Friday, January 18, 2013

ಸಬ್ಸಿಡಿ ಸಿಲಿಂಡರ್ ಮಿತಿ 9ಕ್ಕೇರಿಕೆ



 ಜನವರಿ -18-2013

*ಡೀಸೆಲ್ ತಾತ್ವಿಕವಾಗಿ ನಿಯಂತ್ರಣ ಮುಕ್ತ ,ಪೆಟ್ರೋಲ್ ಬೆಲೆ 25 ಪೈಸೆ ಇಳಿಕೆ
ಹೊಸದಿಲ್ಲಿ, ಜ.17: ಕೇಂದ್ರ ಸರಕಾರವಿಂದು ಗೃಹ ಬಳಕೆಯ ಸಬ್ಸಿಡಿ ಅಡುಗೆ ಅನಿಲ ಸಿಲಿಂಡರ್‌ಗಳ ಮಿತಿಯನ್ನು ಪ್ರತಿ ಕುಟುಂಬಕ್ಕೆ ವಾರ್ಷಿಕ 9ಕ್ಕೇರಿಸಿದ್ದು, ಡೀಸೆಲ್‌ನ ಬೆಲೆಯನ್ನು ತಾತ್ತ್ವಿಕವಾಗಿ ನಿಯಂತ್ರಣ ಮುಕ್ತಗೊಳಿಸಿದೆ. ಇದರಿಂದಾಗಿ ಮುಂದೆ ಕಾಲಕಾಲಕ್ಕೆ ಡೀಸೆಲ್‌ನ ಬೆಲೆ ಅಲ್ಪ ಪ್ರಮಾಣದಲ್ಲಿ ಏರುತ್ತ ಹೋಗುವ ಸಾಧ್ಯತೆಯಿದ್ದು, ಭಾರತೀಯ ತೈಲ ನಿಗಮವು ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಮೊದಲ ಹಂತದಲ್ಲಿ ಲೀ.ಗೆ 45 ಪೈಸೆಯಷ್ಟು ಏರಿಕೆ ಮಾಡಿದೆ. ಇದೇ ವೇಳೆ ಪೆಟ್ರೋಲ್‌ನ ಬೆಲೆಯನ್ನು ಲೀ.ಗೆ 25 ಪೈಸೆಗಳಷ್ಟು ಇಳಿಸಿದೆ. ಪ್ರಧಾನಿ ಮನಮೋಹನ ಸಿಂಗ್ ನೇತೃತ್ವದ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಯ ಈ ನಿರ್ಧಾರದಿಂದಾಗಿ ಮೊದಲ ಹಂತದಲ್ಲಿ ಡೀಸೆಲ್‌ನ ದರವು ಇಂದು ಮಧ್ಯ ರಾತ್ರಿಯಿಂದಲೇ ರೂ. 1.50ರಿಂದ 2ರಷ್ಟು ಏರಿಕೆಯಾಗುವ ಸಾಧ್ಯತೆಯ ಬಗ್ಗೆ ಶಂಕಿಸಲಾಗಿತ್ತು.
ಆದಾಗ್ಯೂ, ಸಮಿತಿಯು ಎಲ್ಪಿಜಿ ಹಾಗೂ ಸೀಮೆಣ್ಣೆಗಳ ಬೆಲೆಯನ್ನು ಯಥಾ ಸ್ಥಿತಿಯಲ್ಲೇ ಇರಿಸಿದೆ.ಅಡುಗೆ ಅನಿಲ ಸಬ್ಸಿಡಿ ಸಿಲಿಂಡರ್‌ಗಳ ಮಿತಿಯೇರಿಕೆಯ ಬಗ್ಗೆ ಪರಿಶೀಲಿಸಿದ್ದು, ಪ್ರತಿ ಕುಟುಂಬಕ್ಕೆ ವಾರ್ಷಿಕ ಈಗಿರುವ 6 ಸಿಲಿಂಡರ್‌ಗಳಿಂದ 9ಕ್ಕೆ ಏರಿಸಲು ಒಪ್ಪಿದೆಯೆಂದು ತೈಲ ಸಚಿವ ಎಂ.