Saturday, January 19, 2013

ಸಬ್ಸಿಡಿ ರಹಿತ ಅಡುಗೆ ಅನಿಲ ರೂ. 46.50 ತುಟ್ಟಿ


ಸಬ್ಸಿಡಿ ರಹಿತ ಅಡುಗೆ ಅನಿಲ ರೂ. 46.50 ತುಟ್ಟಿ- ಜನವರಿ -19-2013

ಹೊಸದಿಲ್ಲಿ, ಜ.18: ಭಾರೀ ಪ್ರಮಾಣದ ಇಂಧನ ಸಬ್ಸಿಡಿಯನ್ನು ಕಡಿತಗೊಳಿಸುವ ಸುಧಾರಣಾ ಕ್ರಮವೊಂದರಲ್ಲಿ ಸಬ್ಸಿಡಿ ರಹಿತ ಅಡುಗೆ ಅನಿಲದ ಬೆಲೆ ಶುಕ್ರವಾರ ಸಿಲಿಂಡರ್‌ಗೆ ರೂ. 46.50ರಷ್ಟು ಹೆಚ್ಚಾಗಿದೆ. ವಾರ್ಷಿಕ ನಿಗದಿತ 14.2 ಕಿ.ಗ್ರಾಂ.ನ 9 ಸಿಲಿಂಡರ್‌ಗಳ ಮಿತಿಗಿಂತ ಹೆಚ್ಚುವರಿಯಾಗಿ ಬಳಕೆದಾರರು ಖರೀದಿಸುವ ಸಿಲಿಂಡರ್‌ಗೆ ಇನ್ನು ಮುಂದೆ ರೂ. 942 ತೆರಬೇಕಾಗುತ್ತದೆಂದು ಭಾರತೀಯ ತೈಲ ನಿಗಮ ತಿಳಿಸಿದೆ. ತೈಲ ಕಂಪೆನಿಗಳು ಕಳೆದ ಬಾರಿ ನ.1 ರಂದು ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್‌ನ ಬೆಲೆಯನ್ನು ರೂ. 26.50 ರಷ್ಟು ಹೆಚ್ಚಿಸಿದ್ದವು. ಆದರೆ, ವಾರ್ಷಿಕ ಕುಟುಂಬವೊಂದರ 6 ಸಬ್ಸಿಡಿ ಸಿಲಿಂಡರ್‌ಗಳ ನಿಗದಿಯಿಂದ ಜನರಲ್ಲಿ ಉಂಟಾಗಿದ್ದ ಅಸಮಾಧಾನಕ್ಕೆ ಇನ್ನಷ್ಟು ಸೇರಿಸಲು ಸರಕಾರ ಬಯಸದ ಕಾರಣ ಈ ಬೆಲೆಯೇರಿಕೆಯನ್ನು ಕೆಲವೇ ತಾಸುಗಳಲ್ಲಿ ಹಿಂಪಡೆಯಲಾಗಿತ್ತು.ಆದರೆ, ಕುಟುಂಬವೊಂದಕ್ಕೆ ವರ್ಷಕ್ಕೆ ೬ರ ಬದಲು 9 ಸಿಲಿಂಡರ್ ನೀಡುವ ಗುರುವಾರದ ನಿರ್ಧಾರದ ಬಳಿಕ ಸಬ್ಸಿಡಿ ಸಿಲಿಂಡರ್‌ನ ಬೆಲೆಯನ್ನು ರೂ. 410.50ಕ್ಕೇ ನಿಲ್ಲಿಸಿದ್ದರೂ, ಸಬ್ಸಿಡಿ ರಹಿತ ಸಿಲಿಂಡರ್‌ಗಳ ಕ್ರಯವನ್ನು ರೂ. 46.50ರಷ್ಟು ಏರಿಸಲು ಸರಕಾರ ತೀರ್ಮಾನಿಸಿದೆ.
ಇದರಿಂದಾಗಿ 14.2 ಕಿ.ಗ್ರಾಂ. ಸಬ್ಸಿಡಿ ರಹಿತ ಅನಿಲ ಜಾಡಿಗೆ ದಿಲ್ಲಿಯಲ್ಲಿ ರೂ. 949 ತೆರಬೇಕಾಗಿದೆ. ಸರಕಾರವು ಡೀಸೆಲ್‌ನ ಬೆಲೆಯನ್ನು ವಸ್ತುಶಃ ನಿಯಂತ್ರಣಮುಕ್ತಗೊಳಿಸಿದ್ದು, ನಿನ್ನೆ ರಾತ್ರಿಯಿಂದ ಲೀ.