Thursday, January 24, 2013

ಬಿಜೆಪಿಯ 14ಶಾಸಕರಿಂದ ರಾಜೀನಾಮೆ ಜನವರಿ -24-2013

*ಮುಗಿಯದ ಕಣ್ಣು ಮುಚ್ಚಾಲೆಯಾಟ
ಬೆಂಗಳೂರು, ಜ.23: ಬಿಜೆಪಿ ನೇತೃತ್ವದ ಸರಕಾರದ ಇಬ್ಬರು ಸಚಿವರು ಸೇರಿದಂತೆ ಒಟ್ಟು 14 ಶಾಸಕರು ಬುಧವಾರ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲು ಮುಂದಾಗಿದ್ದು, ಸರಕಾರ ಮತ್ತೆ ಅತಂತ್ರ ಸ್ಥಿತಿಯನ್ನು ಎದುರಿಸುವಂತಾಗಿದೆ. ಯಡಿಯೂರಪ್ಪ ನೇತೃತ್ವದಲ್ಲಿ 14ಮಂದಿ ಶಾಸಕರು ನೇರವಾಗಿ ರಾಜಭವನಕ್ಕೆ ತೆರಳಿ ತಮ್ಮ ಹಸ್ತಾಕ್ಷರಗಳುಳ್ಳ ರಾಜೀನಾಮೆ ಪತ್ರಗಳ ಪ್ರತಿಗಳನ್ನು ರಾಜ್ಯಪಾಲ ಎಚ್.ಆರ್.ಭಾರದ್ವಾಜ್‌ರಿಗೆ ಸಲ್ಲಿಸಿದ್ದಾರೆ.ಬುಧವಾರ ಬೆಳಗ್ಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಸಚಿವರಾಗಿದ್ದ ಶೋಭಾ ಕರಂದ್ಲಾಜೆ, ಸಿ.ಎಂ.ಉದಾಸಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದರು. ಆ ಬಳಿಕ ಉದಾಸಿಯವರ ಮನೆಯಲ್ಲಿ ಸಭೆ ಸೇರಿದ ಬಿಎಸ್‌ವೈ ಆಪ್ತ 14 ಮಂದಿ ಶಾಸಕರು ಮಧ್ಯಾಹ್ನ ವಿಧಾನ ಸಭಾಧ್ಯಕ್ಷರ ಕಚೇರಿಗೆ ಆಗಮಿಸಿದರು.
ಆದರೆ ಕೆಜೆಪಿ ಚಾಪೆಯಡಿಗೆ ನುಸುಳಿದರೆ, ಬಿಜೆಪಿ ರಂಗೋಲಿ ಯಡಿಗೆ ನುಸುಳಿದ್ದು, ಸ್ಪೀಕರ್ ಕೆ.ಜಿ. ಬೋಪಯ್ಯ ಅಲ್ಲಿ ಇರದ ಕಾರಣ ರಾಜೀನಾಮೆಯನ್ನು ಕೇಳುವವರೇ ಇಲ್ಲದಂತಾಯಿತು.
ಇದು ಗೊಂದಲಕ್ಕೂ, ಯಡಿಯೂರಪ್ಪ ಬಣದ ಆಕ್ರೋಶಕ್ಕೂ ಕಾರಣ ವಾಯಿತು.
ಶೋಭಾ ಹಾಗೂ ಉದಾಸಿ ನೇತೃತ್ವದಲ್ಲಿ ತಮ್ಮ ಹಸ್ತಾಕ್ಷರಗಳುಳ್ಳ ರಾಜೀನಾಮೆ ಪತ್ರಗಳನ್ನು ಹಿಡಿದ 14 ಮಂದಿ ಶಾಸಕರು ಅವುಗಳನ್ನು ತೆಗೆದುಕೊಳ್ಳುವಂತೆ ಸ್ಪೀಕರ್ ಕಚೇರಿಯ ಅಧಿಕಾರಿಗಳನ್ನು ಕೋರಿದರು.
 
