Friday, January 4, 2013

ಅತ್ಯಾಚಾರಿಗಳ ವಿರುದ್ದ ಗೂಂಡಾ ಕಾಯ್ದೆ;ಸಂಕಷ್ಟದಲ್ಲಿರುವ ಮಹಿಳೆಯರ ನೆರವಿಗೆ ಹೆಲ್ಪ್‌ಲೈನ್ 1091 ಆರಂಭ



 ಜನವರಿ -04-2013

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ‘ನಿಮ್ಮ ರಕ್ಷಣೆ ನಮ್ಮ ಹೊಣೆ’ ಎಂಬ ಕಿರುಹೊತ್ತಗೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಅತ್ಯಾಚಾರ, ದೌರ್ಜನ್ಯ ಸೇರಿದಂತೆ ಯಾವುದೇ ರೀತಿಯ ಸಂಕಷ್ಟದಲ್ಲಿರುವ ಮಹಿಳೆಯರು 1091 ಸಂಖ್ಯೆಗೆ ಕರೆ ಮಾಡಿದರೆ, ಪೊಲೀಸ್ ಸಿಬ್ಬಂದಿ ಕೂಡಲೇ ನೆರವಾಗಲಿದ್ದಾರೆ ಎಂದು ತಿಳಿಸಿದರು.
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲೂ ಸೂಕ್ತ ಮಾಹಿತಿ ಒದಗಿಸುವುದು ಅಲ್ಲದೆ, ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಟ್ರಾವೆಲ್ಸ್ ಏಜೆನ್ಸಿಗಳ ಮಾಲಕರು ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಚಾಲಕರ ಮಾಹಿತಿ ಹಾಗೂ ಭಾವಚಿತ್ರಗಳನ್ನು ಠಾಣೆಗೆ ನೀಡಿ ನೋಂದಾವಣೆ ಮಾಡಿಸುವುದು ಕಡ್ಡಾಯ ಎಂದು ಅಶೋಕ್ ಇದೇ ವೇಳೆ ಸೂಚಿಸಿದರು.
ಅಲ್ಲದೆ, ನಗರದಲ್ಲಿನ ಹಾಸ್ಟೆಲ್ ಹಾಗೂ ಪೇಯಿಂಗ್ ಗೆಸ್ಟ್ (ಪಿಜಿ)ಕೇಂದ್ರಗಳು ಕೂಡ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಎಂದು ಸೂಚಿಸಿದ ಅವರು, ನಗರದಲ್ಲಿನ ಐಟಿ ಕಂಪೆನಿಗಳು ತಮ್ಮಲ್ಲಿ ರಾತ್ರಿಪಾಳಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳ ವಿವರ ನೀಡುವುದು ಹಾಗೂ ಅವರಿಗೆ ಒದಗಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಸುವುದು ಕಡ್ಡಾಯ ಎಂದರು.
 