ವೀರಪ್ಪ ಮೊಯ್ಲಿ ಸಭೆಯ ಬಳಿಕ ಪತ್ರಕರ್ತರಿಗೆ ತಿಳಿಸಿದರು. ಡೀಸೆಲ್‌ಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಬೆಲೆ ವಿಮರ್ಶಿಸಲು ತೈಲ ಸಂಸ್ಥೆಗಳಿಗೆ ಅಧಿಕಾರ ನೀಡಲಾಗಿದೆ.
ಅದರ ಬೆಲೆ ಮರುವಿಮರ್ಶೆ ಇಂದಿನಿಂದಲೂ ನಡೆಯಬಹುದೆಂದು ಅವರು ಹೇಳಿದರು.ಆದಾಗ್ಯೂ, ಕೇವಲ ಅಲ್ಪ ಪ್ರಮಾಣದಲ್ಲಿ ಡೀಸೆಲ್ ಬೆಲೆ ತಿದ್ದುಪಡಿಗೆ ತೈಲ ಮಾರಾಟ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆಯೆಂದು ಕೇಂದ್ರ ವಿತ್ತ ಸಚಿವ ಪಿ.ಚಿದಂಬರಂ ಪ್ರತಿಪಾದಿಸಿದರು. ಸಾರ್ವಜನಿಕ ಸಾರಿಗೆ ಹಾಗೂ ಸರಕು ಸಾಗಣೆಗೆ ಹೆಚ್ಚಿನ ಪ್ರಮಾಣದ ಡೀಸೆಲ್ ಬಳಕೆಯಾಗುತ್ತಿರುವುದರಿಂದ ಡೀಸೆಲ್‌ನ ಬೆಲೆಯೇರಿಕೆ ಬಹಳ ಸೂಕ್ಷ್ಮ ವಿಚಾರವಾಗಿದೆ. ಅದರ ಬೆಲೆಯೇರಿಕೆಯಿಂದ ಅಗತ್ಯ ವಸ್ತುಗಳ ಬೆಲೆಯೇರಿಕೆಯ ಭೀತಿ ಸದಾ ಇರುತ್ತದೆ.
ಡೀಸೆಲ್‌ನ ಬೆಲೆಯನ್ನು ಕೊನೆಯ ಬಾರಿ ಕಳೆದ ವರ್ಷ ಸೆ.14ರಂದು ಹೆಚ್ಚಿಸಲಾಗಿತ್ತು. ಆಗ ಬೆಲೆಯನ್ನು ಲೀ.ಗೆ ರೂ.5.63ರಷ್ಟು ಏರಿಸಲಾಗಿತ್ತು. ದಿಲ್ಲಿಯಲ್ಲಿ ಪ್ರಸ್ತುತ ಒಂದು ಲೀಟರ್ ಡೀಸೆಲ್‌ನ ಬೆಲೆ ರೂ. 47.158 ಆಗಿದೆ. ಸಬ್ಸಿಡಿ ಎಲ್ಪಿಜಿಯ 14.5 ಕಿ.ಗ್ರಾಂ. ಸಿಲಿಂಡರ್‌ಗೆ ರೂ. 410.50 ಬೆಲೆಯಿದೆ. ಯಾವುದೇ ಕುಟುಂಬ ಪುನರ್ವಿಮರ್ಶಿತ 9 ಸಿಲಿಂಡರ್‌ಗಳ ಮಿತಿಗಿಂತ ಹೆಚ್ಚು ಅನಿಲ ಬಯಸಿದರೆ ಮಾರುಕಟ್ಟೆ ದರವಾದ ರೂ. 895.50ನ್ನು ನೀಡಬೇಕಾಗುತ್ತದೆ.
