ಮಂಜೇಶ್ವರ ಟೈಮ್ಸ್
ನಿಮಗೆ ಇಷ್ಟವಾಯಿತೇ

ಹಾಗಾದರೆ, ನಿಮ್ಮ ಸ್ನೇಹಿತರಿಗೂ ಒಂದು ಮಾತು ತಿಳಿಸಲು ಮರೆಯಬೇಡಿ.......

ಆಗಲೇ ನಮ್ಮ ಈ ಪರಿಶ್ರಮ ಸಾರ್ಥಕ !!!

Sunday 26 February 2012

ನಿದ್ದೆ ಮೂಲಭೂತ ಹಕ್ಕು; ಹಾಳುಗೆಡಹುವುದು ಸಮರ್ಥನೀಯವಲ್ಲ: ಸುಪ್ರೀಂ ಕೋರ್ಟ್

ಫೆಬ್ರವರಿ -26-2012 ಮಂಜೇಶ್ವರ್ ಟೈಮ್ಸ್

ಹೊಸದಿಲ್ಲಿ:ನಿದ್ದೆಯಲ್ಲಿದ್ದ ವನನ್ನು ಕಾನೂನು ಬಾಹಿರವಾಗಿ ಎಬ್ಬಿಸುವುದು, ಆ ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿ ದಂತೆ ಎಂದು ಸುಪ್ರೀಂ ಕೋರ್ಟ್ ತೀರ್ಪೊಂದರಲ್ಲಿ ತಿಳಿಸಲಾಗಿದೆ. ಯೋಗ ಗುರು ಬಾಬಾ ರಾಮ್‌ದೇವ್‌ರ ಬೆಂಬಲಿಗರ ವಿರುದ್ಧ ಕಾರ್ಯಾಚರಣೆ ನಡೆಸಿರುವ ದಿಲ್ಲಿ ಪೊಲೀಸರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತ ಪಡಿಸಿರುವ ಸುಪ್ರೀಂ ಕೋರ್ಟ್ ಈ ಕುರಿತ ತೀರ್ಪಿನಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

‘‘ನಿದ್ದೆಯನ್ನು ಕಸಿದುಕೊಳ್ಳುವುದರಿಂದ ಕೋಲಾಹಲ ಹಾಗೂ ಪ್ರತಿಕೂಲ ಪರಿಣಾಮ ಉಂಟಾಗುವುದು. ಅದು ವ್ಯಕ್ತಿಯ ದೈಹಿಕ ಸ್ಥಿತಿಯಲ್ಲಿನ ಶಾಂತಿ ಮತ್ತು ಸಹಜತೆಗೆ ಧಕ್ಕೆಯುಂಟು ಮಾಡುವುದು ಹಾಗೂ ಅದು ಕೆರಳುವಿಕೆಗೆ ಕಾರಣವಾಗುವುದು. ಮಾನವ ಗುಣಗಳಲ್ಲಿ, ತಲೆತಲಾಂತರಗಳಿಂದ ಬಂದ ನೈಸರ್ಗಿಕ ಪ್ರಕ್ರಿಯೆಗಳಿಗೆ ಧಕ್ಕೆಯಾದಲ್ಲಿ, ಅದು ಸಹಜವಾಗಿಯೇ ಜೀವನದ ಮೂಲ ತತ್ವದ ಮೇಲೆ ಪರಿಣಾಮ ಬೀರುವುದು’’ ಎಂದು ಸುಪ್ರೀಂ ಕೋರ್ಟ್‌ಗೆ ತೀರ್ಪಿನಲ್ಲಿ ತಿಳಿಸಲಾಗಿದೆ.

