Wednesday, January 16, 2013

ಲೋಕಾಯುಕ್ತ ನೇಮಕ ಇನ್ನೂ ವಿಳಂಬ ಬೇಡ ಜನವರಿ -16-2013

ಲೋಕಾಯುಕ್ತ ಎಂಬ ಸಂಸ್ಥೆಯ ಬಗ್ಗೆ ಭಾರತೀಯ ಜನತಾ ಪಕ್ಷಕ್ಕೆ ಏನೋ ಒಂದು ವಿಧದ ಅಲರ್ಜಿ. ಬಿಜೆಪಿ ಅಧಿಕಾರದಲ್ಲಿರುವ ಗುಜರಾತ್‌ನಲ್ಲಿ ಲೋಕಾಯುಕ್ತ ನೇಮಕ ವಿಚಾರ ಸುಪ್ರೀಂ ಕೋರ್ಟ್‌ವರೆಗೂ ಹೋಗಿದೆ. ಆದರೆ ಅಲ್ಲಿ ನರೇಂದ್ರ ಮೋದಿಗೆ ಮಂಗಳಾರತಿ ಆಯಿತು. ಲೋಕಾಯುಕ್ತರನ್ನು ನೇಮಕ ಮಾಡಿದ್ದ ಆ ರಾಜ್ಯದ ರಾಜ್ಯಪಾಲರ ಕ್ರಮವನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿಯಿತು.  ಕರ್ನಾಟಕದಲ್ಲಿ ಇರುವುದು ಬಿಜೆಪಿ ಸರಕಾರ.  ಇಲ್ಲೂ ಅದೇ ಗೋಳು. ಸಂತೋಷ್ ಹೆಗ್ಡೆಯವರ ಅಧಿಕಾರಾವಧಿ ಮುಗಿದ ನಂತರ ಹೊಸ ಲೋಕಾಯುಕ್ತರ ನೇಮಕವಾಗಲಿಲ್ಲ. ಈ ನಡುವೆ ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ  ನಿವೃತ್ತ ನ್ಯಾಯಮೂರ್ತಿ ಕೆ.ಚಂದ್ರಶೇಖರಯ್ಯ ನವರನ್ನು ಉಪ ಲೋಕಾಯುಕ್ತರನ್ನಾಗಿ ನೇಮಕ ಮಾಡಿದರು. ರಾಜ್ಯ ಹೈಕೋರ್ಟ್ ಅದನ್ನು ಅನೂರ್ಜಿತಗೊಳಿಸಿತು. ಹೈಕೋರ್ಟ್‌ನ ಈ ತೀರ್ಪನ್ನು ಸುಪ್ರೀಂ ಕೋರ್ಟ್ ಇದೀಗ ಎತ್ತಿ ಹಿಡಿದಿದೆ.ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದಾಗಿ ಲೋಕಾಯುಕ್ತರ ನೇಮಕಕ್ಕೆ ಇದ್ದ  ಕಾನೂನಿನ ಅಡ್ಡಿ ನಿವಾರಣೆಯಾದಂತಾಗಿದೆ.
ಖುದ್ದಾಗಿ ಹೊಸ ಲೋಕಾಯಕ್ತರ ನೇಮಕ ಆಗಬೇಕಾಗಿದೆ. ಆದರೆ ವಿಧಾನಸಭೆ ಚುನಾವಣೆ ಹತ್ತಿರದಲ್ಲಿರುವುದರಿಂದ ಈ ನೇಮಕ ಮಾಡಲು ಬಿಜೆಪಿ ಸರಕಾರ ಹಿಂದೇಟು ಹಾಕುತ್ತಿದೆ ಎಂಬ ರೀತಿಯಲ್ಲಿ ಅದು ನಡೆದುಕೊಳ್ಳುತ್ತಿದೆ. ಲೋಕಾಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ. ಅಲ್ಲಿಂದ ತೀರ್ಪು ಹೊರಬಿದ್ದ ನಂತರ ನೇಮಕ ಮಾಡುತ್ತೇವೆ ಎಂದು  ನೆಪ ಹೇಳುತ್ತಾ ಬಂದ ಬಿಜೆಪಿ ಸರಕಾರಕ್ಕೆ ಈಗ ಬೇರೆ ದಾರಿ ಉಳಿದಿಲ್ಲ. ಸುಪ್ರೀಂ ಕೋರ್ಟ್ ತೀರ್ಪು ಬಂದಿದೆ.
