Sunday, December 30, 2012

ಅಪ್ರಾಪ್ತ ಬಾಲಕಿಯ ಮೇಲೆ ವಿವಾಹಿತನ ಸತತ ಅತ್ಯಾಚಾರ

DEC-30-2012
ಗುಲ್ಬರ್ಗ: ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ 23 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಸಿಂಗಾಪುರದ ಆಸ್ಪತ್ರೆಯಲ್ಲಿ ಶನಿವಾರ (ಡಿ 29) ಬೆಳಗಿನ ಜಾವ ಮೃತಪಟ್ಟ ವಿಚಾರ ರಾಷ್ಟ್ರ ಮಟ್ಟದಲ್ಲಿ ಪ್ರತಿಭಟನೆ, ಭಾರೀ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಅಪ್ರಾಪ್ತ ಬಾಲಕಿಯ ಮೇಲೆ ವಿವಾಹಿತನೊಬ್ಬ 9 ದಿನಗಳಿಂದ ಅತ್ಯಾಚಾರವೆಸಗಿದ ಘಟನೆ ಜಿಲ್ಲೆಯ ಸೇಡಂ ಪೋಲೀಸ್ ಠಾಣೆಯಿಂದ ವರದಿಯಾಗಿದೆ. 24 ವರ್ಷದ ಸಾಬಣ್ಣ ಪೂಜಾರಿ ಎನ್ನುವ ವ್ಯಕ್ತಿ 15 ವರ್ಷದ ಕೂಲಿ ಕೆಲಸ ಮಾಡುವ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿ ನಾಪತ್ತೆಯಾಗಿದ್ದಾನೆ. ಇದೇ ತಿಂಗಳ 19ನೇ ತಾರೀಕು ಈ ಘಟನೆ ನಡೆದಿದೆ ಹಂದರಕಿ ಗ್ರಾಮದ ಈ ಬಾಲಕಿಯನ್ನು ಕೂಲಿ ಕೆಲಸ ಮಾಡಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಸಾಬಣ್ಣ ಪೂಜಾರಿ ಎನ್ನುವ ಕಾಮುಕ ತನ್ನ ಸ್ವಂತ ಜಿಲ್ಲೆಯಾದ ಯಾದಗಿರಿ ತಾಲೂಕಿಗೆ ಅಪಹರಿಸಿಕೊಂಡು ಹೋಗಿದ್ದಾನೆ. ಅಲ್ಲಿ ಅಜ್ಞಾತ ಸ್ಥಳದಲ್ಲಿ ಈಕೆಯನ್ನು ಗದರಿಸಿ 9 ದಿನಗಳಿಂದ ಸತತ ಅತ್ಯಾಚಾರವೆಸಗಿದ್ದಾನೆ. ಇದಾದ ಎರಡು ದಿನದ ನಂತರ ಅಂದರೆ ಡಿಸೆಂಬರ್ 21ನೇ ತಾರೀಕು ಮಗಳು ನಾಪತ್ತೆಯಾಗಿದ್ದಾಳೆ ಎಂದು ಪೋಷಕರು ಸೇಡಂ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 21ನೇ ತಾರೀಕು ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಪೊಲೀಸರು ಬಾಲಕಿಯನ್ನು ಪತ್ತೆಹಚ್ಚುವಲ್ಲಿ ವಿಫಲರಾಗಿದ್ದಾರೆ. ವಿವಾಹಿತ ಯುವಕನಿಂದ ತಪ್ಪಿಸಿಕೊಂಡು ಬಾಲಕಿ ಶುಕ್ರವಾರ (ಡಿ 28) ಮನೆಗೆ ಬಂದಾಗಲೇ ಪೋಷಕರಿಗೆ ಮಗಳ ಮೇಲೆ ನಡೆದ ಅತ್ಯಾಚಾರದ ಬಗ್ಗೆ ತಿಳಿದು ಬಂದಿದೆ. ಬಾಲಕಿಯನ್ನು ಈಗ ಗುಲ್ಬರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಒಂದು ಮಗುವಿನ ತಂದೆಯಾಗಿರುವ ಸಾಬಣ್ಣ ಪೂಜಾರಿ ನಾಪತ್ತೆಯಾಗಿದ್ದು ಆತನ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ. ಕಳೆದ ಹದಿನೈದು ದಿನಗಳಲ್ಲಿ ಗುಲ್ಬರ್ಗದಿಂದ ವರದಿಯಾಗುತ್ತಿರುವ ಮೂರನೇ ಅತ್ಯಾಚಾರ ಪ್ರಕರಣವಿದು.

No comments:

Post a Comment