ಗೆ 50 ಪೈಸೆಯಷ್ಟು ಏರಿಕೆಯಾಗಿದೆ. ಇನ್ನು ಪ್ರತಿ ತಿಂಗಳು ಡೀಸೆಲ್‌ನ ಬೆಲೆ ಇದೇ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ.ಇದರೊಂದಿಗೆ ರಕ್ಷಣೆ, ರೈಲ್ವೆ ಹಾಗೂ ರಾಜ್ಯ ರಸ್ತೆ ಸಾರಿಗೆಗಳಂತಹ ಸಗಟು ಬಳಕೆ ಸಂಸ್ಥೆಗಳಿಗೆ ಚಿಲ್ಲರೆ ಬೆಲೆಗಿಂತ ರೂ. 10ರಷ್ಟು ಹೆಚ್ಚಾಗಿರುವ ಮಾರುಕಟ್ಟೆ ಬೆಲೆಯಲ್ಲಿ ಡೀಸೆಲ್ ಪೂರೈಸುವ ಮೂಲಕ ವಾರ್ಷಿಕ ರೂ. 12,907 ಕೋಟಿ ಅಂದಾಜು ಸಬ್ಸಿಡಿ ವೊತ್ತವನ್ನು ಉಳಿಸುವ ನಿರ್ಧಾರವನ್ನೂ ಸರಕಾರ ಕೈಗೊಂಡಿದೆ.
ಇದರಿಂದಾಗಿ ಪ್ರಯಾಣ ಹಾಗೂ ಸರಕು ಸಾಗಾಟ ದರ ಏರಿಕೆಯಾಗುವ ಸಾಧ್ಯತೆಯಿದೆ. ಈ ನೋವಿಗೆ ಮುಲಾಮಿನಂತೆ, ಪ್ರಧಾನಿ ನೇತೃತ್ವದ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಸಬ್ಸಿಡಿ ಅನಿಲ ಸಿಲಿಂಡರ್‌ಗಳ ಮಿತಿಯನ್ನು ೬ರಿಂದ ೯ಕ್ಕೆ ಏರಿಸಿದ್ದು, ತೈಲ ಸಂಸ್ಥೆಗಳು ಜಾಗತಿಕ ಕಚ್ಚಾ ತೈಲದ ಬೆಲೆ ಇಳಿಕೆಯನ್ನು ಅನುಲಕ್ಷಿಸಿ ಪೆಟ್ರೋಲ್‌ನ ಬೆಲೆಯನ್ನು ೨೫ ಪೈಸೆಯಷ್ಟು ಇಳಿಸಿವೆ.
ಚಿಲ್ಲರೆ ಹಾಗೂ ಸಗಟು ಬಳಕೆದಾರರಿಗೆ ಡೀಸೆಲ್‌ನ ಬೆಲೆ ಹೆಚ್ಚಳ ಮಾಡಿರುವುದರಿಂದ ವಾರ್ಷಿಕ ರೂ. 15 ಸಾವಿರ ಕೋಟಿ ಹಾಗೂ 2013ರ ಉಳಿದ ಅವಧಿಯಲ್ಲಿ ರೂ. 3,400 ಕೋಟಿ ಸಬ್ಸಿಡಿ ವೊತ್ತ ಉಳಿತಾಯವಾಗಲಿದೆಯೆಂದು ಐಒಸಿ ಅಧ್ಯಕ್ಷ ಆರ್.ಎಸ್. ಬುಟೋಲಾ ತಿಳಿಸಿದ್ದಾರೆ.
ಆದಾಗ್ಯೂ, ಸಬ್ಸಿಡಿ ಅಡುಗೆ ಅನಿಲ ಮಿತಿ ಹೆಚ್ಚಳದಿಂದ ರೂ. 10ಸಾವಿರ ಕೋಟಿ ಹೆಚ್ಚುವರಿ ಹೊರೆ ಬೀಳಲಿದ್ದು ವಾರ್ಷಿಕ ಉಳಿತಾಯ ರೂ. 5 ಸಾವಿರ ಕೋಟಿಗಳಷ್ಟೇ ಆಗಿದೆಯೆಂದು ಅವರು ಹೇಳಿದ್ದಾರೆ. ಗುರುವಾರದ ಈ ನಿರ್ಧಾರಕ್ಕೆ ವೊದಲು ಮಾರುಕಟ್ಟೆ ದರಕ್ಕಿಂತ ಕಡಿಮೆಯಲ್ಲಿ ಇಂಧನ ಮಾರಾಟದಿಂದಾಗಿ ರೂ. 1,56,601ರಷ್ಟು ನಷ್ಟವನ್ನು ಬಿಂಬಿಸಿದ್ದವು. 

No comments:

Post a Comment