Saturday, January 19, 2013

ಜನರ ಬದುಕುವ ಹಕ್ಕನ್ನು ಗೌರವಿಸದ ಸರಕಾರಗಳು ಜನವರಿ -19-2013

ನಸಾಮಾನ್ಯರಿಗೆ ಬೇಕಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುವುದಕ್ಕೆ ಕೇಂದ್ರ ಸರಕಾರವಾಗಲಿ, ರಾಜ್ಯ ಸರಕಾರವಾಗಲಿ ಸಂಪೂರ್ಣ ವಿಫಲವಾಗಿವೆ. ಈ ಕಾರಣದಿಂದಲೇ ಎರಡೂ ಸರಕಾರಗಳು ಅಡ್ಡ ದಾರಿಯನ್ನು ಹಿಡಿದು, ಜನರನ್ನು ತೃಪ್ತಿ ಪಡಿಸುವುದಕ್ಕೆ ನೋಡುತ್ತಿವೆ. ಒಂದೆಡೆ ಬಿಜೆಪಿ ಸರಕಾರ, ಟಿಪ್ಪುವಿನಂತಹ ಮಹಾನ್ ದೇಶಪ್ರೇಮಿಯ ಹೆಸರನ್ನು ಹಿಡಿದುಕೊಂಡು ಭಾವನಾತ್ಮಕ ರಾಜಕಾರಣ ನಡೆಸುವುದಕ್ಕೆ ಹೊರಟಿದ್ದರೆ, ಇತ್ತ ಕೇಂದ್ರ ಸರಕಾರ ಇದ್ದ ಸಬ್ಸಿಡಿ ಸಿಲಿಂಡರ್‌ಗಳ ಮಿತಿಯನ್ನೇ ಕಡಿತಗೊಳಿಸಿ, ಬಳಿಕ ಅದನ್ನು ಏರಿಕೆ ಮಾಡಿದಂತೆ ಮಾಡಿ ಜನರನ್ನು ಸಂತೈಸುವುದಕ್ಕೆ ಹೊರಟಿದೆ. ಜನ ಸಾಮಾನ್ಯರಂತೂ ಸರಕಾರ ತಮ್ಮಿಂದ ಕಿತ್ತುಕೊಂಡಿದೆಯೋ ಅಥವಾ ನೀಡುತ್ತಿದೆಯೋ ಎಂದು ತಿಳಿಯದೆ ಗೊಂದಲದಲ್ಲಿದ್ದಾರೆ. ಒಂದು ರೀತಿಯಲ್ಲಿ ಸರಕಾರ ಜನಸಾಮಾನ್ಯರ ಜೊತೆಗೆ ಕಣ್ಣು ಮುಚ್ಚಾಲೆಯಾಟ ಆಡುತ್ತಿದೆ.  ಬೆಕ್ಕಿಗೆ ಆಟ, ಇಲಿಗೆ ಪ್ರಾಣ ಸಂಕಟ ಎಂಬಂತಹ ಸ್ಥಿತಿಯಲ್ಲಿ ಜನ ಸಾಮಾನ್ಯರಿದ್ದಾರೆ.
ಈ ದೇಶದಲ್ಲಿ ಅಭಿವೃದ್ಧಿಯೆಂದರೆ ಜನಸಾಮಾನ್ಯರ ಬೆನ್ನಿನ ಮೇಲೆ ಇನ್ನಷ್ಟು ಹೊರೆಗಳನ್ನು ಹಾಕುವುದು ಮಾತ್ರ ಹಾಗೂ ಉಳ್ಳವರಿಗೆ ಇಡೀ ದೇಶವನ್ನು ಬಿಕರಿಗಿಡುವುದು ಎಂದು ಸರಕಾರ ಗಾಢವಾಗಿ ನಂಬಿದೆ.  ಬಡವರಿಗೆ ನೀಡುವ ಸಬ್ಸಿಡಿ ಅಕ್ಕಿ, ಸಬ್ಸಿಡಿ ಗೊಬ್ಬರ, ಸಬ್ಸಿಡಿ ಸಿಲಿಂಡರ್ ಇತ್ಯಾದಿಗಳಿಂದಲೇ ಈ ದೇಶ ಅಭಿವೃದ್ಧಿಯಿಂದ ಹಿಂದುಳಿದಿದೆ, ಸಬ್ಸಿಡಿಗಳನ್ನೆಲ್ಲ ಕಿತ್ತೊಗೆದರೆ ಜನಸಾಮಾನ್ಯರು ಸೋಮಾರಿಗಳಾಗದೆ ದುಡಿದು ದೇಶವನ್ನು ಅಭಿವೃದ್ಧಿಗೊಳಿಸುತ್ತಾರೆ ಎಂದು ಸರಕಾರ ಭ್ರಮಿಸಿದೆ.
