Thursday, January 10, 2013

ಉವೈಸಿ ಬಂಧನ: ಒಂದು ಎಚ್ಚರಿಕೆ- ಜನವರಿ -10-2013

ಕೋಮು ದ್ವೇಷ ಕೆರಳಿಸುವ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಎಂಐಎಂ ಪಕ್ಷದ ಶಾಸಕ ಅಕ್ಬರುದ್ದೀನ್ ಉವೈಸಿಯವರ ವಿರುದ್ಧ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿರುವುದು ಶ್ಲಾಘನಾರ್ಹವಾಗಿದೆ. ಚುನಾವಣೆ ಹತ್ತಿರ ಬರುತ್ತಾ ಇರುವಂತೆಯೇ, ರಾಜಕಾರಣಿಗಳ ನಾಲಗೆಗಳು ಚುರುಕಾಗುತ್ತವೆ. ಆಡಳಿತದ ತಮ್ಮ ವೈಫಲ್ಯವನ್ನು ಮುಚ್ಚಿ ಹಾಕುವುದಕ್ಕಾಗಿ, ಅವರು ಅಡ್ಡ ದಾರಿಯನ್ನು ಹಿಡಿಯುತ್ತಿದ್ದಾರೆ. ವಾಸ್ತವ ಸ್ಥಿತಿಯ ಕುರಿತಂತೆ ಜನರ ಗಮನ ಹರಿಯದ ರೀತಿಯಲ್ಲಿ, ಅವರನ್ನು ಪ್ರಚೋದನಕಾರಿ ಭಾಷಣಗಳ ಮೂಲಕ ಮೈಮರೆಸುವ ಪ್ರಯತ್ನಕ್ಕೆ ರಾಜಕಾರಣಿಗಳು ತೊಡಗಿದ್ದಾರೆ. ಉವೈಸಿ ಒಂದು ಆರಂಭ ಮಾತ್ರ. ಮುಂದಿನ ದಿನಗಳಲ್ಲಿ, ಎಲ್ಲ ಪಕ್ಷಗಳ ನಾಯಕರೂ ಇಂತಹದೇ ದಾರಿಯನ್ನು ಹಿಡಿಯಲಿದ್ದಾರೆ. ತಮ್ಮ ತಮ್ಮ ಧರ್ಮ, ಜಾತಿಯ ಹೆಸರಿನಲ್ಲಿ ಜನರನ್ನು ಮತಗಳಾಗಿ ನಗದೀಕರಿಸುವ ಪ್ರಯತ್ನದಲ್ಲಿ ತೊಡಗಲಿದ್ದಾರೆ. ಉವೈಸಿಯ ಬಂಧನ ಈ ನಿಟ್ಟಿನಲ್ಲಿ ಉಳಿದವರಿಗೆ ಒಂದು ಎಚ್ಚರಿಕೆಯೇ ಸರಿ.
ಆದರೆ ಇದೇ ಸಂದರ್ಭದಲ್ಲಿ ಇನ್ನೊಂದನ್ನು ನಾವು ಗಮನಿಸಬೇಕು. ಈ ದೇಶದಲ್ಲಿ ಪ್ರಚೋದನಾಕಾರಿ ಭಾಷಣ ಇದೇ ಮೊದಲೇನಲ್ಲ. ಉವೈಸಿಗೆ ಗುರುಗಳಾಗಬಹು ದಾದಂತಹ ಚಂಡ ಪ್ರಚಂಡ ಕೋಮುವಾದಿ ಭಾಷಣಕಾರರ ದಂಡೇ ಇದೆ. ಈ ದೇಶದಲ್ಲಿ ಬಿಜೆಪಿ ಅಧಿಕಾರ ಹಿಡಿದುದೇ ಕೋಮುವಾದಿ ಭಾಷಣಗಳ ಮೂಲಕ ಎನ್ನುವುದನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗಿದೆ. ತಮ್ಮ ರಥಯಾತ್ರೆಯ ಮೂಲಕ ಅಡ್ವಾಣಿ ಈ ದೇಶದಲ್ಲಿ ರಕ್ತದ ಹೊಳೆಯನ್ನು ಹರಿಸಿದರು. ಬಾಬರಿ ಮಸೀದಿ ಧ್ವಂಸಕ್ಕೆ ಕಾರಣರಾದರು.
