Monday, December 31, 2012

ನಿರ್ಭಯಾಗೆ ಸಲ್ಲಿಸಬೇಕಾದ ಶ್ರದ್ಧಾಂಜಲಿ


 ಡಿಸೆಂಬರ್-31-2012

ಒ ಂದು ವಿಚಿತ್ರ, ನಾಟಕೀಯ ಸನ್ನಿವೇಶಕ್ಕೆ ಈ ದೇಶ ಕಳೆದ ಎರಡು ವಾರ ಸಾಕ್ಷಿಯಾಯಿತು. ಮೊತ್ತ ಮೊದಲ ಬಾರಿಗೆ ಮಹಿಳೆಯ ಮೇಲಿನ ಅತ್ಯಾಚಾರ ದೇಶಾದ್ಯಂತ ಚರ್ಚೆ, ವಿವಾದದ ವಸ್ತುವಾಯಿತು. ರಾಜಕಾರಣಿಗಳನ್ನು, ಸರಕಾರವನ್ನು ತಲ್ಲಣಿಸುವಂತೆ ಮಾಡಿತು. ಒಬ್ಬ ಪೊಲೀಸ್ ಪೇದೆಯ ಸಾವೂ ಸಂಭವಿಸಿತು. ಇದೀಗ ಅತ್ಯಾಚಾರಕ್ಕೊಳಗಾದ ತರುಣಿ ಮೃತಪಟ್ಟಿದ್ದಾಳೆ. ಈ ಹೃದಯವಿದ್ರಾವಕ ಘಟನೆಗೆ ದೇಶ ಸಂವೇದನಾಶೀಲನಂತೆ ಸ್ಪಂದಿಸಿದುಧೂ, ನಿಜಕ್ಕೂ ಈ ದೇಶದ ಕುರಿತಂತೆ ಒಂದು ರೀತಿಯ ಭರವಸೆಯನ್ನು ನಮ್ಮಲ್ಲಿ ಹುಟ್ಟಿಸಿಬಿಟ್ಟಿದೆ. ಯಾಕೆಂದರೆ, ಈ ದೇಶದಲ್ಲಿ ಅತ್ಯಾಚಾರ ನಡೆಯುತ್ತಿರುವುದು ಇದೇ ಮೊದಲಲ್ಲ. ಸಾಮೂಹಿಕ ಅತ್ಯಾಚಾರಗಳು ಈ ದೇಶದ ಚರಿತ್ರೆಯಲ್ಲಿ ಅವಿನಾಭಾವವಾಗಿ ಸೇರಿಕೊಂಡಿವೆ.
ಇಲ್ಲಿ ಅತ್ಯಾಚಾರ, ಮಹಿಳೆಯ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳಿಗೆ ಧಾರ್ಮಿಕ ಘನತೆಯನ್ನು ನೀಡಲಾಗಿರುವುದು ವಿಶೇಷ. ಒಂದೆಡೆ ಹೆಣ್ಣನ್ನು ತಾಯಿ, ದೇವತೆ ಎಂದು ಕರೆಯುತ್ತಲೇ ಆಕೆಯನ್ನು ನಿರಂತರವಾಗಿ ಶೋಷಿಸಿಕೊಂಡು ಬಂದ ‘ಹೆಮ್ಮೆಯ’ ಸಂಸ್ಕೃತಿಯುಳ್ಳ ದೇಶ ನಮ್ಮದು. ಇಲ್ಲಿ ಮೇಲ್ವರ್ಣೀಯರು ಮತ್ತು ಮೇಲ್ವರ್ಗದ ಜನ, ‘ದೇವದಾಸಿ’ ಮಾನ್ಯತೆಯಡಿಯಲ್ಲಿ ಕೆಳವರ್ಗವನ್ನು ಶತಶತಮಾನಗಳಿಂದ ಅತ್ಯಾಚಾರ ಮಾಡಿಕೊಂಡು ಬಂದಿದ್ದಾರೆ. ಕೆಳವರ್ಗದ ಪುರುಷರಿಗೆ ಸಿಕ್ಕಿದ ಸ್ವಾತಂತ್ರವನ್ನೇ ಸಹಿಸಿಕೊಳ್ಳದ ಜನರಿರುವ ದೇಶದಲ್ಲಿ ಮಹಿಳೆ ಸ್ವತಂತ್ರವಾಗಿ, ಪ್ರಬುದ್ಧವಾಗಿ ಬೆಳೆಯುತ್ತಿರುವುದು ಈ ದೇಶ ಆಳದಲ್ಲಿ ಅಸಹನೆಯಿಂದಲೇ ನೋಡುತ್ತಿದೆ. ಆದುದರಿಂದ, ಇಲ್ಲಿ ನಡೆಯುವ ಅತ್ಯಾಚಾರವೆನ್ನುವುದು ಬರೇ ತೀಟೆಯಷ್ಟೇ ಅಲ್ಲ, ಹೆಣ್ಣನ್ನು ದಮನಿಸುವುದಕ್ಕೆ ಬಳಸುತ್ತಿರುವ ಪರ್ಯಾಯ ಅಸ್ತ್ರವೂ ಆಗಿದೆ. ಇಲ್ಲಿನ ಸಮಾಜದ ವ್ಯವಸ್ಥೆಯ ಒಂದು ಭಾಗ ಅತ್ಯಾಚಾರವೆನ್ನುವುದು.