ಆದರೆ, ಸ್ಪೀಕರ್ ಬೋಪಯ್ಯ ಹಾಗೂ ವಿಧಾನಸಭಾ ಕಾರ್ಯದರ್ಶಿ ಓಂಪ್ರಕಾಶ್ ಕಚೇರಿಯಲ್ಲಿ ಹಾಜರಿರಲಿಲ್ಲ. ಈ ವೇಳೆ ಕಚೇರಿಯಲ್ಲಿದ್ದ ಜಂಟಿ ಕಾರ್ಯದರ್ಶಿ ಜಯತೀರ್ಥ ಪಿ.ಗಲಗಲಿ ರಾಜೀನಾಮೆ ಪತ್ರ ಸ್ವೀಕರಿಸುವ ಅಧಿಕಾರ ತನಗಿಲ್ಲ ಎಂದು ಅವುಗಳನ್ನು ಸ್ವೀಕರಿಸಲು ನಿರಾಕರಿಸಿದರು.ಇದರಿಂದಾಗಿ ರಾಜೀನಾಮೆ ನೀಡಲು ಉತ್ಸಾಹದಿಂದ ಆಗಮಿಸಿದ್ದ ಶಾಸಕರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅಧಿಕಾರಿಯೊಂದಿಗೆ ವಾಗ್ವಾದಕ್ಕೆ ನಿಂತರು.
ರಾಜೀನಾಮೆ ಪತ್ರ ತೆಗೆದುಕೊಳ್ಳಿ, ಇಲ್ಲವಾದರೆ ರಾಜೀನಾಮೆ ಪತ್ರ ತೆಗೆದುಕೊಳ್ಳಲು ಆಗದು ಎಂದು ಹಿಂಬರಹ ನೀಡಿ ಎಂದು ಪಟ್ಟು ಅವರು ಹಿಡಿದರು. ತೀವ್ರ ಇಕ್ಕಟ್ಟಿನಲ್ಲಿ ಸಿಲುಕಿದ ಜಂಟಿ ಕಾರ್ಯದರ್ಶಿ ಜಯತೀರ್ಥ ಗಲಗಲಿ, ರಾಜೀನಾಮೆ ಪತ್ರ ಸ್ವೀಕಾರ ಮಾಡುವ ಅಧಿಕಾರ ತನಗಿಲ್ಲ. ಆದುದರಿಂದ ಸ್ಪೀಕರ್ ಕಚೇರಿಗೆ ಬಂದ ನಂತರ ರಾಜೀನಾಮೆ ಸಲ್ಲಿಸಿ ಎಂದು ಸೂಚಿಸಿದರು. ಇದರಿಂದ ಕೆರಳಿದ ಯಡಿಯೂರಪ್ಪ ವಿಧಾನಸೌಧಕ್ಕೆ ಧಾವಿಸಿ, ಸ್ಪೀಕರ್ ಬೋಪಯ್ಯ ಹಾಗೂ ಜಗದೀಶ್ ಶೆಟ್ಟರ್ ವಿರುದ್ಧ ಕೆಂಡ ಕಾರಿದರು.ಬಳಿಕ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು.
‘ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರಕಾರದ ಮೇಲೆ ವಿಶ್ವಾಸ ಇಲ್ಲದ ಕಾರಣ ತಾವು ಸ್ವಇಚ್ಛೆಯಿಂದ ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಿದ್ದು, ರಾಜೀನಾಮೆ ಅಂಗಿಕರಿಸುವಂತೆ ಸ್ಪೀಕರ್ ಬೋಪಯ್ಯನವರಿಗೆ ಸೂಚನೆ ನೀಡಬೇಕು. ಅಲ್ಲದೆ, ಬಹುಮತ ಕಳೆದುಕೊಂಡಿರುವ ಸರಕಾರದ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ಶಾಸಕರು ರಾಜ್ಯಪಾಲರಿಗೆ ಮನವಿ ಮಾಡಿದರು.
ಸಂಖ್ಯಾಬಲ
 
