Monday, December 31, 2012

ದೇಶವನ್ನೇ ಬೆಚ್ಚಿಬೀಳಿಸಿದದಿಲ್ಲಿ ಗ್ಯಾಂಗ್ ರೇಪ್ Dec -31-2013

ದೆೀಶದ ರಾಜಧಾನಿ ಹೊಸದಿಲ್ಲಿಯಲ್ಲಿ ಡಿ. 16ರ ರಾತ್ರಿ ಚಲಿಸುತ್ತಿದ್ದ ಬಸ್‌ನಲ್ಲಿ 23 ವರ್ಷದ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಒಬ್ಬ ಅಪ್ರಾಪ್ತ ವಯಸ್ಕ ಬಾಲಕ ಸೇರಿದಂತೆ ಆರು ಜನರು ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಆಕೆಯ ಜತೆಗಿದ್ದ ಸ್ನೇಹಿತನನ್ನು ಥಳಿಸಿ ಬಸ್‌ನಿಂದ ಹೊರಗೆಸೆದ ಪ್ರಕರಣ ಇಡೀ ದೇಶವನ್ನೇ ಒಂದುಗೂಡಿಸಿತು.
 ಸಂತ್ರಸ್ತ ವಿದ್ಯಾರ್ಥಿನಿ ಇಲ್ಲಿನ ಸಫ್ತರ್ ಜಂಗ್ ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟ ನಡೆಸುತ್ತಿದ್ದರೆ, ಘೋರ ಪ್ರಕರಣವನ್ನು ಖಂಡಿಸಿ ದೇಶಾದ್ಯಂತ ಯುವಜನತೆ ರಸ್ತೆಗಿಳಿದು ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಒತ್ತಾಯಿಸಿತು.
ದಿಲ್ಲಿಯ ಇಂಡಿಯಾ ಗೇಟ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದರಿಂದ ಪೊಲೀಸರು ಅಶ್ರುವಾಯು ಮತ್ತು ಜಲ ಫಿರಂಗಿಯನ್ನು ಪ್ರಯೋಗಿಸಬೇಕಾಯಿತು. ಈ ಸಂದರ್ಭದಲ್ಲಿ ಗಾಯಗೊಂಡಿದ್ದ ಪೇದೆ ಆನಂತರ ಮೃತಪಟ್ಟಿದ್ದು ಕೂಡಾ ದೊಡ್ಡ ಸುದ್ದಿಯಾಯಿತು.
ಆದರೆ ಪ್ರತಿಭಟನೆಯ ಕಾವು ಹೆಚ್ಚಾದಂತೆ ಆಕೆಯನ್ನು ಸಿಂಗಾಪುರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಆಕೆ ಕೊನೆಯುಸಿರೆಳೆದಳು.
ನಿರ್ಭಯಾ, ದಾಮಿನಿ ಮತ್ತು ಅಮಾನತ್ ಮುಂತಾದ ಹೊಸರಿನಿಂದ ಕರೆಯಲ್ಪಡುತ್ತಿರುವ ಯುವತಿ ತನ್ನ ದುರಂತ ಸಾವಿನ ಮೂಲಕ ಇಡೀ ದೇಶವನ್ನು ಒಂದು ಗೂಡಿಸಿದ್ದಾಳೆ. ಅತ್ಯಾಚಾರಿಗಳಿಗೆ ಉಗ್ರ ಶಿಕ್ಷೆಯಾಗಬೇಕು ಎಂಬ ಚರ್ಚೆ ಆ ಮೂಲಕ ನಡೆಯುತ್ತಿದೆ.
ಇದಕ್ಕೂ ಮುನ್ನ ಗುವಾಹತಿಯಲ್ಲಿ ನಡು ರಸ್ತೆಯಲ್ಲಿ ನಡೆದ ಯುವತಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ದೇಶದ ಗಮನ ಸೆಳೆದಿತ್ತು. ಸ್ಥಳೀಯ ಸುದ್ದಿವಾಹಿನಿಯೊಂದರ ವರದಿಗಾರ ಅದರ ಚಿತ್ರೀಕರಣ ಮಾಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದ್ದರಿಂದ ಮುಖ್ಯಮಂತ್ರಿ ತರುಣ್ ಗೊಗೋಯಿ ಸಮಗ್ರ ತನಿಖೆಗೆ ಆದೇಶಿಸಿದ್ದರು. ತ್ವರಿತ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಿಗೆ ಶಿಕ್ಷೆ ವಿಧಿಸಿರುವುದು ಹಲವರಿಗೆ ಸಮಾಧಾನ ತಂದಿದೆ.

No comments:

Post a Comment