Monday, January 14, 2013

ಆರ್‌ಟಿಐ ಕಾರ್ಯಕರ್ತರ ಜೀವ ಬಲು ಅಗ್ಗ ಜನವರಿ -14-2013

  ಹುಶಃ ಆರ್‌ಟಿಐ ಕಾನೂನನ್ನು ಬಗ್ಗು ಬಡಿಯಲು ಬಲಾಢ್ಯರು ಸುಲಭ ದಾರಿಯನ್ನು ಆರಿಸಿಕೊಂಡಿದ್ದಾರೆ. ಅವರು ಕಾನೂನಿನ ವಿರುದ್ಧವೋ, ಅಧಿಕಾರಿಗಳ ವಿರುದ್ಧವೋ ಧ್ವನಿಯೆತ್ತದೆ, ತಮ್ಮ ಬಗ್ಗೆ ಮಾಹಿತಿಯನ್ನು ನೀಡಿದ ಆರ್‌ಟಿಐ ಕಾರ್ಯಕರ್ತರನ್ನೇ ಕೊಂದು ಹಾಕುವ ಮೂಲಕ, ಇಡೀ ಕಾನೂನನ್ನು ನಿರ್ಯಗೊಳಿಸುವ ತಂತ್ರವನ್ನು ಹೂಡಿದ್ದಾರೆ. ಈ ಕಾರಣದಿಂದಲೇ ದೇಶಾದ್ಯಂತ ಆರ್‌ಟಿಐ ಕಾರ್ಯಕರ್ತರ ಜೀವಗಳು ಅಗ್ಗವಾಗಿ ಬಿಟ್ಟಿವೆ. ಎಲ್ಲೋ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶದಂತಹ ರಾಜ್ಯದಲ್ಲಿ ನಡೆಯುವ ಬರ್ಬರ ಕೊಲೆಗಳು ಇದೀಗ ಕರ್ನಾಟಕದಲ್ಲೂ ಘಟಿಸತೊಡಗಿವೆ. ಭ್ರಷ್ಟಾಚಾರ ಎಲ್ಲೆ ಮೀರಿದಂತೆ ಜನರ ಬಾಯಿ ಮುಚ್ಚಿಸುವುದಕ್ಕೆ ರಾಜಕಾರಣಿಗಳು, ಶ್ರೀಮಂತ ಕುಳಗಳು ಸಾಮ, ಭೇದ, ದಾನ, ದಂಡದಂತಹ ಪ್ರಯೋಗಗಳನ್ನು ಮಾಡುತ್ತಿವೆ. ಇದರ ಪರಿಣಾಮವಾಗಿಯೇ ಉಡುಪಿಯಲ್ಲೂ ಒಬ್ಬ ಆರ್‌ಟಿಐ ಕಾರ್ಯಕರ್ತನ ಕಗ್ಗೊಲೆಯಾಗಿದೆ. ಕಳೆದ ಸೋಮವಾರ ರಾತ್ರಿ ವಂಡಾರು-ಗೋಳಿಯಂಗಡಿ ಪರಿಸರದಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಅಪಹರಣಕ್ಕೊಳಗಾಗಿದ್ದ  ವಾಸುದೇವ ಅಡಿಗ ಎಂಬವರ ಶವ ಚಿಕ್ಕಮಗಳೂರಿನ ಕಡೂರು ತಾಲೂಕಿನ ಮದಗದಕೆರೆಯಲ್ಲಿ ಪತ್ತೆಯಾಗಿದೆ.
ಬಹುಶಃ ಬೆಂಗಳೂರಿನಲ್ಲಿ ಪತ್ರಕರ್ತನೊಬ್ಬನ ಕೊಲೆ ಯಾದ ಬಳಿಕ, ರಾಜ್ಯದಲ್ಲಿ ನಡೆದ ಇನ್ನೊಂದು ಬರ್ಬರ ಹತ್ಯೆ ಇದಾಗಿದೆ. ಯಾವುದೇ ಆರ್‌ಟಿಐ ಕಾರ್ಯಕರ್ತರ ಹತ್ಯೆ ಪ್ರಕರಣವನ್ನು ತೆಗೆದುಕೊಳ್ಳಿ. ದುಷ್ಕರ್ಮಿಗಳ ಹೆಜ್ಜೆಯ ಜಾಡನ್ನು ಅರಸುತ್ತಾ ಹೋದ ಹಾಗೆ ಅದು ಯಾವುದೋ ರಾಜಕಾರಣಿಗಳ ಮನೆಯಂಗಳಕ್ಕೆ ನಮ್ಮನ್ನು ತಲುಪಿಸಿ ಬಿಡುತ್ತದೆ. ದೇಶದ ಹತ್ತು ಹಲವು ಆರ್‌ಟಿಐ ಕಾರ್ಯಕರ್ತರ ಹತ್ಯೆಗಳಲ್ಲಿ ರಾಜಕಾರಣಿಗಳ ಪಾತ್ರ ವಿರುವುದು ಈಗಾಗಲೇ ಪ್ರಾಥಮಿಕ ತನಿಖೆಗಳಿಂದ ಬಹಿರಂಗವಾಗಿದೆ. 
ಬೆಂಗಳೂರಿನಲ್ಲಿ ನಡೆದ ಪತ್ರಕರ್ತನ ಹತ್ಯೆಯ ತನಿಖೆ ನಡೆದಂತೆಯೇ, ಅದರ ಹಿಂದೆ ಇದ್ದ ರಾಜಕೀಯ ಶಕ್ತಿ ಯಾರು ಎನ್ನುವುದು ಹೊರ ಬಿತ್ತು. ದುರದೃಷ್ಟವಶಾತ್ ಈ ತನಿಖೆಯನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡಿರಲೇ ಇಲ್ಲ. ಯಾವಾಗ ನ್ಯಾಯಾಲಯ ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ಸ್ವೀಕರಿಸಿ, ತನಿಖೆಗೆ ಆದೇಶ ನೀಡಿತೋ ಅಲ್ಲಿಂದ ನಿಜ ಸಂಗತಿಗಳು ಒಂದೊಂದಾಗಿ ಹೊರ ಬೀಳತೊಡಗಿದವು. ಮನಪಾದ ಜನಪ್ರತಿನಿಧಿಯೊಬ್ಬರು ಬಂಧನಕ್ಕೊಳಗಾದರು. ಲೋಕಾಯುಕ್ತ ದಾಳಿಯಲ್ಲಿ ಈ ಆರ್‌ಟಿಐ ಕಾರ್ಯಕರ್ತನ ಕೈವಾಡವಿದ್ದುದ ರಿಂದ ಅವನನ್ನು ಬರ್ಬರವಾಗಿ ಕೊಂದು ಹಾಕಲಾಗಿತ್ತು.
ಇಂದು ನಮ್ಮ ಪೊಲೀಸ್ ಇಲಾಖೆ, ಲೋಕಾಯುಕ್ತ ಒಂದಿಷ್ಟು ಚುರುಕಾಗಿರುವುದು ಆರ್‌ಟಿಐ ಕಾರ್ಯಕರ್ತರು ಚುರುಕಾಗಿರುವುದರಿಂದ. ಅವರು ನೀಡುವ ಅಪಾರ ಮಾಹಿತಿಯೇ, ಭ್ರಷ್ಟಾಚಾರದ ವಿರುದ್ಧ ಅಧಿಕಾರಿಗಳಿಗೆ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿದೆ. ಆದುದರಿಂದ, ಭ್ರಷ್ಟರು, ಅಧಿಕಾರಿಗಳ ಬದಲಿಗೆ ಈ ಆರ್‌ಟಿಐ ಕಾರ್ಯಕರ್ತರ ವಿರುದ್ಧವೇ ತಮ್ಮ ಕೆಂಗಣ್ಣು ಬೀರಿದ್ದಾರೆ. ಪೊಲೀಸರನ್ನು, ಅಧಿಕಾರಿಗಳನ್ನು ಎದುರಿಸುವುದಕ್ಕಿಂತ ಇದು ತೀರಾ ಸುಲಭದ ದಾರಿ ಎನ್ನುವುದನ್ನು ಕಂಡುಕೊಂಡಿದ್ದಾರೆ.
