Friday, January 18, 2013

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಕುಖ್ಯಾತಿ ಜನವರಿ -18-2013

“ಒ೦ದು ಸಮಾಜದಲ್ಲಿ ಎಷ್ಟು ಪತ್ರಿಕೆಗಳಿವೆ ಎನ್ನುವುದನ್ನು ಹೇಳಿ. ಆ ಸಮಾಜ ಹೇಗಿದೆ ಎನ್ನುವುದನ್ನು ನಾನು ಹೇಳುತ್ತೇನೆ” ನೆಹರೂ ಹೇಳಿದ್ದ ಮಾತಿದು. ಪತ್ರಿಕೆಗಳ ಅಸ್ತಿತ್ವ ಆ ಸಮಾಜದ ಪ್ರಜಾಸತ್ತೆಯ ಅಸ್ತಿತ್ವ ಎಂದು ತಿಳಿದುಕೊಂಡ ಕಾಲವೊಂದಿತ್ತು. ಆದರೆ ಇಂದು ಪತ್ರಿಕೆಗಳ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಆದರೆ ಪತ್ರಿಕಾ ಸ್ವಾತಂತ್ರ ಮಾತ್ರ ವ್ಯವಸ್ಥೆಯ ಕಡಿವಾಣಕ್ಕೊಳಗಾಗಿದೆ. ಪತ್ರಿಕೆಗಳು ಸ್ವಸ್ಥ ಸಮಾಜವನ್ನು ಬಯಸುವುದೇ ಅಪರಾಧ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪತ್ರಿಕೆಗಳಿರುವುದು ಜನರ ಮನ ರಂಜಿಸಲು. ಹಾಗೆಯೇ ರಾಜಕಾರಣಿಗಳ ಪೀಕದಾನಿ ಯಾಗಿ. ಇದನ್ನು ಮರೆತು ಪತ್ರಿಕಾ ಧರ್ಮವನ್ನು ನಂಬಿ ಮುಂದುವರಿದ ಪತ್ರಕರ್ತರು ಹಲವು ಬಾರಿ ಭಾರೀ ಬೆಲೆಯನ್ನು ತೆತ್ತಿದ್ದಾರೆ. ಅದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ನಮ್ಮ ಮುಂದಿದ್ದಾರೆ ಪತ್ರಕರ್ತ ನನ್ ಸೂರಿಂಜೆ ಮತ್ತು   ಕೇರಳದ ಪತ್ರಕರ್ತೆ ಕೆ.ಕೆ. ಶಾಹಿನಾ.
ಒಮ್ಮೆ ತೆಹಲ್ಕಾದಲ್ಲಿ, ಇದೀಗ ಓಪನ್ ಮ್ಯಾಗಸಿನ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ಶಾಹಿನಾ ವಿರುದ್ಧ ಪೊಲೀಸರು, ಅದರಲ್ಲೂ ಕರ್ನಾಟಕ ಪೊಲೀಸರು ಕ್ರಿಮಿನಲ್ ಪಿತೂರಿ ಮತ್ತು ಅಪರಾಧ ಮಾಡುವ ಉದ್ದೇಶದಿಂದ ಸಾಕ್ಷಿಗಳನ್ನು ಬೆದರಿಸುವುದು ಸೇರಿದಂತೆ ಭಾರತೀಯ ದಂಡ ಸಂಹಿತೆಯ ಹಲವಾರು ಪರಿಚ್ಛೇದಗಳನ್ವಯ ವೊಕದ್ದಮೆ ದಾಖಲಿಸಿ ದ್ದಾರೆ. ಅಬ್ದುಲ್ ನಾಸಿರ್ ಮಅದನಿಯ ಬಂಧನದ ಹಿನ್ನೆಲೆ ಮತ್ತು ಮುನ್ನೆಲೆಗಳನ್ನು ತೆರೆದುಕೊಡುವ ಪ್ರಯತ್ನ ಮಾಡಿದ ಒಂದೇ ಕಾರಣಕ್ಕಾಗಿ ಪೊಲೀಸರು ಈಕೆಯ ಮೇಲೆ ಈ ಎಲ್ಲ ವೊಕದ್ದಮೆಗಳನ್ನು ಜಡಿದಿದ್ದಾರೆ.
