Monday, January 21, 2013

ರಾಹುಲ್ ಎಂಬ ಕನಸಿನ ಬೀಜ ಜನವರಿ -21-2013

ಕಾ೦ಗ್ರೆಸ್‌ನ ಚಿಂತನ ಬೈಠಕ್ ಯಶಸ್ವಿಯಾಗಿದೆ. ಶಿಬಿರ ರಾಹುಲ್ ಗಾಂಧಿಯವರನ್ನು ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಘೋಷಿಸಿದೆ. ಅಂದರೆ ಮುಂದಿನ ದಿನಗಳಲ್ಲಿ ಸೋನಿಯಾ ಗಾಂಧಿ ವಿಶ್ರಾಂತಿ ಜೀವನ ನಡೆಸುತ್ತಾ ಅವರ ಸ್ಥಾನವನ್ನು ಘೋಷಿತವಾಗಿ ರಾಹುಲ್ ಗಾಂಧಿ ನಡೆಸಲಿದ್ದಾರೆ. ಒಂದು ರೀತಿಯಲ್ಲಿ ಕಾಂಗ್ರೆಸ್‌ನ ತುತ್ತ ತುದಿಯ ಸ್ಥಾನವನ್ನೇ ರಾಹುಲ್‌ ಗಾಂಧಿಯವರಿಗೆ ವಹಿಸಲಾಗಿದೆ. ಉಪಾಧ್ಯಕ್ಷ ಸ್ಥಾನವೆಂದರೆ, ಪರೋಕ್ಷವಾಗಿ ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಬಿಂಬಿತರಾದಂತೆಯೇ ಸರಿ. ಹಾಗೆಂದು ಇದು ಶಿಬಿರದ ಚರ್ಚೆಯಲ್ಲಿ ಹುಟ್ಟಿ ಬಂದ ಫಲವೇನೂ ಅಲ್ಲ. ಈಗಾಗಲೇ ವರಿಷ್ಠ ಸ್ಥಾನದ ರಿಹರ್ಸಲ್‌ಗಳನ್ನು ಹಲವು ವಿಧಾನಸಭೆಗಳಲ್ಲಿ ರಾಹುಲ್ ನಿರ್ವಹಿಸಿದ್ದಾರೆ. ಅವರೇ ಮುಂದಿನ ಪ್ರಧಾನಿ ಅಭ್ಯರ್ಥಿಯೆನ್ನುವುದನ್ನು ಮಾಧ್ಯಮಗಳು ಘೋಷಿಸಿಯೂ ಆಗಿತ್ತು. ಕಾಂಗ್ರೆಸ್ ಅಷ್ಟೇ ಘೋಷಿಸಲು ಬಾಕಿಯಿತ್ತು. ಅದಕ್ಕಾಗಿಯೇ ಈ ಚಿಂತನ ಶಿಬಿರವೆಂಬ ಪ್ರಹಸನವನ್ನು ಹಮ್ಮಿಕೊಳ್ಳಲಾಗಿತ್ತು ಮತ್ತು ಮೊದಲೇ ಸಿದ್ಧಪಡಿಸಿದ ಸ್ಕ್ರಿಪ್ಟನ್ನು ಚಾಚು ತಪ್ಪದೆ ರಂಗದಲ್ಲಿ ಅಭಿನಯಿಸಲಾಯಿತು.
ಹಾಗೂ ಕ್ಲೈಮಾಕ್ಸ್‌ನಲ್ಲಿ ರಾಹುಲ್‌ರನ್ನು ಮೊದಲೇ ಸಿದ್ಧಪಡಿಸಿದಂತೆ, ಮುಂದೆ ತಂದು ನಿಲ್ಲಿಸಲಾಗಿದೆ. ಜನರಿಗೆ, ಮಾಧ್ಯಮಗಳಿಗೆ ಇದೇನೂ ಅನಿರೀಕ್ಷಿತವಲ್ಲದಿದ್ದರೂ ಕಾಂಗ್ರೆಸ್ ಪಾಳಯದಲ್ಲಿ ಮಾತ್ರ ಸಂತೋಷ, ಸಂಭ್ರಮ ತುಂಬಿ ತುಳುಕುತ್ತಿದೆ. ಕಾಂಗ್ರೆಸ್‌ಗೆ ಯಾಕೆ ಸಂಭ್ರಮ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ನೆಹರೂ ಕುಟುಂಬ ಪಿತ್ರಾರ್ಜಿತ ಆಸ್ತಿ. ಸಾಧಾರಣವಾಗಿ ಪಿತ್ರಾರ್ಜಿತ ಆಸ್ತಿಯನ್ನು ಕುಳಿತುಣ್ಣುವವರಿಗೆ ದುಡಿಯುವ ಕೆಲಸವಿಲ್ಲ. ಇದ್ದುದನ್ನು ಮುಗಿಸುತ್ತಾ ಹೋಗುವುದಷ್ಟೇ ಕೆಲಸ.