ಒಂದರ್ಥದಲ್ಲಿ ಸಬ್ಸಿಡಿ ತಾವು ಬಡವರಿಗೆ ಮಾಡುತ್ತಿರುವ ಅನವಶ್ಯ ಸಹಾಯ ಎಂದು ಸರಕಾರ ತಿಳಿದುಕೊಂಡಿದೆ. ಇದೇ ಸಂದರ್ಭದಲ್ಲಿ ಕೈಗಾರಿಕೆಗಳಿಗೆ, ಬೃಹತ್ ಉದ್ಯಮದಾರರಿಗೆ, ಐಟಿ-ಬಿಟಿಗಳಿಗೆ ಈ ನೆಲವನ್ನು, ಜಲವನ್ನು, ಗಾಳಿಯನ್ನು ಸಬ್ಸಿಡಿಯಾಗಿ ಬಹುತೇಕ ಉಚಿತವಾಗಿ ಬಳಸಲು ಅವಕಾಶ ನೀಡು ತ್ತಿರುವುದು ಅದರ ಗಮನಕ್ಕೆ ಬರುತ್ತಿಲ್ಲ. ಬಡವರಿಗೆ ಒಂದು ಕೆ.ಜಿ. ಅಕ್ಕಿಯನ್ನು ಸಬ್ಸಿಡಿಯಲ್ಲಿ ಕೊಟ್ಟಾಕ್ಷಣ ಇಡೀ ಸರಕಾರವೇ ದಿವಾಳಿಯಾಯಿತು ಎಂಬಂತೆ ಆಡುತ್ತದೆ.
ಕನಿಷ್ಠ ಮಧ್ಯಮವರ್ಗಗಳಿಗೆ ತಿಂಗಳಿಗೊಂದು ಸಿಲಿಂಡರನ್ನು ಸಬ್ಸಿಡಿ ರೂಪದಲ್ಲಿ ಕೊಡಲು ತಾಕತ್ತಿಲ್ಲದೆ ಇದ್ದ ಮೇಲೆ ಸರಕಾರ ಎನ್ನುವುದನ್ನು ಜನರು ಯಾಕೆ ಆಯ್ಕೆ ಮಾಡಬೇಕು? ಇಷ್ಟಕ್ಕೂ ಸರಕಾರವೆಂದರೇನು?  ಕೇವಲ ಸಂಸತ್‌ನಲ್ಲಿ ದುಡ್ಡು ಪೋಲು ಮಾಡುತ್ತಾ, ಶ್ರೀಮಂತ ಉದ್ಯಮಿಗಳಿಗೆ ದೇಶವನ್ನು ಧಾರೆಯೆರೆಯುವುದಕ್ಕಾಗಿ ಜನರು ಸರಕಾರವನ್ನು ಆಯ್ಕೆ ಮಾಡಬೇಕೇ?
ಸರಕಾರವಿರುವುದು ದೇಶವನ್ನು ನಡೆಸುವುದಕ್ಕೆ. ಬಡವರಿಗೆ ಸಬ್ಸಿಡಿಕೊಡುವುದು ಅವರ ಬದುಕುವ ಹಕ್ಕಿಗೆ ಚ್ಯುತಿ ಬರಬಾರದು ಎನ್ನುವ ಕಾರಣಕ್ಕೆ. ಅಲ್ಲಿ ಲಾಭ ನಷ್ಟಗಳನ್ನು ಲೆಕ್ಕಾಚಾರ ಮಾಡಲಾಗುವುದಿಲ್ಲ. ಜನರ ಮೂಲಭೂತ ಆವಶ್ಯಕತೆಗಳನ್ನು ಈಡೇರಿಸುವುದು ಸರಕಾರದ ಆದ್ಯ ಕರ್ತವ್ಯವಾಗಿದೆ. ಆದುದರಿಂದಲೇ ಸರಕಾರಿ ಬಸ್ ಪ್ರಯಾಣ ದರ, ರೈಲ್ವೆ ಪ್ರಯಾಣ ದರ, ಡೀಸೆಲ್ ಬೆಲೆಯೇರಿಕೆ ಇತ್ಯಾದಿ ನಿರ್ಧಾರಗಳನ್ನು ಮಾಡುವಾಗ ಸರಕಾರ ಸಾವಿರ ಬಾರಿ ಯೋಚಿಸ ಬೇಕು.
ಆದರೆ ಇತ್ತೀಚೆಗೆ ಸರಕಾರ ಆ ಸಂವೇದನೆಯನ್ನೇ ಕಳೆದುಕೊಂಡಿದೆ. ಡೀಸೆಲ್ ಬೆಲೆಯೇರಿಕೆ, ಸಬ್ಸಿಡಿ ಕಡಿತ ಇತ್ಯಾದಿಗಳೆಲ್ಲ ತನ್ನ ಹಕ್ಕು ಎಂಬಂತೆ ನಿರ್ಧಾರಗಳನ್ನು ಮಾಡುತ್ತಿವೆ. ಇಷ್ಟು ಮಾಡಿಯೂ ಅದರ ಕುರಿತಂತೆ ಯಾವುದೇ ಪಾಪಪ್ರಜ್ಞೆಯನ್ನು ಹೊಂದದೆ ನಮ್ಮ ಆರ್ಥಿಕ ಸಚಿವರು, ಬೆಲೆಯೇರಿಕೆ ಅನಿವಾರ್ಯ ಎಂದು ಮಾಧ್ಯಮಗಳಲ್ಲಿ ಹೆಮ್ಮೆಯಿಂದ ಹೇಳಿಕೆಯನ್ನು ನೀಡುತ್ತಾರೆ.