ಸದಾ ಪ್ರಚೋದನಕಾರಿ ಭಾಷಣಗಳನ್ನು ಮಾಡುತ್ತಾ, ಲೇಖನಗಳನ್ನು ಬರೆಯುತ್ತಾ ಠಾಕ್ರೆ ಈ ದೇಶದ ನಾಯಕರೆನಿಸಿಕೊಂಡರು. ಆದರೆ ಠಾಕ್ರೆ ಅಡ್ವಾಣಿಯಂತಹ ನಾಯಕರು ಜೈಲಿನಲ್ಲಿ ಕಳೆದ ಒಂದೇ ಒಂದು ಉದಾಹರಣೆ ನಮ್ಮ ಮುಂದಿಲ್ಲ. ತೊಗಾಡಿಯಾ ತನ್ನ ಭಾಷಣಗಳ ಮೂಲಕ ಈ ದೇಶಕ್ಕೆ ಮಾಡಿದ ನಾಶ, ನಷ್ಟವೆಷ್ಟು ಎನ್ನುವುದು ಎಲ್ಲರಿಗೂ ಗೊತ್ತಿರುವ ಹಗಲಿನಂತಹ ಸತ್ಯ. ಆದರೆ ಅವರನ್ನು ಬಂಧಿಸಲು ನಮ್ಮ ಸರಕಾರವಾಗಲಿ, ಪೊಲೀಸರಾಗಲಿ ಎಷ್ಟು ಮುತುವರ್ಜಿ ವಹಿಸಿದರು ಎಂಬುದನ್ನೂ ನಾವು ನೋಡಿದ್ದೇವೆ. ಆತ ಮಾಡಿದ ಭಾಷಣಗಳಿಗಾಗಿ ಜೀವನ ಪರ್ಯಂತ ಜೈಲಿನಲ್ಲಿರಬೇಕಾಗಿತ್ತು.
ಆದರೆ ಅಂತಹದ್ಯಾವುದೂ ಈ ದೇಶದಲ್ಲಿ ನಡೆಯಲಿಲ್ಲ. ಇನ್ನಾದರೂ ನಡೆಯುತ್ತದೆ ಎನ್ನುವ ಭರವಸೆಯಿಲ್ಲ. ನರೇಂದ್ರ ಮೋದಿಯವರ ಆಡಳಿತದಲ್ಲಿ ಮುಸ್ಲಿಮರ ಸಾಮೂಹಿಕ ಹತ್ಯಾಕಾಂಡ ನಡೆಯಿತು. ಮೋದಿಯವರ ವಿಚಾರಣೆಯೂ ನಡೆಯುವಂತಹ ವಾತಾವರಣ ಈ ದೇಶದಲ್ಲಿ ನಿರ್ಮಾಣವಾಗಲಿಲ್ಲ. ಇಂದಿಗೂ ಗುಜರಾತ್ ಹತ್ಯಾಕಾಂಡ ಸಂತ್ರಸ್ತರಿಗೆ ನ್ಯಾಯ ಸಿಕ್ಕಿಲ್ಲ. ಕರ್ನಾಟಕದಲ್ಲಿ ಪ್ರಮೋದ್ ಮುತಾಲಿಕ್ ಪ್ರಚೋದನಾಕಾರಿ ಭಾಷಣೆಗಳನ್ನು ನೀಡುತ್ತಾ ಅಲೆಯುತ್ತಿದ್ದಾರೆ. ಈತನನ್ನು ಬಂಧಿಸಿ, ಕನಿಷ್ಠ ಒಂದು ವರ್ಷವಾದರೂ ಜೈಲೊಳಗೆ ಇಡಲು ನಮ್ಮ ಸರಕಾರಕ್ಕೆ ಸಾಧ್ಯವಾಗಲಿಲ್ಲ.
