Thursday, January 10, 2013

ಸೈನಿಕರ ಹತ್ಯಾ ಘಟನೆ: ಪಾಕ್ ರಾಯಭಾರಿಗೆ ಸಮನ್ಸ್;ಪ್ರಬಲ ಪ್ರತಿಭಟನೆ ದಾಖಲು


ಸೈನಿಕರ ಹತ್ಯಾ ಘಟನೆ: ಪಾಕ್ ರಾಯಭಾರಿಗೆ ಸಮನ್ಸ್;ಪ್ರಬಲ ಪ್ರತಿಭಟನೆ ದಾಖಲು
 ಜನವರಿ -10-2013

ಹೊಸದಿಲ್ಲಿ: ಪಾಕಿಸ್ತಾನದ ಯೋಧರು ಗಡಿ ಉಲ್ಲಂಘಿಸಿ ಒಳ ನುಗ್ಗಿ ಇಬ್ಬರು ಭಾರತೀಯ ಯೋಧರನ್ನು ಬರ್ಬರವಾಗಿ ಕೊಂದ ಘಟನೆಯಿಂದ ಆಕ್ರೋಶಗೊಂಡಿರುವ ಭಾರತ ಇಂದು ಪಾಕಿಸ್ತಾನಕ್ಕೆ ತನ್ನ ಪ್ರಬಲ ಪ್ರತಿಭಟನೆ ದಾಖಲಿಸಿದ್ದು, ಇಂತಹ ‘ಅನಂಗೀಕಾರಾರ್ಹ’ ಘಟನೆಗಳು ಉಭಯ ದೇಶಗಳ ಬಾಂಧವ್ಯವನ್ನು ಕೆಡಿಸಬಹುದೆಂಬ ಎಚ್ಚರಿಕೆ ನೀಡಿದೆ. ಘಟನೆಯ ಕುರಿತು ಸರಕಾರ ಹಾಗೂ ರಾಜಕೀಯ ಪಕ್ಷಗಳಿಂದ ಪ್ರಬಲ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಂದು ಭಾರತದಲ್ಲಿನ ಪಾಕಿಸ್ತಾನಿ ರಾಯಭಾರಿ ಸಲ್ಮಾನ್ ಬಶೀರ್‌ರನ್ನು ಕರೆಸಿಕೊಂಡ ವಿದೇಶಾಂಗ ಕಾರ್ಯದರ್ಶಿ ರಂಜನ್ ಮಥಾಯಿ ನಿನ್ನೆಯ ಘಟನೆಯ ಕುರಿತು ಭಾರತದ ‘ತೀವ್ರ ಕಳವಳ ಹಾಗೂ ಪ್ರತಿಭಟನೆ’ಯನ್ನು ವ್ಯಕ್ತಪಡಿಸಿದರು. ಎಲ್ಲ ಅಂತಾರಾಷ್ಟ್ರೀಯ ಶಿಷ್ಟಾಚಾರಗಳಿಗೆ ವಿರುದ್ಧವಾದ ಇಂತಹ ಬರ್ಬರ ಘಟನೆಯ ಕುರಿತು ತನಿಖೆ ನಡೆಸುವಂತೆಯೂ ಭಾರತವು ಪಾಕಿಸ್ತಾನವನ್ನು ಒತ್ತಾಯಿಸಿದ್ದು, ಇಂತಹ ಘಟನೆ ಮರುಕಳಿಸದಂತೆ ಖಚಿತಪಡಿಸಬೇಕೆಂದು ಆಗ್ರಹಿಸಿದೆ.
ಪಾಕಿಸ್ತಾನದ ರಾಯಭಾರಿಯೊಂದಿಗೆ ಕಠಿಣ ಶಬ್ದಗಳಲ್ಲೇ ಮಾತನಾಡಲಾಗಿದೆ ಹಾಗೂ ಘಟನೆಯ ಕುರಿತು ತೀವ್ರ ಕಳವಳ ಹಾಗೂ ಪ್ರತಿಭಟನೆಯನ್ನು ತಿಳಿಸಲಾಗಿದೆಯೆಂದು ವಿದೇಶಾಂಗ ಸಚಿವ ಸಲ್ಮಾನ್ ಖುರ್ಶಿದ್ ತಿಳಿಸಿದ್ದಾರೆ. ಭಾರತದ ಸೇನಾ ಕಾರ್ಯಾಚರಣೆಯ ಮಹಾನಿರ್ದೇಶಕ ಲೆಜವಿನೋದ್ ಭಾಟಿಯಾ, ತನ್ನ ಪಾಕಿಸ್ತಾನಿ ಸೋದ್ಯೋಗಿ ಮೇಜ ಅಶ್ಫಕ್ ನದೀಮ್‌ರೊಂದಿಗೆ ಮಾತನಾಡಿ, ಘಟನೆಯ ಕುರಿತು ದೂರು ನೀಡಿದ್ದಾರೆ.