ಗ್ಯಾಸ್ ಸಿಲಿಂಡರ್ ಸಬ್ಸಿಡಿಯನ್ನೇ ತೆಗೆದುಕೊಳ್ಳಿ. ಏಕಾಏಕಿ ಆರು ಸಿಲಿಂಡರ್‌ಗಳಿಗೆ ಕತ್ತರಿ ಹಾಕಿತು. ಇದಾಗಿ ಕೆಲವು ತಿಂಗಳ ಕಾಲ ಮಿತಿಯನ್ನು ಏರಿಸುತ್ತೇವೆ ಎಂಬ ಭರವಸೆಯನ್ನು ನೀಡುತ್ತಾ ಜನರ ಮೂಗಿಗೆ ಬೆಣ್ಣೆ ಸವರಿತು. ಇದೀಗ ಅದೇನೋ ಹೊಸ ಘೋಷಣೆಯೆಂಬಂತೆ, ಮತ್ತೆ ಮೂರು ಸಿಲಿಂಡರ್‌ಗಳನ್ನು ಸಬ್ಸಿಡಿಯಲ್ಲಿ ನೀಡಲು ಮುಂದಾಗಿದೆ. ಇದೇ ಸಂದರ್ಭದಲ್ಲಿ, ಸಬ್ಸಿಡಿ ರಹಿತ ಸಿಲಿಂಡರ್‌ಗಳ ಕ್ರಯವನ್ನು ರೂ. 46.50 ರಷ್ಟು ಏರಿಸಲು ಸರಕಾರ ನಿರ್ಧರಿಸಿದೆ.
ಇದರಿಂದಾಗಿ ಒಂದೆಡೆ ಸಬ್ಸಿಡಿಯ ಮಿತಿ ಏರಿದರೂ, ಮಗದೊಂದೆಡೆ ವರ್ಷದ ಉಳಿದ ಮೂರು ಸಿಲಿಂಡರ್‌ಗಳಿಗೆ ಸುಮಾರು 150 ರೂ. ಹೆಚ್ಚುವರಿ ನೀಡಬೇಕಾಗಿದೆ. ಅಂದರೆ ಸರಕಾರ  ಸಬ್ಸಿಡಿ ಮಿತಿ ಏರಿಕೆಯ ನಡುವೆಯೂ ಜನರ ಜೇಬಿಗೆ ಕತ್ತರಿ ಹಾಕಿದೆ. ಶ್ರೀಸಾಮಾನ್ಯನ ಕುರಿತಂತೆ ಒಂದಿಷ್ಟಾದರೂ ಗೌರವ ಹೊಂದಿರುವ ಸರಕಾರ ಇಂತಹ ಕಣ್ಣಾಮುಚ್ಚಾಲೆಯನ್ನು ಆಡುವುದಿಲ್ಲ.
ಮೊದಲು ಸರಕಾರ ಜನಸಾಮಾನ್ಯರ ಬದುಕಿನ ಕುರಿತಂತೆ ಗೌರವವನ್ನು ಬೆಳೆಸಿಕೊಳ್ಳಬೇಕಾಗಿದೆ. ಸಬ್ಸಿಡಿ ಎನ್ನುವುದು ಐಶಾರಾಮಿ ಬದುಕಿಗಾಗಿ ಇರುವಂತಹದಲ್ಲ. ಅದು ಜನರ ಮೂಲಭೂತ ಆವಶ್ಯಕತೆಗಳಿಗಾಗಿ ನೀಡುವಂತಹದು. ಮನೆಯ ಮಾಡಿನ ತೊಲೆಯನ್ನು ಮುರಿದು ಒಲೆ ಉರಿಸುವುದಕ್ಕಾಗುವುದಿಲ್ಲ. ಹಾಗೆಯೇ,  ಸಬ್ಸಿಡಿಯನ್ನು ಕತ್ತರಿಸಿ ಸರಕಾರ ತನ್ನ ನಷ್ಟವನ್ನು ತುಂಬಿಸುವ ಯೋಜನೆಯನ್ನು ಮಾಡುವುದು ಅಮಾನಯ. ಆಡಳಿತದ ಮೂಲ ಉದ್ದೇಶವನ್ನು ತಿಳಿಯದ ನಾಯಕರಷ್ಟೇ ಇಂತಹ ದುರಾಲೋಚನೆಯನ್ನು ಹೊಂದಲು ಸಾಧ್ಯ.

No comments:

Post a Comment