Tuesday, January 1, 2013

ಕಡಬದ ‘108’ ಆ್ಯಂಬುಲೆನ್ಸ್ ಎತ್ತಂಗಡಿ, ಜನರ ಆಕ್ರೋಶ: ಪ್ರತಿಭಟನೆಗೆ ಸಿದ್ಧ್ದತೆ


 ಜನವರಿ -01-2013

ಕಡಬ. ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿದ್ದ ‘108’ ಆರೋಗ್ಯ ರಕ್ಷಾ ಕವಚವನ್ನು ಏಕಾಏಕಿ ಬೆಂಗಳೂರಿಗೆ ಸ್ಥಳಾಂತರಿಸಲಾಗಿದ್ದು, ಈಗಾಗಲೇ ಈ ಭಾಗದ ಜನತೆ ಆಕ್ರೋಶಗೊಂಡಿದ್ದು, ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದ್ದಾರೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಸರಕಾರ ಬಹುತೇಕ ಆರೋಗ್ಯ ಕೇಂದ್ರಗಳಿಗೆ ‘108’ ಆರೋಗ್ಯ ರಕ್ಷಾ ವಾಹನದ ವ್ಯವಸ್ಥೆಯನ್ನು ಮಾಡಿದೆ. ದಿನವಹಿ ಬಹುಜನರಿಗೆ ಉಪಯೋಗ ಇರುವ ಈ ವಾಹನವನ್ನು ಕಡಬ ದಿಂದ ಎತ್ತಂಗಡಿ ಮಾಡಿದ್ದು ಇಲ್ಲಿಯ ಜನತೆಯನ್ನು ಆಕ್ರೋಶಿತರನ್ನಾಗಿ ಮಾಡಿದೆ.

 ಶನಿವಾರ ‘108’ನ್ನು ಏಕಾಏಕಿ ಹಿಂದಕ್ಕೆ ಪಡೆದು ಇಲ್ಲಿನ ರೋಗಿಗಳು ಬೇರೆ ವಾಹವನ್ನು ಪಡೆಯುವಂತಾಗಿದೆ. ಇಲ್ಲಿ ಏನಿಲ್ಲವೆಂದರೂ ತಿಂಗಳಿಗೆ 50ಕ್ಕಿಂತಲೂ ಹೆಚ್ಚು ರೋಗಿಗಳಿಗೆ ಉಪಯೋಗವಾಗುತ್ತಿದ್ದ ಈ ವಾಹನ ಈಗ ಇಲ್ಲದಂತಾಗಿ ಜನತೆ ಪರದಾಡುವಂತಾಗಿದೆ. ಕಡಬ, ಕಲ್ಲುಗುಡ್ಡೆ, ನೂಜಿಬಾಳ್ತಿಲ, ಕೋಡಿಂಬಾಳ, ಬಲ್ಯ, ಹೊಸಮಠ, ಕುಟ್ರುಪ್ಪಾಡಿ, ಮೊದಲಾದ ಪ್ರದೇಶಗಳ ವ್ಯಾಪ್ತಿಯನ್ನು ಹೊಂದಿರುವ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೀರಾ ಅಗತ್ಯವಾಗಿದ್ದ ಈ ವಾಹನವನ್ನು ಎತ್ತಂಗಡಿ ಮಾಡಿರುವುದರಿಂದ ಸಹಜವಾಗಿಯೇ ಇಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೇರೆ ಆರೋಗ್ಯ ಕೇಂದ್ರಗಳಿಗೆ ಹೋಲಿಸಿದರೆ ಇಲ್ಲಿ ಅತೀ ಹೆಚ್ಚು ಜನ ಇಲ್ಲಿನ ‘108’ ವಾಹನಗಳನ್ನು ಬಳಸುತ್ತಿದ್ದಾರೆ. ವಾಹನವನ್ನು ತಾತ್ಕಾಲಿಕ ನೆಲೆಯಲ್ಲಿ ಹಿಂದಕ್ಕೆ ಪಡೆಯಲಾಗಿದ್ದು, ಕೆಲವು ದಿನಗಳ ಬಳಿಕ ವಾಪಸು ಕಳಿಸಲಾಗುವುದು ಎನ್ನುವ ಮಾತು ಅಧಿಕಾರಿ ವರ್ಗದಿಂದ ಕೇಳಿ ಬಂದರೂ ಸಾರ್ವಜನಿಕರ ಒತ್ತಡ ಇಲ್ಲದಿದ್ದರೆ ಶಾಶ್ವತವಾಗಿ ‘108’ ಕಡಬಕ್ಕೆ ಇಲ್ಲದಂತಾಗುತ್ತದೆ ಎನ್ನುವ ಆತಂಕ ಇಲ್ಲಿನ ಜನರಲ್ಲಿ ಮೂಡಿದ್ದು, ಈ ಬಗ್ಗೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸುತ್ತಿವೆ.
ತಹಶೀಲ್ದಾರ್‌ಗೆ ದೂರು-ಹನೀಫ್ ಕೆ.ಎಂ.
ಕಡಬದ 108 ಆರೋಗ್ಯ ಸುರಕ್ಷಾ ವಾಹನವನ್ನು ಯಾವುದೇ ಮುನ್ಸೂಚನೆ ನೀಡದೆ ಹಿಂದಕ್ಕೆ ಪಡೆದಿರುವುದು ಖಂಡನೀಯ. ಗ್ರಾಮಾಂತರ ಪ್ರದೇಶವಾದ, ಅದರಲ್ಲೂ ಸುಮಾರು 9 ಗ್ರಾಮಗಳನ್ನೊಳಗೊಂಡು ಕಾರ್ಯಾಚರಿಸುತ್ತಿದ್ದ ಈ ವಾಹನವನ್ನು ಸ್ಥಳಾಂತರಿಸಿರುವುದರ ಬಗ್ಗೆ ಈಗಾಗಲೇ ತಹಶೀಲ್ದಾರ್‌ರ ಗಮನಕ್ಕೆ ತರಲಾಗಿದೆ. ಹಲವು ರೋಗಿಗಳ ಪಾಲಿಗೆ ಆಶಾಕಿರಣವಾಗಿದ್ದ ಆರೋಗ್ಯ ರಕ್ಷಾ ವಾಹನವನ್ನು ಕೂಡಲೇ ಕಡಬಕ್ಕೆ ನಿಯೋಜಿಸದಿದ್ದರೆ ಈ ಬಗ್ಗೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕಡಬ ಗ್ರಾ.ಪಂ. ಅಧ್ಯಕ್ಷ ಹನೀಫ್ ಕೆ.ಎಂ. ತಿಳಿಸಿದ್ದಾರೆ.

No comments:

Post a Comment