  
ಇಂದು ಅತ್ಯಾಚಾರವನ್ನು ಅತ್ಯಂತ ರೋಷಾವೇಷದಲ್ಲಿ ಖಂಡಿಸುತ್ತಿರುವ ಬಿಜೆಪಿ, ಗುಜರಾತ್ ಹತ್ಯಾಕಾಂಡದಲ್ಲಿ ಸಂಭವಿಸಿದ ಸರಣಿ ಬರ್ಬರ ಅತ್ಯಾಚಾರಗಳಿಗೆ ಹೇಗೆ ಪ್ರತಿಕ್ರಿಯಿಸಿತ್ತು ಎನ್ನುವುದನ್ನು ನಾವೆಲ್ಲ ನೋಡಿದ್ದೇವೆ. ಬಹುಶಃ ದೇಶ ವಿಭಜನೆಯ ಬಳಿಕ ದೇಶ ಕಂಡ ಬರ್ಬರ ಅತ್ಯಾಚಾರಗಳು ಅಲ್ಲಿ ನಡೆದವು. ಅದನ್ನು ಅಲ್ಲಿನ ಮುಖ್ಯಮಂತ್ರಿ ನರೇಂದ್ರ ಮೋದಿ ‘ಹಿಂದುತ್ವದ ಆತ್ಮಾಭಿಮಾನದ ಸಂಕೇತ’ ಎಂದು ಕರೆದು, ಸಕಲ ಹಿಂದೂಗಳನ್ನು ಅವಮಾನಿಸಿದರು. ಬಿಜೆಪಿಯೂ ಅದನ್ನು ಅನುಮೋದಿಸಿತು. ಅಷ್ಟೇ ಅಲ್ಲ, ಇಂದು ಹೊಸದಿಲ್ಲಿಯ ಸಾಮೂಹಿಕ ಅತ್ಯಾಚಾರವನ್ನು ಖಂಡಿಸುತ್ತಿರುವ ದೊಡ್ಡ ಸಂಖ್ಯೆಯ ನಾಗರಿಕರು ಈಗಲೂ ಗುಜರಾತ್ ಹತ್ಯಾಕಾಂಡವನ್ನು, ಅಲ್ಲಿ ನಡೆದ ಮಹಿಳೆಯರ ಮೇಲಿನ ಅತ್ಯಾಚಾರವನ್ನು ಒಳಗೊಳಗೇ ಅನುಮೋದಿಸುತ್ತಾರೆ. ಅತ್ಯಾಚಾರ ನಡೆಸಿದವರು, ಗೂಂಡಾಗಳು, ರೌಡಿಗಳು, ಹುಚ್ಚು ನಾಯಿಗಿಂತ ಕೆಳಮಟ್ಟದ ಮನುಷ್ಯ ಜಂತುಗಳು. ಅವರನ್ನೆಲ್ಲ ‘ಆಕ್ರೋಷಿತ ಹಿಂದೂಗಳು’ ಎಂದು ಈಗಲೂ ಕರೆಯುವುದಕ್ಕೆ ಹಿಂದೆ ಮುಂದೆ ನೋಡುವುದಿಲ್ಲ. ಖೈರ್ಲಾಂಜಿಯಲ್ಲಿ ನಡೆದ ದಲಿತ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರವನ್ನೂ ಪರೋಕ್ಷವಾಗಿ ಈ ಮನಸ್ಥಿತಿಗಳು ಸಮ್ಮತಿಸುತ್ತವೆ. ‘‘ದಲಿತರಿಗೆ ಸೊಕ್ಕು ಜಾಸ್ತಿಯಾಗಿದೆ. ಅವರಿಗೆ ಹಾಗೇ ಆಗಬೇಕು’’ ಎಂದು ಮನದೊಳಗೇ ಅತ್ಯಾಚಾರಕ್ಕೆ ‘ಶಿಕ್ಷೆ’ಯ ಮೊಹರನ್ನು ಒತ್ತುತ್ತಾರೆ. ಇಂತಹ ಮನಸ್ಥಿತಿ ಇದೀಗ ದಿಲ್ಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರವನ್ನು ಶತಾಯುಗತಾಯ ಖಂಡಿಸುತ್ತಿದೆ. ಇದು ಈ ದೇಶದೊಳಗಿನ ವಿಪರ್ಯಾಸ. ಆದರೂ, ಯಾವ ರಾಜಕೀಯ ಕಾರಣಕ್ಕೇ ಇರಲಿ. ಅತ್ಯಾಚಾರದ ಕುರಿತಂತೆ ಒಂದು ಜಾಗೃತಿಯಂತೂ ಮೂಡಿದೆ. ಇದು ಒಂದಿಷ್ಟು ದಿನ ಕಾವು ಕಳೆದುಕೊಳ್ಳದೆ ಇದ್ದರೆ ಅತ್ಯಾಚಾರದ ವಿರುದ್ಧ ಒಂದು ಕಠಿಣ ಕಾನೂನು ಜಾರಿಗೊಳ್ಳಬಹುದು. ಆದರೆ ಈ ಕಾನೂನನ್ನು ಜಾರಿಗೊಳಿಸುವವರು ಪೊಲೀಸರು ಎನ್ನುವುದನ್ನೂ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಯಾಕೆಂದರೆ, ಹೆಣ್ಣು ಮಕ್ಕಳಿಗೆ ಹೇಗೆ ದಿಲ್ಲಿಯಂತಹ ನಗರಗಳು ಅಪಾಯಕಾರಿಯೋ, ಪೊಲೀಸ್ ಠಾಣೆಯೂ ಅಷ್ಟೇ ಅಪಾಯಕಾರಿ. ಇಂದು ಕೆಲವು ಗ್ರಾಮೀಣ ಅಥವಾ ನಗರ ಪ್ರದೇಶದ ಪೊಲೀಸ್ ಠಾಣೆಗೆ ಯಾವುಳೇ ಹೆಣ್ಣು ಮಗಳು ರಾತ್ರಿ ಹತ್ತು ಗಂಟೆಗೆ ಕಾಲಿಡುವಂತಹ ಸನ್ನಿವೇಶ ಇದೆಯೇ ಎನ್ನುವುದನ್ನು ನಮಗೆ ನಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ. ಈ ದೇಶದಲ್ಲಿ ದಲಿತ ದೌರ್ಜನ್ಯ ಕಾನೂನು ಎನ್ನುವುದೊಂದು ಇದೆಯಾದರೂ, ಅದು ಪೊಲೀಸರ ಮೂಲಕವೇ ಅನುಷ್ಠಾನಕ್ಕೆ ಬರುತ್ತಿಲ್ಲ. ಇನ್ನು ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಕಾಯ್ದೆಯನ್ನು ಪಾಲಿಸುತ್ತಾರೆ ಎಂದು ನಂಬುವುದು ತುಸು ಕಷ್ಟವೇ ಸರಿ.