ಆದರೆ, ಪಾಕಿಸ್ತಾನಿ ಸೈನಿಕರು ಗಡಿದಾಟಿ ಬಂದು ಗುಂಡು ಹಾರಾಟ ನಡೆಸಿ ಇಬ್ಬರು ಯೋಧರನ್ನು ಕೊಂದಿದ್ದಾರೆಂಬ ಭಾರತೀಯ ಸೇನೆಯ ಪ್ರತಿಪಾದನೆಯನ್ನು ನದೀಮ್ ತಳ್ಳಿ ಹಾಕಿದ್ದಾರೆಂದು ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನಿ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ತಿಂಗಳು ಭಾರತ-ಪಾಕಿಸ್ತಾನಗಳ ನಡುವೆ ನಡೆದಿದ್ದ ಪಾರಂಪರಿಕ ಗಡಿ ರಕ್ಷಣೆಯ ಕುರಿತಾದ ಸಭೆಯಲ್ಲಿ ನಿಯಂತ್ರಣ ರೇಖೆಯ ಪಾವಿತ್ರ ಕಾಪಾಡುವ ಮಹತ್ತ್ವದ ವಿಚಾರವಾಗಿಯೂ ಚರ್ಚಿಸಲಾಗಿತ್ತು. ಆದುದರಿಂದ ಪಾಕಿಸ್ತಾನದಿಂದ ನಡೆದಿರುವ ಗಡಿ ಉಲ್ಲಂಘನೆಯು ಅತ್ಯಂತ ಕಳವಳದ ವಿಚಾರವಾಗಿದೆ. ಅಂತಹ ಘಟನೆಗಳನ್ನು ಕ್ರಮೇಣವಾದರೂ ತಡೆಯದಿದ್ದಲ್ಲಿ, ದೀರ್ಘ ಕಾಲದಿಂದ ನಡೆಯುತ್ತಿರುವ ಬಾಂಧವ್ಯ ವೃದ್ಧಿಯ ಪ್ರಯತ್ನದ ಮೇಲೆ ದುಷ್ಪರಿಣಾಮ ಬೀರಬಹುದೆಂದು ಖುರ್ಶಿದ್ ಹೇಳಿದ್ದಾರೆ.
ಘಟನೆಯ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ಎ.ಕೆ.ಆಂಟನಿ, ಪಾಕಿಸ್ತಾನ ಸೇನೆಯ ಈ ಕ್ರಮ ಅತ್ಯಂತ ಪ್ರಚೋದನಕಾರಿಯಾಗಿದೆ. ಅವರು ಭಾರತೀಯ ಯೋಧರ ಮೃತದೇಹಗಳ ಮೇಲೆ ಎಸಗಿರುವ ಕೃತ್ಯ ಅಮಾನುಷವಾದುದು. ತಾವು ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದೇವೆ ಎಂದಿದ್ದಾರೆ. ನಿನ್ನೆ ಜಮ್ಮು-ಕಾಶ್ಮೀರದ ಪೂಂಛ್ ವಲಯದಲ್ಲಿ ನಿಯಂತ್ರಣ ರೇಖೆ ದಾಟಿ ಒಳ ನುಗ್ಗಿದ್ದ ಪಾಕಿಸ್ತಾನಿ ಸೈನಿಕರು ಭಾರತೀಯ ಗಸ್ತು ಯೋಧರಿಬ್ಬರನ್ನು ಕೊಂದು ತಲೆಗಳನ್ನು ಕತ್ತರಿಸಿದ್ದರು

No comments:

Post a Comment