Monday, January 14, 2013

ಕೇವಲ ಒಂದೇ ವಿದೇಶಯಾತ್ರೆಗೆ 18.08 ಕೋಟಿ ರೂ. ವ್ಯಯಿಸಿದ್ದ ಪ್ರತಿಭಾ ಪಾಟೀಲ್



- ಜನವರಿ -14-2013

 ಹೊಸದಿಲ್ಲಿ: ಪ್ರತಿಭಾ ಪಾಟೀಲ್ ರಾಷ್ಟ್ರಾಧ್ಯಕ್ಷೆ ಹುದ್ದೆಯನ್ನು ತ್ಯಜಿಸುವುದಕ್ಕೆ ಕೆಲವೇ ದಿನಗಳಿರುವ ಮೊದಲು ಅವರು ನಡೆಸಿದ ವಿದೇಶಯಾತ್ರೆಯೊಂದಕ್ಕೆ 18.08 ಕೋಟಿ ರೂ.ಗಳ ಬಿಲ್ ಪಾವತಿಯಾಗಿತ್ತೆಂಬ ಆರ್‌ಟಿಐ ಮೂಲಕ ಲಭ್ಯವಾದ ಮಾಹಿತಿಯೊಂದು ಬಹಿರಂಗಪಡಿಸಿದೆ.
ಪ್ರತಿಭಾ ಪಾಟೀಲ್ ತನ್ನ ಅಧಿಕಾರಾವಧಿಯಲ್ಲಿ ನಡೆಸಿದ ವಿದೇಶಯಾತ್ರೆಗಾಗಿ ಕೇಂದ್ರದ ಬೊಕ್ಕಸದಿಂದ ಭಾರೀ ಹಣವೆಚ್ಚವಾಗಿರುವ ಬಗ್ಗೆ ಈ ಮೊದಲೇ ಭಾರೀ ವಿವಾದಗಳು ಹೊಗೆಯಾಡುತ್ತಿದ್ದವು.
   
ಪ್ರತಿಭಾ ಪಾಟೀಲ್‌ರವರು ಏರ್‌ಇಂಡಿಯಾ ಬೋಯಿಂಗ್ 747-400 ಜಂಬೋ ವಿಶೇಷ ವಿಮಾನದಲ್ಲಿ ಕಳೆದ ವರ್ಷದ ಎಪ್ರಿಲ್ 29ರಿಂದ ಮೇ 8ರ ತನಕ ದಕ್ಷಿಣ ಆಫ್ರಿಕ ಹಾಗೂ ಸೆಶೆಲ್ಸ್ ದೇಶಗಳಿಗೆ ಕೈಗೊಂಡಿದ್ದ ಪ್ರವಾಸಗಳಿಗಾಗಿಯೇ 16.38 ಕೋಟಿ ರೂ. ವೆಚ್ಚವಾಗಿತ್ತು ಎಂದು ಏರ್‌ಇಂಡಿಯಾ ಬೋಯಿಂಗ್ ಪ್ರಕಟಿಸಿದೆ. ಇದರೊಂದಿಗೆ ದಕ್ಷಿಣ ಆಫ್ರಿಕದ ರಾಜಧಾನಿ ಪ್ರೆಟೋರಿಯ ಭೇಟಿ ವೇಳೆ ಅವರಿಗೆ 1.46 ಕೋಟಿ ರೂ. ವೆಚ್ಚವಾಗಿತ್ತು. ಈ ಪೈಕಿ 71.82 ಲಕ್ಷ ರೂಪಾಯಿಗಳನ್ನು ಅವರಿಗೆ ನಗರದಲ್ಲಿನ ವಾಸ್ತವ್ಯಕ್ಕಾಗಿ ವೆಚ್ಚವಾಗಿತ್ತು. 52.33 ಲಕ್ಷ ರೂ. ಸಾರಿಗೆ ಹಾಗೂ 22.12 ಲಕ್ಷ ರೂ. ಮೊತ್ತದ ಇನ್ನಿತರ ವೆಚ್ಚಗಳಾಗಿದ್ದವು.
 
ಪ್ರತಿಭಾ ಪಾಟೀಲ್‌ರ ಹತ್ತು ದಿನಗಳ ವಿದೇಶ ಪ್ರವಾಸದಲ್ಲಿ ಹೊಟೇಲ್ ವಾಸ್ತವ್ಯಕ್ಕಾಗಿಯೇ 18 ಲಕ್ಷ ರೂ. ಖರ್ಚಾಗಿತ್ತು ಹಾಗೂ 5.27 ಲಕ್ಷ ರೂ. ಸಾರಿಗೆಗಾಗಿ ವ್ಯಯವಾಗಿತ್ತು. ವಸತಿ ವೆಚ್ಚ ಸೇರಿದಂತೆ ಪ್ರತಿಭಾ ಪಾಟೀಲ್‌ರ ದಕ್ಷಿಣ ಆಫ್ರಿಕ ಪ್ರವಾಸದ ವೆಚ್ಚಗಳ ವಿವರಗಳನ್ನು ಪ್ರೆಟೋರಿಯ ಹಾಗೂ ಡರ್ಬಾನ್‌ಗಳಲ್ಲಿನ ಭಾರತೀಯ ದೂತಾವಾಸ ಕಚೇರಿಗಳು ಒದಗಿಸಿದ್ದವು.
   
ರಾಷ್ಟ್ರಾಧ್ಯಕ್ಷೆಯಾದ ಬಳಿಕ ಪ್ರತಿಭಾ ಪಾಟೀಲ್ 12 ಬಾರಿ ವಿದೇಶಿ ಯಾತ್ರೆಗಳನ್ನು ಕೈಗೊಂಡಿದ್ದರು. ನಾಲ್ಕು ಖಂಡಗಳನ್ನೊಳಗೊಂಡಂತೆ ಒಟ್ಟು 22 ರಾಷ್ಟ್ರಗಳ ಅವರ ಭೇಟಿಗಾಗಿ 205 ಕೋಟಿ ರೂ. ವೆಚ್ಚವಾಗಿರುವುದು ಬಹಿರಂಗೊಂಡ ಬಳಿಕ ಭಾರೀ ವಿವಾದ ಹುಟ್ಟಿಕೊಂಡಿತ್ತು. ಕಳೆದ ವರ್ಷದ ಜುಲೈ 25ರಂದು ಅವರ ಅಧಿಕಾರಾವಧಿ ಕೊನೆಗೊಂಡಿತ್ತು.

No comments:

Post a Comment