬಿಜೆಪಿ ಹತ್ತು ಹಲವು ಭ್ರಷ್ಟಾಚಾರಗಳನ್ನು ಮೈಗೆ ಅಂಟಿಸಿಕೊಂಡಿತು.
ಮುಖ್ಯವಾಗಿ, ಕರ್ನಾಟಕ ರಾಜಕೀಯವನ್ನು ಕುಲಗೆಡಿಸುವುದರಲ್ಲಿ ಅವರು ಮಹತ್ವದ ಪಾತ್ರವನ್ನು ವಹಿಸಿದರು. ಸುಶ್ಮಾ ಸ್ವರಾಜ್‌ರಿಗೆ ಸಾಥ್ ನೀಡಿದರು. ಇಷ್ಟೆಲ್ಲ ಆದರೂ ಗಡ್ಕರಿ ಆರೆಸ್ಸೆಸ್‌ನ ಪ್ರೀತಿಯ ಕುವರನಾಗಿರುವುದರಿಂದ ಬಿಜೆಪಿ ಅವರನ್ನು ಸಹಿಸಲೇ ಬೇಕಾಗಿತ್ತು. ನಿನ್ನೆಯವರೆಗೂ ಆರೆಸ್ಸೆಸ್ ಗಡ್ಕರಿಯವರ ಬೆನ್ನಿಗೆ ನಿಂತಿತ್ತು. ಗಡ್ಕರಿಯವರೇ ಮುಂದಿನ ಪಕ್ಷಾಧ್ಯಕ್ಷರು ಎನ್ನುವುದು ತೀರ್ಮಾನವಾಗಿ ಬಿಟ್ಟಿತ್ತು. ನಿನ್ನೆ ನಡೆದ ಸಭೆಯಲ್ಲಿ ಅದು ಘೋಷಣೆಯಾಗಬೇಕಾಗಿತ್ತು.
ಆದರೆ ದುರದೃಷ್ಟವಶಾತ್, ನಿನ್ನೆಯೇ ಗಡ್ಕರಿಯವರ ವಿವಿಧ ಕಂಪೆನಿಗಳ ಮೇಲೆ ಐಟಿ ದಾಳಿ ನಡೆಯಿತು. ಇದರಿಂದಾಗಿ ಕೊನೆಯ ಕ್ಷಣದಲ್ಲಿ ಎಲ್ಲವೂ ಏರು ಪೇರಾಗಿ ಬಿಟ್ಟಿತು. ಆ ವರೆಗೆ ಸುದ್ದಿಯಲ್ಲೇ ಇರದ, ರಾಜ್‌ನಾಥ್ ಸಿಂಗ್‌ರ ಹೆಸರು ಮುಂದಕ್ಕೆ ಬಂತು. ಇಬ್ಬರ ನ್ಯಾಯದಿಂದಾಗಿ ರಾಜ್‌ನಾಥ್ ಸಿಂಗ್‌ಗೆ ಅಧ್ಯಕ್ಷ ಪಟ್ಟ ಒಲಿಯಿತು. ಹೀಗೆ ಕೊನೆಗೂ ಗಡ್ಕರಿ ಎಂಬ ಹೆಣ ಭಾರವನ್ನು ಬಿಜೆಪಿ ಚೆಲ್ಲಿ ನಿರಾಳ ನಿಟ್ಟುಸಿರು ಬಿಟ್ಟಿದೆ.