‘‘ನಿದ್ದೆಯಲ್ಲಿದ್ದ ವ್ಯಕ್ತಿಯ ನಿದ್ದೆಯನ್ನು ಹಾಳುಗೆಡವಿದಲ್ಲಿ, ಈ ಪರಿಣಾಮಗಳು ಉಂಟಾಗುತ್ತವೆ ಮತ್ತು ಅದನ್ನು ಹಿಂಸಾತ್ಮಕವೆಂದು ಪರಿಗಣಿಸಬೇಕಾಗುತ್ತದೆ. ಸಾಮಾನ್ಯ ವಿಶ್ರಾಂತಿಯ ಹಕ್ಕನ್ನು ಕಸಿದುಕೊಳ್ಳುವುದು, ಮಾನವ ಹಕ್ಕುಗಳ ಉಲ್ಲಂಘನೆಗೆ ಸಮಾನಾಗುತ್ತದೆ. ಕಾನೂನು ಬಾಹಿರವಾಗಿ, ಉದ್ದೇಶಪೂರ್ವಕವಾಗಿ ಈ ರೀತಿಯ ತೊಂದರೆಯನ್ನುಂಟು ಮಾಡಿದಾಗ ಅದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಮತ್ತು ಅದಕ್ಕೆ ಯಾವುದೇ ಸಮರ್ಥನೆಯೂ ಬೇಕಾಗಿಲ್ಲ’’ ಎಂದು ನ್ಯಾಯಮೂರ್ತಿ ಬಿ.ಎಸ್. ಚೌಹಾಣ್ ತನ್ನ ತೀರ್ಪಿನಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷದ ಜೂನ್ 4-5ರ ಮಧ್ಯರಾತ್ರಿ ರಾಮ್‌ದೇವ್ ಬೆಂಬಲಿಗರ ವಿರುದ್ಧ ಪೊಲೀಸ್ ಕಾರ್ಯಾಚರಣೆ ನಡೆಸಿರುವುದಕ್ಕೆ ಸಂಬಂಧಿಸಿ, ಮಾಧ್ಯಮ ವರದಿಯನ್ನಾಧರಿಸಿ ಸ್ವಯಂಪ್ರೇರಿತ ಕ್ರಮ ಕೈಗೊಂಡಿರುವ ನ್ಯಾಯಮೂರ್ತಿ ಸ್ವತಂತರ್ ಕುಮಾರ್ ಪತ್ತೆ ಹಚ್ಚಿರುವ ಅಂಶಗಳೊಂದಿಗೆ ಸಹಮತ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ಚೌಹಾಣ್, ತನ್ನ ಪ್ರತ್ಯೇಕ ತೀರ್ಪಿನಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಿದ್ದೆಯಲ್ಲಿದ್ದವರ ಮೇಲೆ ಕಾರ್ಯಾಚರಣೆ ನಡೆಸಿರುವ ದಿಲ್ಲಿ ಪೊಲೀಸರ ಕ್ರಮವು ಸಮರ್ಥನೀಯವಾದುದಲ್ಲ ಎಂದು ನ್ಯಾಯಮೂರ್ತಿ ಚೌಹಾಣ್ ತಿಳಿಸಿದ್ದಾರೆ.

‘‘ ಆ ರೀತಿ ಭಾವಿಸಲು ಸಾಕಷ್ಟು ಸಾಕ್ಷಾಧಾರಗಳಿಲ್ಲ ದಾಗ, ನಿದ್ದೆಯಲ್ಲಿರುವವರ ಗುಂಪನ್ನು ಕಾನೂನು ಬಾಹಿರ ಗುಂಪಿಗೆ ಸೇರ್ಪಡೆಗೊಳಿಸಲು ಸಾಧ್ಯವಿಲ್ಲ’’ ಎಂದು ಚೌಹಾಣ್ ತಿಳಿಸಿದ್ದಾರೆ. ‘‘ಪೊಲೀಸ್ ಹಾಗೂ ಆಡಳಿತದ ವರ್ತನೆಯು ಹಿಂಸಾತ್ಮಕ ಗುಣವನ್ನು ಪ್ರದರ್ಶಿಸಿದೆ. ನಾಗರಿಕ ಸಮಾಜದಲ್ಲಿ ಕಾನೂನಿನಲ್ಲಿ ಇದನ್ನು ಸಮರ್ಥಿಸಲಾಗುವುದಿಲ್ಲ’’ ಎಂದು ಅವರು ತಿಳಿಸಿದ್ದಾರೆ.

ನಿದ್ದೆಯಲ್ಲಿರುವಾಗ ಮನುಷ್ಯನ ಮಾನಸಿಕ ವ್ಯವಸ್ಥೆಯು ನಿಷ್ಕ್ರಿಯ ಸ್ಥಿತಿಯಲ್ಲಿರುವುದರಿಂದ, ನಿದ್ದೆಯಲ್ಲಿ ಆತ ‘‘ಅರ್ಧ ಸತ್ತ’’ ಮನುಷ್ಯನಾಗಿರುತ್ತಾನೆ ಎಂದು ನ್ಯಾಯಮೂರ್ತಿ ಚೌಹಾಣ್ ಹೇಳಿದ್ದಾರೆ.

ವಾ.ಭಾ

0 comments:

Post a Comment