ಒಟ್ಟು 224 ಸಂಖ್ಯಾಬಲದ ರಾಜ್ಯ ವಿಧಾನಸಭೆ, ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಬಿ.ಎಸ್. ಯಡಿಯೂರಪ್ಪನವರ ರಾಜೀನಾಮೆಯಿಂದ 222ಕ್ಕೆ ಕುಸಿದಿದೆ. ಪ್ರಸ್ತುತ 118 ಬಿಜೆಪಿ, 71 ಕಾಂಗ್ರೆಸ್, 26 ಜೆಡಿಎಸ್, 7ಮಂದಿ ಪಕ್ಷೇತರರು ಹಾಗೂ ಓರ್ವ ನಾಮ ನಿರ್ದೇಶಿತ ಸದಸ್ಯರಿದ್ದಾರೆ.ಯಡಿಯೂರಪ್ಪನವರ ಆಪ್ತರಾದ 14 ಮಂದಿ ಶಾಸಕರು ರಾಜೀನಾಮೆ ನೀಡಿದರೆ ವಿಧಾನಸಭೆಯ ಸಂಖ್ಯಾಬಲ 208ಕ್ಕೆ ಕುಸಿಯಲಿದೆ. ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ರಾಜೀನಾಮೆ ಸಲ್ಲಿಸಿದ 14 ಮಂದಿ ಶಾಸಕರನ್ನು ವಜಾಗೊಳಿಸಿದರೆ ಬಹುಮತಕ್ಕೆ 105 ಶಾಸಕರ ಅಗತ್ಯವಿದೆ.
ಈಗಾಗಲೆ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಸಂಪುಟದಲ್ಲಿ ಸಚಿವರಾಗಿದ್ದು, ಸರಕಾರಕ್ಕೆ ಬೆಂಬಲ ನೀಡುವ ಸಾಧ್ಯತೆ ಹೆಚ್ಚು. ನಾಮ ನಿರ್ದೇಶಿತ ಸದಸ್ಯ ಹಾಗೂ ಸ್ಪೀಕರ್ ಕೂಡ ಸರಕಾರದ ಪರವಾಗಿ ಮತ ಚಲಾಯಿಸಿದರೆ ಶೆಟ್ಟರ್ ಸರಕಾರಕ್ಕೆ ಸುಲಭವಾಗಿ ಬಹುಮತ ದೊರೆಯುವ ಸಾಧ್ಯತೆಯಿದೆ.
ರಾಜೀನಾಮೆ ನೀಡಿದ ಶಾಸಕರು
ಮಾಜಿ ಸಚಿವರಾದ ಶೋಭಾ ಕರಂದ್ಲಾಜೆ, ಸಿ.ಎಂ.ಉದಾಸಿ, ಹಾವೇರಿ ಕ್ಷೇತ್ರದ ಶಾಸಕ ನೆಹರು ಓಲೇಕಾರ್, ಸೊರಬ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ, ರಾಣಿಬೆನ್ನೂರು ಕ್ಷೇತ್ರದ ಶಾಸಕ ಜಿ.ಶಿವಣ್ಣ, ಯಲ್ಲಾಪುರ ಕ್ಷೇತ್ರದ ಶಾಸಕ ವಿ. ಎಸ್.ಪಾಟೀಲ್, ಬ್ಯಾಡಗಿ ಕ್ಷೇತ್ರದ ಶಾಸಕ ಸುರೇಶ್‌ಗೌಡ ವಿ.ಪಾಟೀಲ್, ಹೊಳಲ್ಕೆರೆ ಕ್ಷೇತ್ರದ ಶಾಸಕ ಎಂ.ಚಂದ್ರಪ್ಪ. ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ತಿಪ್ಪಾರೆಡ್ಡಿ, ಕುಂದಗೋಳ ಕ್ಷೇತ್ರದ ಶಾಸಕ ಚಿಕ್ಕಣ್ಣ ಗೌಡರ್, ಬಸವಕಲ್ಯಾಣ ಕ್ಷೇತ್ರದ ಶಾಸಕ ಬಸವರಾಜ್ ಪಾಟೀಲ್ ಅಟ್ಟೂರ್, ಹರಿಹರ ಕ್ಷೇತ್ರದ ಶಾಸಕ ಬಿ.ಪಿ.ಹರೀಶ್, ತರಿಕೆರೆ ಕ್ಷೇತ್ರದ ಶಾಸಕ ಸುರೇಶ್, ಬಿಜಾಪುರ ನಾಗಠಾಣಾ ಕ್ಷೇತ್ರದ ಶಾಸಕ ವಿಠಲ ಕಟಕ ದೊಂಡ.