ಗಡ್ಕರಿ ಪಕ್ಷಾಧ್ಯಕ್ಷರಾಗಿ ಮುಂದುವರಿ ಯುತ್ತಾರೆಯೋ ಇಲ್ಲವೋ ಎನ್ನುವುದಷ್ಟೇ ಎಲ್ಲರಿಗೂ ಮುಖ್ಯ ವಿಷಯವಾಗಿತ್ತು. ಆದುದರಿಂದಲೇ, ರಾಜ್‌ನಾಥ್ ಸಿಂಗ್ ಅಧ್ಯಕ್ಷರಾದುದಕ್ಕಿಂತಲೂ, ಗಡ್ಕರಿ ನಿರ್ಗಮಿಸಿದುದೇ ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿದೆ. ಈ ಮೂಲಕ ಆರೆಸ್ಸೆಸ್‌ಗೂ ತೀರಾ ಇರುಸುಮುರುಸು ಉಂಟಾದಂತಾಗಿದೆ. ರಾಜ್‌ನಾಥ್ ಸಿಂಗ್‌ರ ಆಯ್ಕೆಯಿಂದ ಬಿಜೆಪಿಗೆ ಲಾಭವಾಗುತ್ತದೆಯೋ ಇಲ್ಲವೋ, ಆದರೆ ಗಡ್ಕರಿಯವರ ನಿರ್ಗಮನದಿಂದ ಬಿಜೆಪಿಗೆ ಲಾಭ ಇದ್ದೇ ಇದೆ. ಗಡ್ಕರಿಯವರ ಮೇಲೆ ಬಿಜೆಪಿಯೊಳಗೇ ವ್ಯಾಪಕ ಅಸಮಾಧಾನವಿದೆ.
ಆರೆಸ್ಸೆಸ್ ಬೆಂಗಾವಲಿಗೆ ಇಲ್ಲದೆ ಹೋಗಿದ್ದರೆ, ಗಡ್ಕರಿ ಎಂದೋ ರಾಜೀನಾಮೆ ನೀಡಿ, ಹೊರ ತೆರಳ ಬೇಕಾಗಿತ್ತು. ಇದೀಗ ಗಡ್ಕರಿ ಅನಾಯಾಸವಾಗಿ ನಿರ್ಗಮಿಸಿದುದರಿಂದ ಬಿಜೆಪಿಯೊಳಗೆ ಹಲವು ನಾಯಕರು ನಿಟ್ಟುಸಿರು ಬಿಟ್ಟರು. ಒಂದು ವೇಳೆ ಗಡ್ಕರಿ ಅಧ್ಯಕ್ಷರಾಗುವುದಾದಲ್ಲಿ, ಹಿರಿಯ ನಾಯಕ ಯಶವಂತ ಸಿನ್ಹಾ ಅವರ ವಿರುದ್ಧ ಸ್ಪರ್ಧಿಸುವ ಸವಾಲನ್ನು ಹಾಕಿದ್ದರು. ಹೀಗಾಗಿ ಬಿಜೆಪಿ ಭಾರೀ ಮುಜುಗರದಿಂದ ಪಾರಾಗಿದೆ.
ರಾಜ್‌ನಾಥ್ ಸಿಂಗ್‌ರಿಂದ ಬಿಜೆಪಿಗೆ ಎಷ್ಟರಮಟ್ಟಿಗೆ ಲಾಭವಾಗಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಅವರೇನೂ ಬಿಜೆಪಿಗೆ ಹೊಸ ಮುಖವಲ್ಲ. ಈ ಹಿಂದೆ ಒಮ್ಮೆ ಅಧ್ಯಕ್ಷರಾಗಿ ಆಯ್ಕೆಯಾದವರು. ಅವರ ಕುರಿತಂತೆ ಬಿಜೆಪಿ ನಾಯಕರಿಗೆ ವಿಶೇಷ ಒಲವೇನೂ ಇಲ್ಲ. ಈ ಹಿಂದೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ವಿಫಲ ರಾದವರು ರಾಜ್‌ನಾಥ್ ಸಿಂಗ್. ವಿವಿಧ ಕಾರಣಗಳಿಗೆ ವಿವಾದಕ್ಕೂ ಒಳಗಾಗಿದ್ದರು. ಅವರ ಕುಟುಂಬದ ಮೇಲೆ ಅವ್ಯವಹಾರದ ಆರೋಪಗಳು ಬಂದಿದ್ದವು. ಅವರ ಅವಧಿಯಲ್ಲಿಯೇ ಯುಪಿಎ ಸರಕಾರ ಇನ್ನಷ್ಟು ಗಟ್ಟಿಯಾದುದು. ಅವರ ವೈಫಲ್ಯ ವನ್ನು ಮುಂದಿಟ್ಟುಕೊಂಡೇ ಗಡ್ಕರಿಯ ವರನ್ನು ಆರಿಸಲಾಯಿತು.