ಆದ್ದರಿಂದ ಒಂದೂವರೆ ವರ್ಷದಿಂದ ತೆರವಾಗಿ ರುವ ಲೋಕಾಯುಕ್ತ ಸಂಸ್ಥೆಗೆ ಮುಖ್ಯಸ್ಥರನ್ನು ನೇಮಕ ಮಾಡಲೇಬೇಕಾಗಿದೆ. ನೇಮಕ ಮಾಡದಿದ್ದರೆ ಲೋಕಾಯುಕ್ತ ಸಂಸ್ಥೆಯೇ ಈ ಸರಕಾರಕ್ಕೆ ಬೇಕಾಗಿಲ್ಲ ಎಂಬ ಸಂದೇಶವನ್ನು ಜನರಿಗೆ ನೀಡಿದಂತಾಗುತ್ತದೆ. ಹಿಂದಿನ ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ನೀಡಿದ ವರದಿಯಿಂದಾಗಿ ಬಿಜೆಪಿ ಮುಖ್ಯಮಂತ್ರಿ ಸಹಿತ ಕೆಲ ಮಂತ್ರಿಗಳು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಬಂದರು.
ಗಣಿ ಹಗರಣದಲ್ಲಿ ಇನ್ನೊಬ್ಬ ಮಾಜಿ ಮಂತ್ರಿ ಜನಾರ್ದನ ರೆಡ್ಡಿ ಹೈದರಾಬಾದಿನ ಚಂಚಲ ಗುಡ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಲೋಕಾಯುಕ್ತದಲ್ಲಿ ಸಿ.ಟಿ.ರವಿ ಸೇರಿದಂತೆ ಇನ್ನೂ ಕೆಲ ಬಿಜೆಪಿ ಮಂತ್ರಿಗಳ ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. ಇಂತಹ ಸನ್ನಿವೇಶದಲ್ಲಿ ಸರಕಾರ ಲೋಕಾಯುಕ್ತರ ನೇಮಕದಲ್ಲಿ ವಿಳಂಬ ಮಾಡಿದರೆ ಗುಜರಾತ್ ನಲ್ಲಿ ಆದಂತೆ ರಾಜ್ಯಪಾಲರ ಮಧ್ಯಪ್ರವೇಶ ಅನಿವಾರ್ಯವಾಗುತ್ತದೆ.
ಲೋಕಾಯುಕ್ತರ ನೇಮಕಕ್ಕೆ ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಒಂದೊಮ್ಮೆ ಚುನಾವಣಾ ನೀತಿ ಸಂಹಿತೆ ಜಾರಿಯಾದರೆ ಸರಕಾರಕ್ಕೆ ಯಾವುದೇ ಸಂವಿಧಾನಾತ್ಮಕ ಹುದ್ದೆಗಳಿಗೆ ನೇಮಕ ಮಾಡಲು ಅವಕಾಶ ಸಿಗುವುದಿಲ್ಲ. ಇದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಗೊತ್ತಿದೆ. ಅವರು ವಿಳಂಬ ಮಾಡುವುದಿಲ್ಲವೆಂದು ಹೇಳಿದ್ದಾರೆ. ಆದರೆ ಬರೀ ಬಾಯಿಮಾತೇ ಆಗದೆ ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಲೋಕಾಯುಕ್ತರ ಸಂಸ್ಥೆಯಲ್ಲಿ ಈಗ 10 ಸಾವಿರ ಪ್ರಕರಣಗಳು ಬಾಕಿ ಉಳಿದಿವೆ. 
ಹಳೆಯ 3381 ದೂರುಗಳು ಕ್ರಮಕೈಗೊಳ್ಳದೆ ಉಳಿದಿವೆ. ಕಳೆದ ಒಂದೂವರೆ ವರ್ಷದಲ್ಲಿ ಎರಡು ಸಾವಿರಕ್ಕೂ ಹೆಚ್ಚು ದೂರುಗಳು ಬಂದಿವೆ. ಎಲ್ಲ ದೂರುಗಳ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳುವುದು ಸಾಧ್ಯವಿಲ್ಲ. ಕೆಲ ದೂರುಗಳನ್ನು ಅಧಿಕಾರಿಗಳು  ಬಗೆಹರಿಸುವ ಅವಕಾಶವಿದೆ. ಕೆಲ ಮಹತ್ವದ ನಿರ್ಧಾರಗಳ ಬಗ್ಗೆ ಲೋಕಾಯುಕ್ತರೇ ತೀರ್ಮಾನ ಕೈಗೊಳ್ಳಬೇಕಾಗುತ್ತದೆ.