ಕಳೆದ ಏಳು ವರ್ಷಗಳಲ್ಲಿ 45 ಅತ್ಯಾಚಾರಗಳು ನಡೆದಿರುವುದು ಪೊಲೀಸ್ ಠಾಣೆಗಳಲ್ಲಿಯೇ ಎನ್ನುವುದನ್ನು ಒಂದು ಅಂಕಿ ಅಂಶ ಹೇಳುತ್ತದೆ. ಅಂದ ಹಾಗೆ ಇಷ್ಟು ಕಡಿಮೆ ಸಂಖ್ಯೆಯೇ ಎಂದು ಕೇಳಬೇಡಿ. ಹೆಚ್ಚಿನ ಅತ್ಯಾಚಾರ ಪ್ರಕರಣಗಳು ಯಾವುದೇ ಕೇಸು ದಾಖಲಿಸದೆಯೇ ಮುಚ್ಚಿ ಹೋಗುತ್ತವೆ. ಇನ್ನು ಪೊಲೀಸ್ ಕಸ್ಟಡಿಯಲ್ಲಿ ನಡೆದ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುವುದು ಸಾಧ್ಯವೇ? ಕೆಲವೊಮ್ಮೆ ಈ ದೇಶದಲ್ಲಿ ಪವಾಡಗಳು ನಡೆಯುತ್ತವೆ. ಅದರಂತೆ ಬೆಳಕಿಗೆ ಬಂದ 45 ಅತ್ಯಾಚಾರ ಪ್ರಕರಣಗಳನ್ನು ಅಂಕಿಅಂಶ ತೆರೆದಿಡುತ್ತದೆ. ಹೆಚ್ಚಿನ ಅತ್ಯಾಚಾರ ಪ್ರಕರಣಗಳು ಮುಚ್ಚಿ ಹೋಗುವುದೇ ಪೊಲೀಸರ ಕಾರಣದಿಂದ. ಆದುದರಿಂದ ಮೊತ್ತ ಮೊದಲು ಅತ್ಯಾಚಾರದ ಕುರಿತಂತೆ ನಾವು ಪೊಲೀಸರನ್ನು ಜಾಗೃತಿಗೊಳಿಸಬೇಕಾಗಿದೆ. ಮಹಿಳೆಯರೊಂದಿಗೆ ಹೇಗೆ ವರ್ತಿಸಬೇಕು, ಅತ್ಯಾಚಾರಕ್ಕೊಳಗಾದ ಮಹಿಳೆಯರನ್ನು ಹೇಗೆ ಸಂತೈಸಬೇಕು, ಅವರಿಗೆ ಹೇಗೆ ಧೈರ್ಯ ತುಂಬಬೇಕು ಎನ್ನುವುದನ್ನು ಮೊದಲು ಪೊಲೀಸರು ಕಲಿತುಕೊಳ್ಳಬೇಕಾಗಿದೆ. ಹಾಗೆಯೇ ನ್ಯಾಯಾಲಯವೂ ಅತ್ಯಾಚಾರದಂತಹ ಸೂಕ್ಷ್ಮ ಪ್ರಕರಣವನ್ನು ವಿಚಾರಣೆ ನಡೆಸುವಾಗ ಜಾಗ್ರತೆ ವಹಿಸಬೇಕಾಗಿದೆ. ವಕೀಲರಿಗೂ ಇದನ್ನು ಕಲಿಸಬೇಕಾಗಿದೆ. ಆ ಬಳಿಕ ಜನರನ್ನು ಜಾಗೃತಿಗೊಳಿಸಬೇಕು.
ಒಟ್ಟಿನಲ್ಲಿ ಅತ್ಯಾಚಾರದ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸುವುದೇ ನಿರ್ಭಯಾ ಎಂಬ ತರುಣಿಗೆ ನಾವು ಸಲ್ಲಿಸುವ ಶ್ರದ್ಧಾಂಜಲಿ. ಹಾಗೆಯೇ ಈ ಕಾನೂನು ಬರೇ ದಿಲ್ಲಿಯ ವಿದ್ಯಾವಂತ ಮಹಿಳೆಯರ ಮೇಲೆ ನಡೆದ ಅತ್ಯಾಚಾರಕ್ಕಷ್ಟೇ ಸೀಮಿತವಾಗದೆ, ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಮಹಿಳೆಯರಿಗೂ ಅನ್ವಯವಾಗಲಿ. ಎಲ್ಲ ಜಾತಿ, ವರ್ಗಗಳ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ಕುರಿತಂತೆಯೂ ಕಣ್ಣೀರು ಸುರಿಸುವ ಔದಾರ್ಯವನ್ನು ನಮ್ಮ ಸಮಾಜ ಇನ್ನಾದರೂ ಬೆಳೆಸಿಕೊಳ್ಳಬೇಕು.

No comments:

Post a Comment