ಒಬ್ಬ  ಪತ್ರಕರ್ತೆಯಾಗಿ ಆಕೆಯ ವೃತ್ತಿ ಪ್ರೇಮಕ್ಕೆ ಸಮಾಜ ಸ್ಪಂದಿಸಬೇಕಾಗಿತ್ತು. ಆದರೆ ಅಂತಹದೇನೂ ಸಂಭವಿಸಿಲ್ಲ. ಕನಿಷ್ಠ ಪತ್ರಕರ್ತರಾದರೂ ಈಕೆಯ ಜೊತೆಗೆ ಒಂದಾಗಿ ನಿಲ್ಲಬೇಕಾಗದ ಅಗತ್ಯವಿದೆ. ಆದರೆ ಅಂತಹದೂ ನಡೆಯುತ್ತಿಲ್ಲ. ಅದೃಷ್ಟವಶಾತ್ ಇದೀಗ ಶಾಹೀನಾರ ಪರವಾಗಿ ಅಂತಾರಾಷ್ಟ್ರೀಯ ಪತ್ರಕರ್ತರ ಒಕ್ಕೂಟ ಧ್ವನಿಯೆತ್ತಿದೆ. “ನಾಗರಿಕ ಹಕ್ಕುಗಳ ರಕ್ಷಣೆಯಲ್ಲಿ ತನಿಖಾ ಪತ್ರಿಕೋದ್ಯಮ ಯಾವ ಪಾತ್ರ ವಹಿಸಬಹುದು ಎನ್ನುವುದಕ್ಕೆ  ಶಾಹಿನಾರ ಕೆಲಸ ಒಂದು ಉದಾಹರಣೆಯಾಗಿದೆ” ಎಂದು ಐಎಫ್‌ಜೆ ಬಣ್ಣಿಸಿದೆ.
ಆಕೆಯ ವಿಚಾರಣೆಯ ಉದ್ದೇಶವನ್ನು ಮರು ಪರಿಶೀಲಿಸುವಂತೆಯೂ ಕರ್ನಾಟಕದ ಅಧಿಕಾರಿಗಳಿಗೆ ಮನವಿ ಮಾಡಿದೆ. ಇದೊಂದು ರೀತಿಯಲ್ಲಿ ಕರ್ನಾಟಕದ ಕಾನೂನು ವ್ಯವಸ್ಥೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಾದ ಮುಜುಗರವೇ ಸರಿ. ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುವಲ್ಲಿ ಕರ್ನಾಟಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದಕ್ಕೆ ಇದು ಉದಾಹರಣೆಯಾಗಿದೆ.
ಇತ್ತ ನನ್ ಸೂರಿಂಜೆ ಪ್ರಕರಣವೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗು ತ್ತಿದೆ. ಮಹಿಳೆಯರ ಮೇಲೆ ಸಂಘಪರಿವಾರ ನಡೆಸಿದ ಬರ್ಬರ ದೌರ್ಜನ್ಯವನ್ನು ಜಗತ್ತಿಗೆ ತೆರೆದಿಟ್ಟ ಒಂದೇ ತಪ್ಪಿಗೆ ನನ್ ಸೂರಿಂಜೆ ಜೈಲಿನಲ್ಲಿ ಹಲವು ತಿಂಗಳಿನಿಂದ ಕೊಳೆಯು ತ್ತಿರುವುದು ‘ಗಾರ್ಡಿಯನ್’ ಪತ್ರಿಕೆಯಲ್ಲಿ ವರದಿಯಾಗಿದೆ. ಈ ಮೂಲಕ ಕರ್ನಾಟಕ- ಅದರಲ್ಲೂ ಮಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಿದೆ.