ಉಡುಪಿಯ ಅಡಿಗರ ಸಾವಿನ ಹಿಂದೆಯೂ ಭ್ರಷ್ಟರ ಕೈವಾಡ ಇದೆ ಎನ್ನುವುದನ್ನು ಈ ಕಾರಣಕ್ಕಾಗಿಯೇ ಶಂಕಿಸಲಾಗಿದೆ. ಪಕ್ಷವೊಂದರ ಮುಖಂಡರಾಗಿದ್ದರೂ, ವೈಯಕ್ತಿಕವಾಗಿ ವಾಸುದೇವ ಅಡಿಗರು ಸ್ಥಳೀಯವಾಗಿ ಆರ್‌ಟಿಐ ಕಾರ್ಯಕರ್ತ ರಾಗಿಯೇ ಗುರುತಿಸಲ್ಪಟ್ಟಿದ್ದಾರೆ. ಆದುದರಿಂದ ಪೊಲೀಸರು ಈ ಕೊಲೆಯನ್ನು ಗಂಭೀರವಾಗಿ ಸ್ವೀಕರಿಸಬೇಕಾಗಿದೆ. ಈಗಾಗಲೇ ಕಾಂಗ್ರೆಸ್‌ನ ಕೆಲವು ಮುಖಂಡರು, ಈ ಹತ್ಯೆಯಲ್ಲಿ ಬಿಜೆಪಿಯ ಕೈವಾಡವಿದೆ ಎಂದು ಆರೋಪಿಸಿ ದ್ದಾರೆ.  ಅಡಿಗರ ಸಾವನ್ನು ಯಾವ ಕಾರಣಕ್ಕೂ ರಾಜಕೀಯಗೊಳಿಸದೆ ಸತ್ಯಾಸತ್ಯವನ್ನು ಪೊಲೀಸರು ಬಯಲಿಗೆಳೆಯಲು ಪ್ರಯತ್ನಿಸ ಬೇಕು.
ಹತ್ಯೆಗೀಡಾದಾತ ಕಾಂಗ್ರೆಸ್ ಪಕ್ಷದ ಮುಖಂಡ ಎನ್ನುವ ಒಂದೇ ಕಾರಣಕ್ಕೆ ಬಿಜೆಪಿಯ ಮೇಲೆ ಗೂಬೆ ಕೂರಿಸುವುದು ತರವಲ್ಲ. ಅದು ತನಿಖೆಗೆ ತೊಡಕನ್ನು ಉಂಟು ಮಾಡಬಹುದು.ಇದೇ ಸಂದರ್ಭದಲ್ಲಿ ಆರ್‌ಟಿಐ ಕಾರ್ಯ ಕರ್ತರ ಜೀವಕ್ಕೆ ಭದ್ರತೆಯನ್ನು ನೀಡುವುದು ಸರಕಾರದ ಹೊಣೆಯಾಗಿದೆ. ಆರ್‌ಟಿಐ ಕಾರ್ಯಕರ್ತರು ವೈಯಕ್ತಿಕ ಲಾಭಕ್ಕಾಗಿ ಕೆಲಸ ಮಾಡುವವರಲ್ಲ. ಅವರಿಂದ ಸಮಾಜಕ್ಕೆ, ನಾಡಿಗೆ ಪ್ರಯೋಜನವಿದೆ. ಅವರನ್ನು ಬೆದರಿಸಿ, ಹಲ್ಲೆ ನಡೆಸಿ, ಕೊಂದು ಹೋರಾಟಗಾರರ ಬಾಯಿ ಮುಚ್ಚಿಸುವ ಪ್ರವೃತ್ತಿ ನಿಲ್ಲಬೇಕಾಗಿದೆ.
ಅಷ್ಟೇ ಅಲ್ಲ, ಆರ್‌ಟಿಐ ಚಳವಳಿ ಬೆಳೆದು ಜನಚಳವಳಿಯಾಗ ಬೇಕಾಗಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದಕ್ಕೆ ನಮ್ಮಲ್ಲಿ ಉಳಿದಿರುವ ಒಂದೇ ಒಂದು ಭರವಸೆ ಮಾಹಿತಿ ಹಕ್ಕು. ಅದನ್ನೂ ದಮನಿಸಿದರೆ, ಭಷ್ಟಾಚಾರಕ್ಕೆ ಹೆಬ್ಬಾಗಿಲೇ ತೆರೆದಂತಾಗಬಹುದು.ಆದುದರಿಂದ, ಆರ್‌ಟಿಐ ಕಾರ್ಯಕರ್ತರನ್ನು ಹತ್ಯೆ ಮಾಡಿದ ಪ್ರಕರಣಗಳು ಶೀಘ್ರ ತನಿಖೆಗೆ ಒಳಗಾಗಬೇಕು ಮತ್ತು ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು. ಉಳಿದ ಭ್ರಷ್ಟರಿಗೆ ಅದು ಒಂದು ಎಚ್ಚರಿಕೆಯಾಗಬೇಕು.

No comments:

Post a Comment