ಸರಕಾರವು ಕಳೆದ ಸೆಪ್ಟಂಬರ್‌ನಲ್ಲಿ ಪ್ರತಿ ಕುಟುಂಬಕ್ಕೆ ಸಬ್ಸಿಡಿ ಅನಿಲ ಸಿಲಿಂಡರ್‌ಗಳ ಮಿತಿಯನ್ನು ವಾರ್ಷಿಕ 6ಕ್ಕೆ ಇಳಿಸಿತ್ತು. ಆದರೆ, ಕೇವಲ ಶೇ.44ರಷ್ಟು ಕುಟುಂಬಗಳು ಮಾತ್ರ ವರ್ಷಕ್ಕೆ 6ಕ್ಕಿಂತ ಕಡಿಮೆ ಸಿಲಿಂಡರ್ ಉಪಯೋಗಿಸುವುದರಿಂದ ಈ ಬಗ್ಗೆ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿತ್ತು.
ಇಂದಿನ ನಿರ್ಧಾರದಿಂದಾಗಿ ಬಳಕೆದಾರರಿಗೆ 2013ರ ಮಾರ್ಚ್ ವರೆಗೆ 3ಕ್ಕೆ ಬದಲು 5ಸಿಲಿಂಡರ್‌ಗಳು ಲಭ್ಯವಾಗಲಿವೆ. ಎಪ್ರಿಲ್ 1ರಿಂದ ವರ್ಷಕ್ಕೆ 9ಸಿಲಿಂಡರ್‌ಗಳ ಮಿತಿ ಜಾರಿಗೆ ಬರಲಿದೆ. ಎಲ್ಪಿಜಿ ಹಾಗೂ ಸೀಮೆಣ್ಣೆಯ ದರದಲ್ಲಿ ಯಾವುದೇ ಬದಲಾವಣೆಯಿಲ್ಲವೆಂದು ಮೊಯ್ಲಿ ತಿಳಿಸಿದರು.
ಎಲ್ಪಿಜಿ ಮಿತಿ ಹೆಚ್ಚಳದಿಂದ ಸರಕಾರಕ್ಕೆ ವಾರ್ಷಿಕ ರೂ. 9,300 ಕೋಟಿ ಹೆಚ್ಚುವರಿ ಹೊರ ಬೀಳಲಿದೆ. ಪೆಟ್ರೋಲ್ ಪಂಪ್‌ಗಳು ತ್ವರಿತ ಲಾಭಕ್ಕಾಗಿ ಡೀಸೆಲ್ ಮಾರಾಟ ನಿಲ್ಲಿಸುವುದನ್ನು ತಡೆಯಲು ಸರಕಾರವು ಬೆಲೆ ಹೆಚ್ಚಳದ ಸಮಯ ಮತ್ತು ಪ್ರಮಾಣವನ್ನು ಗುಪ್ತವಾಗಿರಿಸಿದೆ. ಡೀಸೆಲ್ ಬೆಲೆಯೇರಿಕೆಯ ಪ್ರಮಾಣ ಮತ್ತು ಈ ಬದಲಾವಣೆ ಅನ್ವಯವಾಗುವ ಅವಧಿಯ ಕುರಿತು ಚರ್ಚೆ ನಡೆಯುತ್ತಿಲ್ಲ. ಅದನ್ನು ತೈಲ ಸಂಸ್ಥೆಗಳಿಗೆ ಬಿಡಲಾಗಿದೆ ಎಂದು ತೈಲ ಕಾರ್ಯದರ್ಶಿ ಜಿ.ಸಿ.ಚತುರ್ವೇದಿ ತಿಳಿಸಿದರು.
ಆದರೆ, ಸರಕಾರವು ಡೀಸೆಲ್ ಬೆಲೆಯನ್ನು ನಿಯಂತ್ರಣ ಮುಕ್ತಗೊಳಿಸಿಲ್ಲವೆಂದು ಅವರು ಪ್ರತಿಪಾದಿಸಿದರು. ಬೆಲೆ ನಿಯಂತ್ರಣ ಮುಕ್ತಗೊಂಡಲ್ಲಿ ಡೀಸೆಲ್‌ನ ಬೆಲೆ ರೂ. 9.60ರಷ್ಟು ಏರಿಕೆಯಾಗಬಹುದು. ಆದರೆ ಹಾಗಾಗದು. ಕೇವಲ ಅಲ್ಪಪ್ರಮಾಣದ ಏರಿಕೆಯಾಗಬಹುದೆಂದು ಚತುರ್ವೇದಿ ಹೇಳಿದರು.

No comments:

Post a Comment