ಇದೀಗ ಮತ್ತೆ ಹಿಂದಿನ ಅಧ್ಯಕ್ಷರನ್ನೇ ಬಿಜೆಪಿ ಆಯ್ಕೆ ಮಾಡಿರುವುದು ಒಂದು ರೀತಿಯ ಹಿನ್ನಡೆ. ಅಂದರೆ ಬಿಜೆಪಿ ಮತ್ತೆ ಹಿಂದಕ್ಕೆ ಮುಖ ಮಾಡಿದಂತಾಗಿದೆ. ಹೊಸ ನಾಯಕತ್ವಕ್ಕೆ ಅಲ್ಲಿ ಅವಕಾಶವೂ ಇಲ್ಲ ಎನ್ನುವುದನ್ನು ಸ್ಪಷ್ಟ ಪಡಿಸಿದೆ. ರಾಹುಲ್ ಗಾಂಧಿಯವರ ವರ್ಚಸ್ಸಿನ ಮುಂದೆ ರಾಜ್‌ನಾಥ್‌ಸಿಂಗ್ ಮಿಂಚುವುದು ತೀರಾ ಕಷ್ಟ. ಇದೊಂದು ರೀತಿಯಲ್ಲಿ ಕಾಂಗ್ರೆಸ್‌ಗೆ ಧನಾತ್ಮಕವಾಗಿದೆ.

ಒಟ್ಟಿನಲ್ಲಿ ನರೇಂದ್ರ ಮೋದಿ ಬಿಜೆಪಿಯ ನೇತೃತ್ವ ವಹಿಸುವುದು ಕನಸಿನ ಮಾತು ಎನ್ನುವುದು ಈ ಆಯ್ಕೆಯಿಂದ ಸ್ಪಷ್ಟವಾಗಿದೆ. ಬಿಜೆಪಿ ತನ್ನ ಅಧ್ಯಕ್ಷನನ್ನು ಯುಪಿಎ ಸರಕಾರದ (ಗಡ್ಕರಿಯವರ ಮೇಲೆ ನಡೆದ ಐಟಿ ದಾಳಿಯ ಹಿಂದೆ ಸರಕಾರದ ಕೈವಾಡವಿದ್ದೇ ಇದೆ) ನೆರವಿನಲ್ಲಿ ಯಶಸ್ವಿಯಾಗಿ ಆಯ್ಕೆ ಮಾಡಿತು. ಆದರೆ ಅದರೊಳಗಿನ ಗೊಂದಲ, ಅಸಮಾಧಾನ ಮಾತ್ರ ಮುಗಿದಿಲ್ಲ.
ಈಗಾಗಲೇ ತನ್ನ ವಿರುದ್ಧ ಸಂಚು ನಡೆದಿದೆ ಎಂದು ಗಡ್ಕರಿ ಆರೋಪಿಸಿದ್ದಾರೆ. ಇದರ ಜೊತೆಗೆ ಮೋದಿ ಅಭಿಮಾನಿಗಳು ಒಳಗೊಳಗೆ ಭುಸುಗುಡುತ್ತಿದ್ದಾರೆ. ಅಡ್ವಾಣಿ ಯವರ ವೌನ ನಿಗೂಢವಾಗಿದೆ. ಆರೆಸ್ಸೆಸ್ ಒಳಗೊಳಗೆ ಅವುಡು ಕಚ್ಚುತ್ತಿದೆ. ಇಂತಹ ವಾತಾವರಣದಲ್ಲಿ ಬಿಜೆಪಿ ರಾಜ್‌ನಾಥ್ ಸಿಂಗ್‌ರನ್ನು ಮುಂದಿಟ್ಟು ಚುನಾವಣೆಯನ್ನು ಯಶಸ್ವಿಯಾಗಿ ಹೇಗೆ ಎದುರಿಸುತ್ತದೆ ಎನ್ನುವುದು ಕುತೂಹಲಕರವಾಗಿದೆ.

No comments:

Post a Comment