ಸದ್ಯಕ್ಕೆ ಅಧಿಕಾರಾವಧಿಯುದ್ದಕ್ಕೂ ಇದನ್ನೇ ಮಾಡುತ್ತಾ ಬಂದಿರುವ ಕಾಂಗ್ರೆಸ್ ನಾಯಕರಿಗೆ, ಇದೀಗ ಪಿತ್ರಾರ್ಜಿತ ಆಸ್ತಿಯ ಇನ್ನೊಂದು ತಿಜೋರಿ ತೆರೆದುಕೊಟ್ಟಂತಾಗಿದೆ. ಜನರ ಮತಗಳನ್ನು ಸೆಳೆಯಲು ಯಾವ ಸಾಧನೆಯೂ ಬಗಲಲ್ಲಿ ಇಲ್ಲದೇ ಇರುವುದರಿಂದ, ಅವರು ರಾಹುಲ್ ಗಾಂಧಿಯವರನ್ನೇ ಮುಂದಿಟ್ಟುಕೊಂಡು, ಅಧಿಕಾರ ಹಿಡಿಯುವ ಹವಣಿಕೆಯಲ್ಲಿದ್ದಾರೆ. 
ಪ್ರಣವ್‌ರಂತಹ ಹಿರಿಯರನ್ನು ಪ್ರಧಾನಿ ಮಾಡುವ ಸಾಧ್ಯತೆಯೇ ಇಲ್ಲ ಎನ್ನುವುದಕ್ಕೆ ಸೂಚನೆಯಾಗಿ ಅವರನ್ನು ರಾಷ್ಟ್ರಾಧ್ಯಕ್ಷರನ್ನಾಗಿ ಮಾಡಲಾಯಿತು. ಮನಮೋಹನ್ ಸಿಂಗ್‌ರಿಗೂ ತೀರಾ ಸುಸ್ತಾಗಿದೆ. ಇವೆಲ್ಲಕ್ಕೂ ತಿಲಕವಿಡುವಂತೆ ಸೋನಿಯಾ ಗಾಂಧಿಯವರ ಆರೋಗ್ಯ ತೀರಾ ಕೆಟ್ಟು ಹೋಗಿದೆ. ಅವರಿಗೂ ವಿಶ್ರಾಂತಿ ಬೇಕಾಗಿದೆ. ಉಳಿದಂತೆ ತನ್ನ ವರ್ಚಸ್ಸಿನಿಂದ ಮತಗಳನ್ನು ಕೀಳುವ ನಾಯಕ ಕಾಂಗ್ರೆಸ್‌ನಲ್ಲಿ ಇಲ್ಲವೇ ಇಲ್ಲ. ಹೀಗಾಗಿ ರಾಹುಲ್ ಗಾಂಧಿ ಹೊರತಾದ ಯಾವ ದಿಕ್ಕೂ ಕಾಂಗ್ರೆಸ್‌ಗೆ ಇರಲಿಲ್ಲ. ಒಂದು ರೀತಿಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲು ಮತ್ತೊಬ್ಬ ತರುಣ ನಾಯಕನ ಬಲಿ ಕೇಳುತ್ತಿದೆಯೋ ಎನ್ನುವ ಸಣ್ಣದೊಂದು ವಿಷಾದ ಎಲ್ಲ ಸೂಕ್ಷ್ಮ ಹೃದಯಗಳಲ್ಲೂ ಕನಲದೆ ಇಲ್ಲ.
ರಾಹುಲ್‌ಗಾಂಧಿಯವರ ಪ್ರವೇಶದಿಂದ ಕಾಂಗ್ರೆಸ್‌ಗೆ ವಿಶೇಷ ಲಾಭವಾಗುತ್ತದೆಯೆಂದು ಹೇಳುವಂತಿಲ್ಲ. ಈವರೆಗಿನ ವಿಧಾನಸಭಾ ಚುನಾವಣೆಗಳಲ್ಲಿ ರಾಹುಲ್ ನೇತೃತ್ವ ಯಾವುದೇ ಪರಿಣಾಮ ಬೀರಿಲ್ಲ. ಆದರೆ ವಿಶೇಷ ನಷ್ಟವುಂಟಾಗುವುದನ್ನು ತಪ್ಪಿಸುವುದರಲ್ಲಿ ಯಾವ ಅನುಮಾನವೂ ಇಲ್ಲ. ರಾಹುಲ್ ಗಾಂಧಿ ಅದೇ ರಾಜೀವ್ ಗಾಂಧಿಯವರ ಲವಲವಿಕೆಯನ್ನು, ಜೀವ ಚೈತನ್ಯವನ್ನು ತನ್ನೊಳಗೆ ತುಂಬಿಕೊಂಡ ತರುಣ. ಅವರ ಹಾಲಿನಂತಹ ವ್ಯಕ್ತಿತ್ವ ರಾಜಕೀಯಕ್ಕೆ ಇನ್ನೂ ಪೂರ್ಣ ಪ್ರಮಾಣದಲ್ಲಿ ತೆರೆದುಕೊಂಡಿಲ್ಲ. ಅದು ರಾಹುಲ್‌ರ ಮಿತಿಯೂ ಹೌದು. ಹೆಗ್ಗಳಿಕೆಯೂ ಹೌದು. ಈ ತರುಣನನ್ನು ಕಾಂಗ್ರೆಸ್ ಹೆಬ್ಬಾವುಗಳು ಅದು ಹೇಗೆ ನುಂಗಿ ಹಾಕಬಹುದು ಎನ್ನುವುದನ್ನು ಊಹಿಸಿದಾಗ ಮಾತ್ರ ಸಣ್ಣದೊಂದು ಕಳವಳ.
ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ ತನ್ನ ನಾಯಕನ ಕುರಿತಂತೆ ನಿರಾಳವಾಗಿದೆ. ಬಿಜೆಪಿ ಪಾಳಯದಲ್ಲಿ ಇನ್ನೂ ರಾಹುಲ್ ವಿರುದ್ಧ ಯಾರನ್ನು ನಿಲ್ಲಿಸುವುದು ಎಂಬುದು ನಿರ್ಧಾರವಾಗಿಲ್ಲ. ಗಡ್ಕರಿಯವರ ಕುರಿತಂತೆ ಆರೆಸ್ಸೆಸ್ ಮತ್ತು ಬಿಜೆಪಿಯೊಳಗಿನ ದೊಡ್ಡ ಗುಂಪಿಗೆ ಅಪಾರ ಒಲವಿದೆ. ಆದರೆ ಮೀಡಿಯಾಗಳಿಗೂ, ಕೆಲವು ಬದ್ಧ ಬಿಜೆಪಿಗರಿಗೂ ಮೋದಿಯವರನ್ನು ರಾಹುಲ್ ವಿರುದ್ಧ ನಿಲ್ಲಿಸಿ, ಕಾಂಗ್ರೆಸನ್ನು ನುಚ್ಚು ನೂರು ಮಾಡುವ ಬಯಕೆಯಿದೆ. ಆದರೆ ನಿಜವಾಗುವುದು ಮಾತ್ರ ಕಷ್ಟಸಾಧ್ಯ. ಇದೀಗ ಅಂತಿಮವಾಗಿ ಪಟ್ಟಿಯಲ್ಲಿರುವುದು ಸುಶ್ಮಾ ಸ್ವರಾಜ್.
ಆದರೆ ಆ ಹೆಸರಿನಿಂದ ಬಿಜೆಪಿ ಭಾರೀ ಲಾಭ ಪಡೆಯುವ ವಾತಾವರಣವೇನೂ ಇಲ್ಲ. ಸುಶ್ಮಾ ಈಗಾಗಲೇ ಆರೆಸ್ಸೆಸ್ ಸೇರಿದಂತೆ ಬಿಜೆಪಿಯೊಳಗಿನ ಎಲ್ಲ ವಲಯಗಳಲ್ಲಿ ಹೆಸರು ಕೆಡಿಸಿಕೊಂಡಿದ್ದಾರೆ.  ಈ ಮಟ್ಟಿಗೆ ಸದ್ಯಕ್ಕೆ, ಚುನಾವಣೆಯ ದೃಷ್ಟಿಯಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಗಿಂತ ಎರಡು ಹೆಜ್ಜೆ ಮುಂದಿದೆ ಎಂದೇ ಹೇಳಬೇಕು.
ರಾಹುಲ್‌ಗೆ ಪ್ರಧಾನಮಂತ್ರಿಯಾಗುವ ಅರ್ಹತೆಯಿಲ್ಲ ಎಂದು ಯಾರೂ ತೀರ್ಪು ಕೊಡುವಂತಿಲ್ಲ. ಯಾಕೆಂದರೆ, ರಾಜೀವ್ ಗಾಂಧಿಯವರ ಕುರಿತಂತೆಯೂ ಇದೇ ನಿಲುವನ್ನು ರಾಜಕೀಯ ಪಂಡಿತರು ಮಂಡಿಸಿದ್ದರು. ಆದರೆ ಅನುಭವಿಸುತ್ತಾ ಅನುಭವಿಸುತ್ತಾ ಅವರು ಈ ದೇಶದ ಒಳ್ಳೆಯ ಪ್ರಧಾನಿಯಾಗಿ ಆಡಳಿತ ನೀಡಿದರು. ಇಂದು ನಾವು ಕಂಪ್ಯೂಟರ್ ಯುಗ ಎಂದು ಯಾವುದರ ಕುರಿತಂತೆ ಹೆಮ್ಮೆ ಪಟ್ಟುಕೊಳ್ಳುತ್ತಿದ್ದೇವೆಯೋ ಅದರಲ್ಲಿ ರಾಜೀವ್ ಗಾಂಧಿಯವರ ಕನಸಿನ ಬೀಜಗಳಿವೆ. ರಾಹುಲ್ ಗಾಂಧಿ ಕೂಡ ಆ ಮಟ್ಟಕ್ಕೆ ಬೆಳೆಯಲಿ. ಕ್ಷುದ್ರ ರಾಜಕೀಯ ಅವರ ಕಣ್ಣೊಳಗಿರುವ ಕನಸುಗಳನ್ನು ಅಳಿಸಿ ಹಾಕದಿರಲಿ ಎನ್ನುವುದೇ ದೇಶದ ಹಾರೈಕೆ.

No comments:

Post a Comment