ಇವರೆಲ್ಲರ ಬಂಧನವಾಗಲಿಲ್ಲ ಎನ್ನುವ ಕಾರಣಕ್ಕಾಗಿ, ಉವೈಸಿಯ ಬಂಧನ ಸರಿಯಲ್ಲ ಎಂದು ಹೇಳುವಂತಿಲ್ಲ. ಉವೈಸಿಯಂತಹ ನಾಯಕರಿಂದ ಯಾವ ಕಾರಣಕ್ಕೂ ಇಲ್ಲಿನ ಮುಸ್ಲಿಮರ ಅಭಿವೃದ್ಧಿ ಸಾಧ್ಯವಿಲ್ಲ. ಜನರನ್ನು ಪ್ರಚೋದಿಸುವುದರಿಂದ ಯಾರಿಗೂ ಒಳಿತಾಗುವುದಿಲ್ಲ. ಕೇವಲ ರಾಜಕಾರಣಿಗಳಿಗಷ್ಟೇ ಅದರಿಂದ ಲಾಭ. ಉವೈಸಿಯ ಬಂಧನ ಶ್ಲಾಘನೀಯ. ಆದರೆ ಈ ಬಂಧನ ಇನ್ನಷ್ಟು ನ್ಯಾಯಬದ್ಧವಾಗುವುದು ಯಾವಾಗಲೆಂದರೆ, ತೊಗಾಡಿಯಾ, ಪ್ರಮೋದ್ ಮುತಾಲಿಕ್, ಜಗದೀಶ್ ಕಾರಂತರಂಥವರು ಜೈಲು ಸೇರಿದಾಗ.
ಕಾನೂನು ಕೇವಲ ಒಂದು ವರ್ಗಕ್ಕೆ ಮಾತ್ರ ಅನ್ವಯವಾದಾಗ, ಸಹಜವಾಗಿಯೇ ಆ ಪಕ್ಷಪಾತವನ್ನು ಉವೈಸಿಯಂತಹವರು ನಗದೀಕರಿಸುತ್ತಾರೆ. ಆದುದರಿಂದ, ನಮ್ಮ ಸರಕಾರ ಉವೈಸಿಯನ್ನು ಬಂಧಿಸಲು ತೋರಿಸಿದ ಅತ್ಯುತ್ಸಾಹವನ್ನು, ತೊಗಾಡಿಯಾ ರಂಥವರನ್ನು ಬಂಧಿಸುವುದಕ್ಕೂ ತೋರಿಸಬೇಕು. ಬಿಹಾರದಿಂದ ಬಂದ ಬಡ ಕೂಲಿಕಾರ್ಮಿಕರ ಮೇಲೆ ಕೆಂಡ ಕಾರುವ ಶಿವಸೇನೆಯ ನಾಯಕರ ಮೇಲೂ ಈ ಕಾನೂನನ್ನು ಬಳಸಬೇಕು. ಹಾಗಾದಾಗ ಮಾತ್ರ ಉವೈಸಿಯ ಬಂಧನದ ಉದ್ದೇಶ ಸಾರ್ಥಕವಾಗುತ್ತದೆ.
ಇದೇ ಸಂದರ್ಭದಲ್ಲಿ ಜನ ಸಾಮಾನ್ಯರೂ ತಮ್ಮ ಎಚ್ಚರದಲ್ಲಿ ಇರಬೇಕಾಗುತ್ತದೆ. ಉವೈಸಿ, ತೊಗಾಡಿಯಾರಂತಹ ನಾಯಕರು ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆಯೇ ಬೀದಿಗಿಳಿದು, ಉಗ್ರ ಭಾಷಣಗಳನ್ನು ನೀಡ ತೊಡಗುತ್ತಾರೆ. ಬರೇ ಪೊಲೀಸರು,ಅಧಿಕಾರಿಗಳು,ಸರಕಾರ ಇವರ ವಿರುದ್ಧ ಜಾಗೃತೆವಹಿಸಿದರೆ ಸಾಕಾಗದು. ಜನರೂ ಈ ಭಾಷಣಕ್ಕೆ ಕಿವುಡರಾಗುವುದನ್ನು ಕಲಿಯಬೇಕಾಗಿದೆ.ಈ ನಾಯಕರ ಉದ್ದೇಶ, ಸಮಾಜವನ್ನು ಕಟ್ಟುವುದಲ್ಲ, ಒಡೆಯುವುದು ಎನ್ನುವುದನ್ನು ಅರ್ಥ ಮಾಡಿಕೊಂಡು, ಅಭಿವೃದ್ಧಿಯ ಬಗ್ಗೆ ಮಾತನಾಡುವ ನಿಜವಾದ ನಾಯಕರನ್ನು ಗುರುತಿಸಲು ಶಕ್ತರಾಗಬೇಕು

No comments:

Post a Comment