2010ರಲ್ಲಿ ಲೋಕಾಯುಕ್ತ ಕಾಯ್ದೆಗೆ ತಂದಿ ರುವ ತಿದ್ದುಪಡಿ ಪ್ರಕಾರ ಲೋಕಾಯುಕ್ತರು ಇಲ್ಲದಿದ್ದರೆ ಉಪಲೋಕಾಯುಕ್ತರು, ಉಪ ಲೋಕಾಯುಕ್ತರು  ಇಲ್ಲದಿದ್ದರೆ ಲೋಕಾ ಯುಕ್ತರು ಒಬ್ಬರ ಕೆಲಸವನ್ನು ಇನ್ನೊಬ್ಬರು ಮಾಡಿಕೊಂಡು ಹೋಗಲು ಅಧಿಕಾರ ನೀಡಲಾಗಿದೆ. ಆದರೆ ಉಪಲೋಕಾಯುಕ್ತರಿಗೆ ತಮ್ಮ ವ್ಯಾಪ್ತಿಯ ಕಾರ್ಯಭಾರವೇ ಸಾಕಷ್ಟಿದೆ. ಅದಕ್ಕಾಗಿ ಪ್ರಕರಣ ತ್ವರಿತ ವಿಲೇವಾರಿಗೆ ತುರ್ತಾಗಿ ಹೊಸ ಲೋಕಾಯುಕ್ತರ ನೇಮಕ ಆಗಬೇಕಾಗಿದೆ.
ಹೊಸ ಲೋಕಾಯುಕ್ತರ ಮತ್ತು ಉಪ ಲೋಕಾಯುಕ್ತರ ನೇಮಕಕ್ಕೆ ರಾಜ್ಯಪಾಲರಿಗೆ ಶಿಫಾರಸು ಮಾಡುವ ಸಾಂವಿಧಾನಿಕ ಅಧಿಕಾರ ಮುಖ್ಯಮಂತ್ರಿಯವರಿಗಿದೆ. ಆದರೆ ಅವರೊಬ್ಬರೇ ಅದನ್ನು ಮಾಡುವಂತಿಲ್ಲ.ಹೈಕೋರ್ಟ್ ಮುಖ್ಯನ್ಯಾಯಾಧೀಶರನ್ನು ಒಳಗೊಂಡು ಕೆಲವರ ಜೊತೆ ಸೇರಿ ಚರ್ಚೆ ಮಾಡಬೇಕಾಗುತ್ತದೆ. ಚರ್ಚಿಸಿದ ನಂತರ ರಾಜ್ಯಪಾಲರಿಗೆ ಶಿಫಾರಸು ಮಾಡಬೇಕಾಗುತ್ತದೆ. ಉಪಲೋಕಾಯುಕ್ತರ ಹುದ್ದೆಗೆ ಹೆಸರುಗಳನ್ನು ಶಿಫಾರಸು ಮಾಡುವ ಅಂತಿಮ ಹೊಣೆ ಮುಖ್ಯ ಮಂತ್ರಿಯದ್ದಾಗಿದೆ.
ಆದ್ದರಿಂದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸುಮ್ಮನೆ ಕಾಲಹರಣ ಮಾಡಬಾರದು.  ಮುಂಬರುವ ಚುನಾವಣೆಯಲ್ಲಿ ಜನತೆಯ ಮುಂದೆ ಹೋಗುವಾಗ ಬೇರೆ ಸಾಧನೆಯನ್ನು ಮಾಡದಿದ್ದರೂ ಲೋಕಾಯುಕ್ತರ ನೇಮಕ ವನ್ನಾದರೂ ತಾನು ಮಾಡಿದ್ದು ಎಂದು ಹೇಳಿಕೊಳ್ಳುವ ಅವಕಾಶವನ್ನು ಅವರು ತಪ್ಪಿಸಿಕೊಳ್ಳಬಾರದು.
ಬಿಜೆಪಿ ಸರಕಾರ ನಾನಾ ಹಗರಣಗಳಲ್ಲಿ ಸಿಲುಕಿ ಒದ್ದಾಡುತ್ತಿದೆ. ಇಂತಹ ಸಂದರ್ಭದಲ್ಲಿ ಲೋಕಾಯುಕ್ತರಂಥ ಸಂಸ್ಥೆ ಕ್ರಿಯಾಶೀಲವಾಗಿರುವುದು ರಾಜಕೀಯ ಕಾರಣಕ್ಕಾಗಿ ಅದಕ್ಕೆ ಬೇಕಾಗಿರಲಿಕ್ಕಿಲ್ಲ. ಆದರೆ ಪ್ರಜಾಪ್ರಭುತ್ವದಲ್ಲಿ ಸಂವಿಧಾನಾತ್ಮಕ ಸಂಸ್ಥೆಗಳನ್ನು ನಿಷ್ಕ್ರಿಯ ಗೊಳಿಸುತ್ತಾ ಹೋದರೆ ಅದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಮರೆಯ ಬಾರದು.

No comments:

Post a Comment