ಒಂದು ತಿಂಗಳಲ್ಲಿ ಈ ಎಲ್ಲ ವ್ಯವಸ್ಥೆಯನ್ನು ಕಂಪೆನಿಗಳು ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಅವುಗಳ ವಿರುದ್ಧ ಕಠಿಣ ಕ್ರಮ ಜರಗಿಸಲಾಗು ವುದು ಎಂದು ಎಚ್ಚರಿಸಿದ ಅಶೋಕ್, ಟ್ರಾವೆಲ್ ಏಜೆನ್ಸಿಗಳಿಂದ ಕಂಪೆನಿಗಳಿಗೆ ನೀಡುವ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಸೇರಿದಂತೆ ಪ್ರತಿಯೊಂದು ವಾಹನಗಳ ಚಾಲಕರು, ಅವರ ಭಾವಚಿತ್ರ ಸಹಿತ ವಿವರ, ಬೆರಳು ಗುರುತು ನೀಡುವುದನ್ನೂ ಕಡ್ಡಾಯ ಮಾಡಲಾಗುವುದು ಎಂದು ಹೇಳಿದರು.
ನಗರದಲ್ಲಿನ ನಿರ್ಜನ ಪ್ರದೇಶಗಳು, ವಿಶ್ವ ವಿದ್ಯಾಲಯ, ಶಾಲಾ-ಕಾಲೇಜುಗಳುಮತ್ತು ಇತರ ಮಹಿಳೆಯರು ಹೆಚ್ಚಾಗಿ ಸಂಚರಿಸುವ ಪ್ರದೇಶಗಳನ್ನು ಗುರುತಿಸಿದ್ದು ವಿಶೇಷ ಗಸ್ತು ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಎಂದ ಅವರು, ಸಾರ್ವಜನಿಕ ಪ್ರದೇಶಗಳು, ಶಾಲಾ- ಕಾಲೇಜು ಆವರಣಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು ಎಂದರು.
ಅತ್ಯಾಚಾರ ಪ್ರಕರಣಗಳ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವುದು ಹಾಗೂ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ವಿಶೇಷ ನ್ಯಾಯಾಲಯ ಸ್ಥಾಪಿಸುವ ಸಂಬಂಧ ಕೇಂದ್ರ ಸರಕಾರ ಎಲ್ಲ ರಾಜ್ಯಗಳ ಡಿಜಿಪಿ ಹಾಗೂ ಮುಖ್ಯಕಾರ್ಯದರ್ಶಿಗಳ ಸಭೆ ಕರೆದಿದ್ದು, ರಾಜ್ಯದ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಅಶೋಕ್ ತಿಳಿಸಿದರು.
ಅತ್ಯಾಚಾರ ಪ್ರಕರಣಗಳ ಸಂಬಂಧ ಸರಕಾರದ ವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರ ಪತ್ರದ ಕುರಿತಂತೆ ಪ್ರತಿಕ್ರಿಯಿಸಿದ ಅಶೋಕ್, ಅವರೊಬ್ಬ ಮಹಿಳೆಯಾಗಿ ಪತ್ರ ಬರೆದಿರುವುದ್ಲು ತಪ್ಪಿಲ್ಲ. ನನಗೆ ಆ ಪತ್ರ ಇನ್ನೂ ತಲುಪಿಲ್ಲ ಎಂದು ನುಣುಚಿಕೊಂಡರು.
ಪೊಲೀಸ್ ಇಲಾಖೆಯನ್ನು ಮತ್ತಷ್ಟು ಸದೃಢಗೊಳಿಸಲು ಶೀಘ್ರದಲ್ಲಿ ಮೂರು ಸಾವಿರ ಮಂದಿ ಪೊಲೀಸ್ ಕಾನ್ಸ್‌ಸ್ಟೇಬಲ್‌ಗಳನ್ನು ನಿಯೋಜನೆ ಮಾಡಿಕೊಳ್ಳಲಾಗುವುದು ಎಂದ ಅಶೋಕ್, ಒಂಟಿ ಮಹಿಳೆಯರು ಅಪರಿಚಿತ ವ್ಯಕ್ತಿಗಳೊಂದಿಗೆ ಯಾವುದೇ ರೀತಿಯಲ್ಲಿ ವ್ಯವಹರಿಸಬಾರದು ಎಂದು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಲಾಲ್ ರುಖುಮ್ ಪಚಾವೋ, ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ, ಹೆಚ್ಚುವರಿ ಆಯುಕ್ತರಾದ ಸುನೀಲ್ ಕುಮಾರ್, ಎಂ.ಎ.ಸಲೀಂ, ಜಂಟಿ ಪೊಲೀಸ್ ಆಯುಕ್ತರಾದ ದಯಾನಂದ್, ಪ್ರಣವ್ ಮೊಹಾಂತಿ ಉಪಸ್ಥಿತರಿದ್ದಾರೆ.

No comments:

Post a Comment