Monday, December 31, 2012

ಕೆಎಸ್ಸಾರ್ಟಿಸಿ ಬಸ್‌ಸಗಳಲ್ಲಿ ; ಸಿಸಿಟಿವಿ ಕ್ಯಾಮರಾ



- ಡಿಸೆಂಬರ್-31-2012

ಬೆಂಗಳೂರು: ಹೊಸದಿಲ್ಲಿಯಲ್ಲಿ ಯುವತಿಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ರಾಜ್ಯ ಸರಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಆ ಹಿನ್ನೆಲೆಯಲ್ಲಿ ಮಹಿಳೆಯರ ರಕ್ಷಣೆಗೆ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮರಾ ಮತ್ತು ಜಿಪಿಎಸ್ ವ್ಯವಸ್ಥೆಯನ್ನು ಅಳವಡಿಸಲು ಮುಂದಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ರವಿವಾರ ವಿಧಾನಸೌಧದ ಮುಂಭಾಗದಲ್ಲಿ ಬಿಎಂಟಿಸಿಯ ‘ಕೆ’ ಶ್ರೇಣಿಯ ಮೂರು ನಗರ ಸಾರಿಗೆ ಬಸ್ಸುಗಳ ಸೇವೆಯನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ಬಸ್ಸುಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸುವ ಸಂಬಂಧ ಈಗಾಗಲೇ ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಮೊದಲ ಹಂತದಲ್ಲಿ ಒಂದು ಸಾವಿರ ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲು ಚಿಂತನೆ ನಡೆಸಲಾಗಿದೆ ಎಂದರು.
 
ರಾಜ್ಯ ರಸ್ತೆ ಸಾರಿಗೆ ಮತ್ತು ನಗರ ಸಾರಿಗೆ ಬಸ್ಸುಗಳಲ್ಲಿ ಇನ್ನು ಮುಂದೆ ಮಹಿಳೆಯರ ರಕ್ಷಣೆಗಾಗಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಬಸ್ಸುಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆರು ಸಾವಿರ ಬಸ್ಸುಗಳಲ್ಲಿ ಜಿಪಿಎಸ್ ವ್ಯವಸ್ಥೆಯನ್ನು ಅಳವಡಿಸಲಾಗುವುದು. ಬಸ್ಸುಗಳು ಎಲ್ಲಿ ಪ್ರಯಾಣಿಸುತ್ತಿವೆ ಎಂಬುದೂ ಸೇರಿದಂತೆ ಎಲ್ಲ ವಿವರ ನೇರವಾಗಿ ಕಂಟ್ರೋಲ್ ರೂಂಗೆ ರವಾನೆಯಾಗಲಿದೆ ಎಂದು ಅಶೋಕ್ ವಿವರಿಸಿದರು.

ರಾತ್ರಿ ಸಮಯದಲ್ಲಿ ಮಹಿಳಾ ಪ್ರಯಾಣಿಕರು ಕುಳಿತುಕೊಳ್ಳುವ ಕೊಠಡಿಗೆ ಹೆಚ್ಚು ಪ್ರಖರವಾದ ಬೆಳಕಿನ ವ್ಯವಸ್ಥೆ ಮಾಡಲಾಗುವುದು. ಮಹಿಳಾ ಶೌಚಾಲಯಗಳ ಮುಂದೆ ಮಹಿಳಾ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಅವರು ತಿಳಿಸಿದರು. ನಗರ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರ ಆಸನಗಳಲ್ಲಿ ಪುರುಷರು ಕುಳಿತುಕೊಂಡಾಗ ಜಗಳ ಉಂಟಾಗುವುದು ಸಹಜ. ಹಾಗಾಗಿ, ಪುರುಷರು ಮಹಿಳೆಯರ ಆಸನಗಳಲ್ಲಿ ಕುಳಿತುಕೊಂಡಲ್ಲಿ ಬಸ್ ಕಂಡೆಕ್ಟರ್ ಮತ್ತು ಡ್ರೈವರ್ ತಕ್ಷಣವೇ ಪುರುಷರನ್ನು ಎಬ್ಬಿಸಬೇಕು. ಮಹಿಳೆಯರಿಗೆ ಬಸ್ ಹತ್ತ್ತುವಾಗ ಮತ್ತು ಇಳಿಯುವಾಗ ಸಹಾಯ ಮಾಡಬೇಕೆಂದು ಆದೇಶ ನೀಡಲಾಗಿದೆ ಎಂದು ಅಶೋಕ್ ಹೇಳಿದರು.
 
ನಗರ ಪ್ರದೇಶಗಳಲ್ಲಿ ರಾತ್ರಿ ಪಾಳಿಯಲ್ಲಿ ಸೇವೆ ಸಲ್ಲಿಸುವ ಮಹಿಳಾ ಉದ್ಯೋಗಿಗಳಿಗೆ ಹೆಚ್ಚು ಭದ್ರತೆ ನೀಡುವ ಸಂಬಂಧ ಸೂಕ್ತ ಮಾರ್ಗಸೂಚಿಗಳಿರುವ ಸುತ್ತೋಲೆಯನ್ನು ಒಂದೆರೆಡು ದಿನಗಳಲ್ಲಿ ಪೊಲೀಸ್ ಇಲಾಖೆಯಿಂದ ಹೊರಡಿಸಲಾಗುವುದು ಎಂದು ಅವರು ತಿಳಿಸಿದರು.
ಖಾಸಗಿ ಬಸ್‌ಗಳಿಗೂ ಅನ್ವಯ: ಸರಕಾರಿ ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮರಾ ಮತ್ತು ಜಿಪಿಎಸ್ ವ್ಯವಸ್ಥೆ ಅಳವಡಿಸಿದ ಬಳಿಕ ಖಾಸಗಿ ಬಸ್‌ಗಳಲ್ಲೂ ಇದೇ ವ್ಯವಸ್ಥೆಯನ್ನು ಅನುಸರಿಸಬೇಕೆಂದು ಮಾಲಕರ ಮನವೊಲಿಸಲಾಗುವುದು. ಲಾರಿ, ಕಾರು ಮತ್ತು ಗೂಡ್ಸ್ ವಾಹನಗಳಿಗೂ ಕಡ್ಡಾಯವಾಗಿ ಜಿಪಿಎಸ್ ವ್ಯವಸ್ಥೆಯನ್ನು ಅಳವಡಿಸುವುದು ಸುರಕ್ಷತಾ ದೃಷ್ಟಿಯಿಂದ ಒಳ್ಳೆಯದು ಎಂದರು.

No comments:

Post a Comment