ಸಾಧ್ಯಾಸಾಧ್ಯತೆ
1.ಹದಿನೈದು ಶಾಸಕರು ರಾಜೀನಾಮೆ ನೀಡಿದರೆ ಬಿಜೆಪಿ ಸಂಖ್ಯಾಬಲ 102ಕ್ಕೆ ಕುಸಿಯಲಿದೆ. ಆಗ ರಾಜ್ಯಪಾಲರು ಬಹುಮತ ಸಾಬೀತುಪಡಿಸಲು ಮುಖ್ಯಮಂತ್ರಿ ಅವರಿಗೆ ಸೂಚಿಸಬಹುದು. ಐವರು ಪಕ್ಷೇತರರು, 26 ಜೆಡಿಎಸ್ ಶಾಸಕರ ಪರೋಕ್ಷ ಬೆಂಬಲ ಪಡೆದು ಅಧಿಕಾರ ಉಳಿಸಿಕೊಳ್ಳಲು ಶೆಟ್ಟರ್ ಕಸರತ್ತು ನಡೆಸಬಹುದು.
2.223 ಬಲದ ವಿಧಾನಸಭೆಯಲ್ಲಿ 15 ಶಾಸಕರ ರಾಜೀನಾಮೆಯಿಂದ ವಿಧಾನಸಭೆ ಬಲ 208ಕ್ಕೆ ಕುಸಿಯಲಿದೆ. ಬಹುಮತ ಸಾಬೀತಿಗೆ 105 ಶಾಸಕರ ಬೆಂಬಲ ಅಗತ್ಯ. ಸ್ಪೀಕರ್, ಪಕ್ಷೇತರ ಸದಸ್ಯ ವರ್ತೂರು ಪ್ರಕಾಶ್ ಜತೆಗೆ ಪಕ್ಷೇತರ ಸದಸ್ಯ ಗೂಳಿಹಟ್ಟಿ ಶೇಖರ್‌ರ ಬೆಂಬಲ ಪಡೆಯಬಹುದು. ಆಗ ಮ್ಯಾಜಿಕ್ ಸಂಖ್ಯೆ ತಲುಪಬಹುದು. ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಮತ ಹಾಕಿದರೂ ಸರಕಾರವನ್ನು ಉಳಿಸಿಕೊಳ್ಳಬಹುದು ಎನ್ನುವ ಲೆಕ್ಕಾಚಾರ ಬಿಜೆಪಿ ಪಾಳಯದಲ್ಲಿದೆ.
3.ಯಡಿಯೂರಪ್ಪ ಬೆಂಬಲಿಗರ ರಾಜೀನಾಮೆಯನ್ನು ಬಜೆಟ್ ಮಂಡನೆವರೆಗೂ ಸ್ಪೀಕರ್ ಅಂಗೀಕರಿಸದೇ ಇರಬಹುದು. ಶ್ರೀರಾಮುಲು ರಾಜೀನಾಮೆ ಅಂಗೀಕಾರವನ್ನು ಒಂದು ತಿಂಗಳು ವಿಳಂಬ ಮಾಡಿದಂತೆ ಸ್ಪೀಕರ್ ನಡೆದುಕೊಂಡರೆ, ಅದು ಶೆಟ್ಟರ್ ಸರಕಾರಕ್ಕೆ ವರದಾನ ಆಗಬಹುದು.
4.ಮೊದಲ ಕಂತಿನ ಶಾಸಕರ ರಾಜೀನಾಮೆಗೆ ಬಿಜೆಪಿ ಪ್ರತಿಕ್ರಿಯೆ ನೋಡಿ ಯಡಿಯೂರಪ್ಪ 2ನೆ ಕಂತಿನಲ್ಲಿ ಹೆಚ್ಚಿನ ಸಂಖ್ಯೆಯ ಶಾಸಕರ ರಾಜೀನಾಮೆ ಕೊಡಿಸಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಹುದು. ಬಹುಮತ ಕೊರತೆಯಿಂದ ಸರಕಾರ ಬಜೆಟ್ ಮಂಡನೆಗೆ ಮುನ್ನವೇ ಪತನಗೊಳ್ಳಬಹುದು.
5.ಬಿಎಸ್‌ವೈ ಬೆಂಬಲಿಗರ ಸಂಖ್ಯಾಬಲ 25 ದಾಟಿದರೆ ಸರಕಾರ ಪತನ ನಿಶ್ಚಿತ. ಸರಕಾರ ಉಳಿಸಿಕೊಳ್ಳಲು ಜೆಡಿಎಸ್ ಜತೆ ರಹಸ್ಯ ಒಪ್ಪಂದ ಏರ್ಪಟ್ಟರೆ ಬಹುಮತ ಸಾಬೀತಿನ ನಿರ್ಣಾಯಕ ಸಂದರ್ಭದಲ್ಲಿ ಜೆಡಿಎಸ್ ಶಾಸಕರು ಸದನದಿಂದ ಹೊರಗುಳಿದು ಜೀವದಾನ ನೀಡಬಹುದು. ಇಲ್ಲವೇ ಅಪವಿತ್ರ ಮೈತ್ರಿಯ ಅಪವಾದ ತಪ್ಪಿಸಿಕೊಳ್ಳಲು ಜೆಡಿಎಸ್ ನಿಶ್ಚಯಿಸಿದರೆ ಸರಕಾರ ಪತನ ತಪ್ಪಿಸುವುದು ಅಸಾಧ್ಯ.

No comments:

Post a Comment