ಇದೂ ಕೂಡ ಕರ್ನಾಟಕ ಪೊಲೀಸ್ ವ್ಯವಸ್ಥೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ಕಪ್ಪು ಚುಕ್ಕೆಯೇ ಆಗಿದೆ. ಪತ್ರಕರ್ತರ ಧರಣಿ, ಉಪವಾಸಗಳ ಬಳಿಕ, ಸೂರಿಂಜೆಯ ಮೇಲಿರುವ ಕೇಸುಗಳನ್ನು ಹಿಂದೆ ತೆಗೆದು ಕೊಳ್ಳುವ ಭರವಸೆಯನ್ನೇನೋ ಗೃಹ ಸಚಿವರು ನೀಡಿದ್ದಾರೆ. ಆದರೆ ಒಬ್ಬ ಪತ್ರಕರ್ತನನ್ನು ಜೈಲಿಗೆ ತಳ್ಳುವುದು ಒಂದು ಸರಕಾರಕ್ಕೆ ಇಷ್ಟು ಸುಲಭವಾದರೆ, ಮುಂದಿನ ದಿನಗಳಲ್ಲಿ ಪತ್ರಕರ್ತರು ವೃತ್ತಿ ಧರ್ಮವನ್ನು ಮುಂದಿಟ್ಟು ಕೊಂಡು ಕೆಲಸ ಮಾಡುವುದು ಸಾಧ್ಯವೇ? ಕರಾವಳಿಯಲ್ಲಿ ಇನ್ನೊಬ್ಬರ ಮನೆಗೆ ಬೆಂಕಿ ಹಚ್ಚಿದ, ಲೂಟಿ ಮಾಡಿದ, ಕೋಮು ಹಿಂಸಾಚಾರ ನಡೆಸಿದ ದುಷ್ಕರ್ಮಿಗಳನ್ನು ಸರಕಾರ, ಸ್ವಾತಂತ್ರ ಹೋರಾಟಗಾರರೋ ಎಂಬಂತೆ ಅವರ ಮೇಲಿನ ಕೇಸುಗಳನ್ನು ಹಿಂದೆ ತೆಗೆದುಕೊಂಡಿದೆ.
ಆದರೆ ಸೂರಿಂಜೆಯ ಪ್ರಕರಣಕ್ಕೆ ಸಂಬಂಧಿಸಿ ಪತ್ರಕರ್ತರು ಬೀದಿಗಿಳಿಯ ಬೇಕಾಯಿತು. ಇದೀಗ ಸರಕಾರ ಭರವಸೆ ನೀಡಿದೆಯಾದರೂ, ಅದು ಯಾವಾಗ ಈಡೇರಬಹುದು ಎನ್ನುವುದರ ಬಗ್ಗೆ ಯಾರಿಗೂ ಮಾಹಿತಿಯಿಲ್ಲ. ಶಾಹಿನಾ ಪ್ರಕರಣದಲ್ಲಾಗಲಿ, ನನ್ ಸೂರಿಂಜೆ ಪ್ರಕರಣದಲ್ಲಾಗಲಿ ಕರ್ನಾಟಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಕ್ಕೀಡಾಗಿದೆ. ಕರ್ನಾಟಕದ ಹೆಸರು ಇಂತಹದೇ ಕಾರಣಗಳಿಗಾಗಿ ಪದೇ ಪದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವುದು ದುರದೃಷ್ಟವೇ ಸರಿ.
ಇತ್ತೀಚೆಗಷ್ಟೇ ಕಸ ಮಾಲಿನ್ಯಕ್ಕಾಗಿ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದ ಪತ್ರಿಕೆಯಲ್ಲಿ ಗುರುತಿಸಲ್ಪಟ್ಟಿತು. ಇದೀಗ, ಪತ್ರಕರ್ತರ ಮೇಲಿನ ದೌರ್ಜನ್ಯಕ್ಕಾಗಿ ಗುರುತಿಸಲ್ಪಡುತ್ತಿದೆ.ಪತ್ರಕರ್ತರ ಧ್ವನಿಯನ್ನು ಹತ್ತಿಕ್ಕುವ, ಅವರನ್ನು ಕ್ರಿಮಿನಲ್‌ಗಳಾಗಿ ಬಿಂಬಿಸಿ ಜೈಲಿಗೆ ತಳ್ಳುವ ವಾತಾವರಣದಿಂದಾಗಿ ರಾಜ್ಯದಲ್ಲಿ ಪರೋಕ್ಷ ತುರ್ತುಪರಿಸ್ಥಿತಿಯ ಹೇರಿಕೆಯಾಗಿದೆ. ಸರಕಾರ ಶಾಹಿನಾರ ವಿಷಯದಲ್ಲಿ, ಹಾಗೆಯೇ ನನ್ ಸೂರಿಂಜೆ ಪ್ರಕರಣದಲ್ಲಿ ತನ್ನ ಕಳಂಕವನ್ನು ತಕ್ಷಣ ತೊಳೆದುಕೊಳ್ಳಬೇಕು. ಪತ್ರಕರ್ತರ ಜೊತೆಗೆ ಜನರೂ ನಿರಾಳವಾಗಿ ಉಸಿರಾಡುವಂತಹ ವಾತಾವರಣ ಸೃಷ್ಟಿಯಾಗಬೇಕಾಗಿದೆ.

No comments:

Post a Comment