Saturday, January 12, 2013

ಸೌದಿ: ಮೊದಲ ಬಾರಿ ‘ಶೂರಾ’ಗೆ ಮಹಿಳಾ ಸದಸ್ಯರ ನೇಮಕ


ಸೌದಿ: ಮೊದಲ ಬಾರಿ ‘ಶೂರಾ’ಗೆ ಮಹಿಳಾ ಸದಸ್ಯರ ನೇಮಕ

 


 ಜನವರಿ -13-2013

ರಿಯಾದ್: ಸೌದಿ ಸರಕಾರದ ಅತ್ಯುನ್ನತ ಸಮಾಲೋಚನಾ ಸಮಿತಿಯಾಗಿರುವ ಶೂರಾ ಸಮಿತಿಗೆ ಮೊದಲ ಬಾರಿಗೆ ಮಹಿಳಾ ಸದಸ್ಯರನ್ನು ನೇಮಿಸಲಾಗಿದೆ. 150 ಸದಸ್ಯ ಬಲದ ಸಲಹಾ ಸಮಿತಿಗೆ 30 ಮಂದಿ ಮಹಿಳೆಯರನ್ನು ಸೌದಿಯ ದೊರೆ ಅಬ್ದುಲ್ಲಾ ಬಿನ್ ಅಬ್ದುಲ್ಲಝೀಝ್ ಹೆಸರಿಸಿದ್ದಾರೆ. ದೊರೆಯ ಕ್ರಮವನ್ನು ಸ್ವಾಗತಿಸಿರುವ ಮಹಿಳಾ ಹಕ್ಕು ಕಾರ್ಯಕರ್ತರು, ಸೌದಿ ಅರೇಬಿಯದಲ್ಲಿ ಮಹಿಳೆಯ ಸ್ಥಿತಿಗತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಇನ್ನೂ ಅನೇಕ ಸುಧಾರಣಾ ಕ್ರಮಗಳು ಜಾರಿಗೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.
ಶೂರಾ ಸಮಿತಿಯಲ್ಲಿ ಶೇಕಡ 20ರಷ್ಟು ಮಹಿಳಾ ಪ್ರಾತಿನಿಧ್ಯ ಇರಬೇಕೆಂದು ಈ ಹಿಂದೆ ಸೌದಿ ದೊರೆ ಹೊರ ಡಿಸಿದ್ದ ಘೋಷಣೆಯ ನಿಟ್ಟಿನಲ್ಲಿ ಈ ಬೆಳವಣಿಗೆ ಕಂಡು ಬಂದಿದೆ. ಶೂರಾ ಸಮಿತಿಯು ಕಾನೂನಿನ ಪರಿಶೀಲನೆ ನಡೆಸುವುದಲ್ಲದೆ, ಸಚಿವ ರನ್ನು ಪ್ರಶ್ನಿಸುವ ಕೆಲಸ ವನ್ನೂ ನಿರ್ವಹಿಸುತ್ತದೆ.
ಆದರೆ ಅದಕ್ಕೆ ಕಾನೂನನ್ನು ರೂಪಿಸುವ ಅಧಿಕಾರ ವಿರುವುದಿಲ್ಲ. ಈ ಸಮಿತಿಯ ಎಲ್ಲ ಸದಸ್ಯರು ದೊರೆಯಿಂದ ನೇಮಿಸಲ್ಪಟ್ಟು ಪ್ರತಿಯೋರ್ವರು ನಾಲ್ಕುವರ್ಷಗಳ ಅಧಿಕಾರಾವಧಿ ಹೊಂದಿರುತ್ತಾರೆ. ರಾಜಮನೆತನದ ಘೋಷಣೆಯ ಪ್ರಕಾರ ಮಹಿಳಾ ಸದಸ್ಯರು ಇಸ್ಲಾಮಿಕ್ ಕಾನೂನನ್ನು ಪಾಲಿಸಬೇಕಾಗುತ್ತದೆ ಮತ್ತು ಸಮಿತಿಯಲ್ಲಿ ಸಂಪೂರ್ಣ ಹಕ್ಕುಗಳನ್ನು ಅನುಭವಿಸಲಿದ್ದಾರೆ.
ಮಹಿಳಾ ಸದಸ್ಯರು ಸಮಿತಿಯ ಕಚೇರಿಗೆ ಪ್ರತ್ಯೇಕ ಪ್ರವೇಶದ್ವಾರದಿಂದ ಆಗಮಿಸಿ, ಪುರುಷರಿಂದ ಪ್ರತ್ಯೇಕವಾಗಿ ವ್ಯವಸ್ಥೆ ಗೊಳಿಸಲಾಗಿರುವ ಸ್ಥಳದಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. 2005ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ದೊರೆ ಅಬ್ದುಲ್ಲಾರು, ಸೌದಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಹಕ್ಕುಗಳನ್ನು ನೀಡುವಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.

No comments:

Post a Comment